ADVERTISEMENT

ಆನ್‌ಲೈನ್‌ ಮೂಲಕ ‘ಪಿಸ್ತೂಲ್’ ಖರೀದಿ: ಸಿಸಿಬಿ ದಾಳಿ

ಅಕ್ರಮ ಶಸ್ತ್ರಾಸ್ತ್ರ ಆರೋಪ; ತಬ್ರೇಜ್ ಬಂಧನ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 18:57 IST
Last Updated 14 ಫೆಬ್ರುವರಿ 2020, 18:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸುದ್ದುಗುಂಟೆಪಾಳ್ಯ ಠಾಣೆ ವ್ಯಾಪ್ತಿಯ ಮನೆಯೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಡಿ ತಬ್ರೇಜ್ ಎಂಬಾತನನ್ನು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿ ತಬ್ರೇಜ್‌ ಮನೆಯಲ್ಲಿ ಸಿನಿಮಾ ಚಿತ್ರೀಕರಣ ಹಾಗೂ ಜನರನ್ನು ಬೆದರಿಸಲು ಬಳಸುತ್ತಿದ್ದ 10 ಪಿಸ್ತೂಲ್‌ ಹಾಗೂ 30 ಬಂದೂಕುಗಳು ಸಿಕ್ಕಿವೆ. ಇವುಗಳನ್ನು ಇಟ್ಟುಕೊಳ್ಳಲು ಆರೋಪಿ ಬಳಿ ಯಾವುದೇ ಪರವಾನಗಿ ಪಡೆದಿರಲಿಲ್ಲ’ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಸಿನಿಮಾ ಚಿತ್ರೀಕರಣಕ್ಕೆ ನೈಜ ಶಸ್ತ್ರಾಸ್ತ್ರವನ್ನೇ ಹೋಲುವ ಪಿಸ್ತೂಲ್ ಹಾಗೂ ಬಂದೂಕುಗಳನ್ನು ಆರೋಪಿ ಬಾಡಿಗೆಗೆ ಕೊಡುತ್ತಿದ್ದ. ಆನ್‌ಲೈನ್‌ನಲ್ಲಿ ಮೂಲಕವೇ ಪಿಸ್ತೂಲ್ ಹಾಗೂ ಬಂದೂಕು ತರಿಸುತ್ತಿದ್ದ. ಕೆಲ ಗಣ್ಯರು, ಸಿನಿಮಾ ನಟರು ಹಾಗೂ ಉದ್ಯಮಿಗಳಿಗೂ ಇವುಗಳನ್ನು ಮಾರಾಟ ಮಾಡಿದ್ದ. ಈ ಸಂಬಂಧ ಆತ ಹೇಳಿಕೆ ನೀಡಿದ್ದಾನೆ’ ಎಂದರು.

ADVERTISEMENT

‘ಆರೋಪಿ ಬಳಿ ಪಡೆದ ಪಿಸ್ತೂಲ್ ಬಳಸಿಕೊಂಡು ಕೆಲವರು ಜನರನ್ನು ಹೆದರಿಸಿದ ಘಟನೆಗಳೂ ನಡೆದಿವೆ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಲಾಯಿತು’ ಎಂದು ಅಧಿಕಾರಿ ಹೇಳಿದರು.

‘ಪಿಸ್ತೂಲ್ ಹಾಗೂ ಬಂದೂಕು ಜಪ್ತಿ ಮಾಡಲಾಗಿದ್ದು, ಇದರ ಶೇ 30ರಷ್ಟು ಬಿಡಿಭಾಗಗಳು ಮಾತ್ರ ಅಸಲಿ. ಗುಂಡು ಸಹಿತ ಉಳಿದೆಲ್ಲ ಭಾಗಗಳು ನಕಲಿ ಆಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಆದರೆ, ಇಂಥ ಶಸ್ತ್ರಾಸ್ತ್ರಗಳನ್ನೂ ಹೊಂದಲು ಪರವಾನಗಿ ಬೇಕು’ ಎಂದರು.

‘ಜಪ್ತಿ ಮಾಡಲಾದ ಪಿಸ್ತೂಲ್ ಹಾಗೂ ಬಂದೂಕುಗಳನ್ನುಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಆರೋಪಿಯಿಂದ ಯಾರೆಲ್ಲ ಶಸ್ತ್ರಾಸ್ತ್ರ ಖರೀದಿಸಿದ್ದಾರೆಂಬ ಮಾಹಿತಿ ಕಲೆಹಾಕುತ್ತಿದ್ದೇವೆ. ಅವರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.