ADVERTISEMENT

ವೇಮನರು ಅಪರೂಪದ ಸಮಾಜ ಸುಧಾರಕ: ಸಚಿವ‌ ಶಿವರಾಜ್ ತಂಗಡಗಿ

‘ವೇಮನ ಜಯಂತಿ’

​ಪ್ರಜಾವಾಣಿ ವಾರ್ತೆ
Published 19 ಜನವರಿ 2025, 16:27 IST
Last Updated 19 ಜನವರಿ 2025, 16:27 IST
ಮಹಾಯೋಗಿ ವೇಮನ ಜಯಂತಿಯ ಕಾರ್ಯಕ್ರಮದಲ್ಲಿ ಮಹಾಯೋಗಿ ವೇಮನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣಿ ದೇವಿ ಮಾಲಗತ್ತಿ, ಕರ್ನಾಟಕ ರೆಡ್ಡಿ ಜನ ಸಂಘದ ಅಧ್ಯಕ್ಷ ಎಸ್ ಜಯರಾಮ ರೆಡ್ಡಿ, ಸಚಿವ ಶಿವರಾಜ ತಂಗಡಗಿ, ಎರೆಹೊಸಹಳ್ಳಿಯ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪ್ರಜಾವಾಣಿ ಚಿತ್ರ
ಮಹಾಯೋಗಿ ವೇಮನ ಜಯಂತಿಯ ಕಾರ್ಯಕ್ರಮದಲ್ಲಿ ಮಹಾಯೋಗಿ ವೇಮನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣಿ ದೇವಿ ಮಾಲಗತ್ತಿ, ಕರ್ನಾಟಕ ರೆಡ್ಡಿ ಜನ ಸಂಘದ ಅಧ್ಯಕ್ಷ ಎಸ್ ಜಯರಾಮ ರೆಡ್ಡಿ, ಸಚಿವ ಶಿವರಾಜ ತಂಗಡಗಿ, ಎರೆಹೊಸಹಳ್ಳಿಯ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಕಾರ್ಯಕ್ರಮದಲ್ಲಿ ಹಾಜರಿದ್ದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಜನಸಾಮಾನ್ಯರಂತೆ ಬಾಳಿದ, ನೈಜ ಜನಪರ ಮತ್ತು ಶ್ರೇಷ್ಠ ವ್ಯಕ್ತಿ ವೇಮನರು, ತಮ್ಮ ಕಾವ್ಯದ ಮೂಲಕ ಜಾತೀಯತೆಯಂತಹ ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕಲು ಪ್ರಯತ್ನಿಸಿದ ಅಪರೂಪದ ಸಮಾಜ ಸುಧಾರಕ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಬಣ್ಣಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಂಡವೀಡು ಗ್ರಾಮದಲ್ಲಿ ಜನಿಸಿದ ವೇಮನರು ಆ ಪ್ರಾಂತ್ಯದ ಆಳರಸರ ಸುಕುಮಾರ. ಅಹಮಿಕೆಯನ್ನು ತಲೆಗೇರಿಸಿಕೊಳ್ಳದೆ, ತನ್ನ ಎಲ್ಲ ಸುಖ- ಸಂಪತ್ತನ್ನು ತ್ಯಜಿಸಿ ಸಮಾಜ ಸೇವೆಗೆ ಧಾವಿಸಿದ ಮಹಾನ್ ವ್ಯಕ್ತಿ’ ಎಂದರು.

ADVERTISEMENT

‘ನಮ್ಮ ಕನ್ನಡದ ಸರ್ವಜ್ಞ, ತಮಿಳಿನ ತಿರುವಳ್ಳವರ್ ಅವರಂತೆ ತೆಲುಗಿನಲ್ಲಿ ಜನಸಾಮಾನ್ಯರ ಕವಿ ಎನಿಸಿದವರು ವೇಮನರು. ಇವರು ಕಣ್ಣಿಗೆ ಕಂಡದ್ದನ್ನೆಲ್ಲಾ ಪದ್ಯಗಳನ್ನಾಗಿ ರಚಿಸಿ ಹಾಡುತ್ತಾ ದಾರ್ಶನಿಕರಾದರು. ಸಮಾಜದಲ್ಲಿನ ಅಂಕು ಡೊಂಕುಗಳನ್ನು ಕಂಡು ಮರುಗುತ್ತಾ, ಮೊನಚು ಮಾತುಗಳಿಂದ ಅಲ್ಲಲ್ಲೇ ಅವುಗಳನ್ನು ತಿದ್ದುವ ಪ್ರಯತ್ನ ಮಾಡಿದರು’ ಎಂದು ತಿಳಿಸಿದರು.

