ADVERTISEMENT

PM Modi in Bengaluru | ಪ್ರಧಾನಿಗೆ ಹೂಮಳೆ: ಸಡಗರದ ಸ್ವಾಗತ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 19:40 IST
Last Updated 10 ಆಗಸ್ಟ್ 2025, 19:40 IST
<div class="paragraphs"><p>ಜಯನಗರ ರಾಗಿಗುಡ್ಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬರುವಿಕೆಗಾಗಿ ಕಾಯುತ್ತಿದ್ದ ಅಭಿಮಾನಿಗಳು </p></div>

ಜಯನಗರ ರಾಗಿಗುಡ್ಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬರುವಿಕೆಗಾಗಿ ಕಾಯುತ್ತಿದ್ದ ಅಭಿಮಾನಿಗಳು

   

ಪ್ರಜಾವಾಣಿ ಚಿತ್ರ: ಪುಷ್ಕರ್‌ ವಿ.

ಬೆಂಗಳೂರು: ನಮ್ಮ ಮೆಟ್ರೊ ಹಳದಿ ಮಾರ್ಗಕ್ಕೆ ಚಾಲನೆ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಭಾನುವಾರ ರಾಜಧಾನಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ದಾರಿಯುದ್ದಕ್ಕೂ ಹೂಮಳೆ, ಅದ್ದೂರಿ ಸ್ವಾಗತ ನೀಡಿದರು.

ADVERTISEMENT

ಮೇಖ್ರಿ ವೃತ್ತದ ಬಳಿ ಇರುವ ವಾಯುಪಡೆಯ ತರಬೇತಿ ಕೇಂದ್ರಕ್ಕೆ ಬಂದಿಳಿದ ಅವರು, ಅಲ್ಲಿಂದ ಹೊರಬರುತ್ತಿದ್ದಂತೆ ರಸ್ತೆಯ ಅಕ್ಕಪಕ್ಕ ನಿಂತಿದ್ದ ಬಿಜೆಪಿ ಕಾರ್ಯಕರ್ತರು ದೂರದಿಂದಲೇ ಸ್ವಾಗತ ಕೋರಿದರು. ಇದು ಮೋದಿಯವರು ಹೋದೆಡೆಯಲ್ಲೆಲ್ಲ ಮುಂದುವರಿದಿತ್ತು. 

ಮೆಟ್ರೊ ನೂತನ ಮಾರ್ಗ ಉದ್ಘಾಟಿಸಿದ ಮೋದಿ ಅವರು, ರಾಗಿಗುಡ್ಡದಿಂದ ಎಲೆಕ್ಟ್ರಾನಿಕ್ಸ್‌ ಸಿಟಿ ಮೆಟ್ರೊ ಸ್ಟೇಷನ್‌ವರೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ನಗರ ವ್ಯವಹಾರಗಳ ಸಚಿವ ಮನೋಹರ ಲಾಲ್ ಖಟ್ಟರ್ ಅವರನ್ನು ಎಡಬಲದಲ್ಲಿ ಕೂರಿಸಿಕೊಂಡು ಪ್ರಯಾಣ ಬೆಳೆಸಿದರು. 

ಹಳದಿ ಮಾರ್ಗ ಉದ್ಘಾಟನೆಗಾಗಿ ಆರ್‌.ವಿ. ರಸ್ತೆ ಮೂಲಕ ರಾಗಿಗುಡ್ಡಕ್ಕೆ ಬರುತ್ತಿದ್ದಂತೆ ಅವರಿದ್ದ ಕಾರಿನ ಮೇಲೆ ಹೂವಿನ ಮಳೆಗರೆಯಲಾಯಿತು. ಪೂಜಾ ಕುಣಿತ, ಆಂಜನೇಯ ವೇಷದ ಕುಣಿತ, ಕೀಲು ಕುದುರೆ ಕುಣಿತಗಳು ಅವರನ್ನು ಸ್ವಾಗತಿಸಿದವು.  ಅಭಿಮಾನಿಗಳು, ಕಾರ್ಯಕರ್ತರು ಮೋದಿ ಮೋದಿ ಎಂದು ಕೂಗಿದರು. ಇದಕ್ಕೆ ಪ್ರತಿಯಾಗಿ ಒಂದಷ್ಟು ಜನರು ಡಿ.ಕೆ ಡಿ.ಕೆ ಎಂದು ಕೂಗಿದರು. ರಾಗಿಗುಡ್ಡ ಮೆಟ್ರೊ ನಿಲ್ದಾಣವನ್ನು ಭದ್ರತಾ ಕಾರಣಕ್ಕಾಗಿ ನಿಯಂತ್ರಿತ ಪ್ರದೇಶ ಎಂದು ಘೋಷಿಸಿ 200 ಮೀಟರ್‌ ದೂರದಲ್ಲೇ ಅಭಿಮಾನಿಗಳನ್ನು ನಿಯಂತ್ರಿಸಲಾಗಿತ್ತು. ರಸ್ತೆಯ ಎರಡೂ ಕಡೆಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ಫ್ಲೆಕ್ಸ್‌ಗಳು ರಾರಾಜಿಸಿದವು. ಮೋದಿಯವರ ಪ್ರತಿರೂಪದಂತಿದ್ದ ವ್ಯಕ್ತಿ ಆಕರ್ಷಣೆಯ ಕೇಂದ್ರವಾದರೆ, ಕಲಾಕೃತಿಯಲ್ಲಿ ಅರಳಿದ ಮೋದಿಯ ಚಿತ್ರಗಳು ಗಮನ ಸೆಳೆದವು. 

ಮೋದಿ ಅವರು ರಾಗಿಗುಡ್ಡ ನಿಲ್ದಾಣಕ್ಕೆ ಬಂದಾಗ ಅವರಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನಗರದ ಅತಿ ಎತ್ತರದ ಇಂಟರ್‌ಚೇಂಜ್‌ ಆಗಿರುವ ಜಯದೇವ ಮೆಟ್ರೊ ನಿಲ್ದಾಣದ ಬಗ್ಗೆ ವಿವರ ನೀಡಿದರು. ಮುಖ್ಯಮಂತ್ರಿ ಸಹಿತ ಉಳಿದವರು ಸಾಥ್‌ ನೀಡಿದರು.

ಮೆಟ್ರೊ ಒಳಗೆ ಇದ್ದ ವಿದ್ಯಾರ್ಥಿ–ವಿದ್ಯಾರ್ಥಿನಿಯರನ್ನು ಪ್ರಧಾನಿ ಮಾತನಾಡಿಸಿದರು. ಮೆಟ್ರೊ ಸಿಬ್ಬಂದಿ ಜೊತೆಗೆ ಚರ್ಚೆ ನಡೆಸಿದರು. 

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಎಲ್ಲರೂ ಇಳಿದು ಸಭಾ ಕಾರ್ಯಕ್ರಮಕ್ಕಾಗಿ  ಐಐಐಟಿ ಸಭಾಂಗಣಕ್ಕೆ ತೆರಳಿದರು. ಕೇಂದ್ರದ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, ಶಾಸಕರಾದ ಸಿ.ಕೆ. ರಾಮಮೂರ್ತಿ, ಎಂ. ಕೃಷ್ಣಪ್ಪ, ಸತೀಶ್‌ ರೆಡ್ಡಿ ಬರಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.