ADVERTISEMENT

ಬೆಂಗಳೂರು: ’ಜ್ಞಾನಭಾರತಿ’ಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಒಡಂಬಡಿಕೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 15:23 IST
Last Updated 8 ಏಪ್ರಿಲ್ 2025, 15:23 IST
ಬೆಂಗಳೂರು ವಿಶ್ವವಿದ್ಯಾಲಯದ ಕುಲಚಿವ ಶೇಖ್ ಲತೀಫ್ ಮತ್ತು ಬಿಸ್ಲೆರಿ ಕಂಪನಿಯ ಕೆ. ಗಣೇಶ್ ಸಹಿಯಾದ ಒಡಂಬಡಿಕೆ ಪತ್ರವನ್ನು ಪ್ರದರ್ಶಿಸಿದರು
ಬೆಂಗಳೂರು ವಿಶ್ವವಿದ್ಯಾಲಯದ ಕುಲಚಿವ ಶೇಖ್ ಲತೀಫ್ ಮತ್ತು ಬಿಸ್ಲೆರಿ ಕಂಪನಿಯ ಕೆ. ಗಣೇಶ್ ಸಹಿಯಾದ ಒಡಂಬಡಿಕೆ ಪತ್ರವನ್ನು ಪ್ರದರ್ಶಿಸಿದರು   

ಬೆಂಗಳೂರು: ಜ್ಞಾನಭಾರತಿ ಆವರಣವನ್ನು ಪ್ಲಾಸ್ಟಿಕ್ ಹಾಗೂ ಕಸ ಮುಕ್ತವಾಗಿಸಲು ಬೆಂಗಳೂರು ವಿಶ್ವವಿದ್ಯಾಲಯ ಸಂಕಲ್ಪ ಮಾಡಿದ್ದು, ಈ ಸಂಬಂಧ ಬಿಸ್ಲೆರಿ ಇಂಟರ್‌ನ್ಯಾಷನಲ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

ಬೆಂಗಳೂರು ವಿಶ್ವವಿದ್ಯಾಲಯ ಕುಲಸಚಿವ ಶೇಕ್ ಲತೀಫ್‌ ಮತ್ತು ಬಿಸ್ಲೆರಿ ಇಂಟರ್‌ನ್ಯಾಷನಲ್‌ ಕಂಪನಿಯ ಸುಸ್ಥಿರ ಮತ್ತು ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ ವ್ಯವಹಾರಗಳ ನಿರ್ದೇಶಕ ಕೆ.ಗಣೇಶ್ ಅವರು ಮಂಗಳವಾರ ಈ ಒಡಂಬಡಿಕೆಗೆ ಪರಸ್ಪರ ಸಹಿ ಹಾಕಿದರು. 

‘ಬಿಸ್ಲೆರಿ ಬಾಟಲ್ಸ್ ಫಾರ್ ಚೇಂಜ್’ ಕಾರ್ಯಕ್ರಮದಡಿಯಲ್ಲಿ ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಒಡಂಬಡಿಕೆ ಭಾಗವಾಗಿ ಜ್ಞಾನಭಾರತಿಯ ಆವರಣದ ಪ್ರಮುಖ ಸ್ಥಳ, ಶೈಕ್ಷಣಿಕ ವಿಭಾಗ, ಆಡಳಿತ ಕಟ್ಟಡ, ವಿದ್ಯಾರ್ಥಿ ನಿಲಯಗಳ ಹೊರಗೆ ಕಸದ ಬುಟ್ಟಿಗಳನ್ನು ಅಳವಡಿಸಲಾಗುತ್ತದೆ. ಬಿಸ್ಲೆರಿ ಸಂಸ್ಥೆಯ ವತಿಯಿಂದ ಜ್ಞಾನಭಾರತಿ ಆವರಣದಲ್ಲಿ ಒಟ್ಟು ಏಳು ವಿಧದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನಿರಂತರವಾಗಿ ಸಂಗ್ರಹಿಸಿ ಮರುಬಳಕೆ ಮಾಡಲಾಗುವುದು.

ADVERTISEMENT

ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ನೌಕರರನ್ನು ಒಳಗೊಂಡ ಜಾಗೃತಿ ಕಾರ್ಯಕ್ರಮ, ಸ್ವಚ್ಚತಾ ಕಾರ್ಯಾಗಾರ ಮತ್ತು ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಘನತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ಮರುಬಳಕೆ ಕುರಿತು ಅರಿವು ಮೂಡಿಸುವ ಮೂಲಕ ವಿಶ್ವವಿದ್ಯಾಲಯವನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗಿಸಲಾಗುವುದು ಎಂದು ಒಡಂಬಡಿಕೆಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಡೀನ್‌ ಪ್ರೊ.ಅಶೋಕ್ ಡಿ. ಹಂಜಗಿ, ಪ್ರೊ.ಸೋಮಶೇಖರ್, ಪ್ರೊ.ನಿರ್ಮಲಾ, ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ನಾಗರಾಜ್, ಬಿಸ್ಲೆರಿ ದಕ್ಷಿಣ ಭಾರತದ ಸಿಎಸ್‌ಆರ್ ವಿಭಾಗದ ಮುಖ್ಯಸ್ಥ ದಿನಕರನ್ ಜೆ, ಕಾರ್ಯನಿರ್ವಾಹಕ ಸೂರಜ್ ಕುಮಾರ್, ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಸಲಹೆಗಾರ್ತಿ ಚಿಂತಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.