‘ಬ್ರಿಟಿಷ್ ಅಧಿಕಾರಿ ಸಿ.ಪಿ.ಬ್ರೌನ್, ಕಿಟೆಲ್ ಅವರು ತೆಲುಗಿನ ವೇಮನ ಪದ್ಯಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ, ಅವರನ್ನು ಜಗತ್ತಿಗೆ ಪರಿಚಯಿಸಿದರು.ಈ ಮೂಲಕ ವೇಮನ ಪದ್ಯಗಳು ಜಗತ್ತಿನಾದ್ಯಂತ ಪ್ರಖ್ಯಾತವಾದವು‘ ಎಂದರು.

‘ನನಗೆ ರೆಡ್ಡಿ ಸಮುದಾಯದೊಂದಿಗೆ ಆತ್ಮೀಯ ಒಡನಾಟವಿದೆ. ರೆಡ್ಡಿ ಎಂದರೇ‌ ಹೆಚ್ಚು ಉದಾರತೆ ಇರುವ ಸಮುದಾಯ. ಈ ಸಮುದಾಯಕ್ಕೆ ಉದಾರತೆ ಜತೆಗೆ ಎಲ್ಲರನ್ನು ಒಟ್ಟಿಗೆ ಕರೆದೊಯ್ಯುವ ಶಕ್ತಿ ಇದೆ‘ ಎಂದು ಸಮುದಾಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ರೆಡ್ಡಿ ಗುರು ಪೀಠದ ವೇಮನಾನಂದ ಸ್ವಾಮೀಜಿ, ‘ಜನರಲ್ಲಿರುವ ಹೊಟ್ಟೆಕಿಚ್ಚು, ಅಸೂಯೆ ಪ್ರವೃತ್ತಿಯಿಂದಾಗಿ ಸಮಾಜದಲ್ಲಿ ದುಃಖ ಹೆಚ್ಚಾಗಿದೆ. ಜನರಲ್ಲಿ ದುಃಖ ಕಡಿಮೆ ಆಗಬೇಕಾದರೆ ಹೊಟ್ಟೆಕಿಚ್ಚನ್ನು ಬಿಡಬೇಕು’ ಎಂದರು

‘ನಾರಾಯಣಗುರು, ವೇಮನ ಮತ್ತು ಹೇಮರಡ್ಡಿ ಮಲ್ಲಮ್ಮ ಕನ್ನಡೇತರ ವ್ಯಕ್ತಿಗಳಾಗಿದ್ದರೂ ಕರ್ನಾಟಕ ಸರ್ಕಾರ ಅವರ ಜಯಂತಿಯನ್ನೂ ಆಚರಿಸುತ್ತಿರುವುದಕ್ಕೆ ಧನ್ಯವಾದ ಸಲ್ಲಿಸುವುದಾಗಿ ಸ್ವಾಮೀಜಿ ಹೇಳಿದರು.

ರಾಜ್ಯಸಭೆಯ ಮಾಜಿ ಸದಸ್ಯ ಕೆ.ಸಿ.ರಾಮಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣಿ ದೇವಿ ಮಾಲಗತ್ತಿ, ಜಂಟಿ ನಿರ್ದೇಶಕ ಬಲವಂತರಾಯ ಪಾಟೀಲ್, ಸಮುದಾಯದ ಅಧ್ಯಕ್ಷ ಜಯರಾಮ ರೆಡ್ಡಿ, ಎನ್.ಶೇಖರ್ ರೆಡ್ಡಿ, ಕಂಚೀವರದಯ್ಯ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.