ನಮ್ಮ ಮೆಟ್ರೊ ಕೆಎಸ್‌ಆರ್ ರೈಲು ನಿಲ್ದಾಣದ 2ನೇ ಪ್ರವೇಶದ್ವಾರ ತಾತ್ಕಾಲಿಕ ಬಂದ್
ಬೆಂಗಳೂರು: ಬೆಂಗಳೂರು–ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಆ.10ರಂದು ನಗರಕ್ಕೆ ಆಗಮಿಸುತ್ತಿರುವ ಕಾರಣ ಕೆಎಸ್‌ಆರ್ ರೈಲು ನಿಲ್ದಾಣದ ಎರಡನೇ ಪ್ರವೇಶದ್ವಾರವನ್ನು ತಾತ್ಕಾಲಿಕವಾಗಿ ಮುಚ್ಚಲು ನೈರುತ್ಯ ರೈಲ್ವೆ ನಿರ್ಧರಿಸಿದೆ. ಅಲ್ಲದೇ ಜನದಟ್ಟಣೆ ಕಡಿಮೆ ಮಾಡಲು ಹಲವು ರೈಲುಗಳ ಮಾರ್ಗ ಬದಲಾವಣೆ, ರದ್ದು, ವಿಳಂಬ ಸಂಚಾರಕ್ಕೆ ಕ್ರಮ ಕೈಗೊಂಡಿದೆ.
ಶನಿವಾರ ಸಂಜೆ 4ಕ್ಕೆ ಎರಡನೇ ಪ್ರವೇಶದ್ವಾರ ಮುಚ್ಚಲಾಗಿದೆ. ಆ.10ರಂದು ಮಧ್ಯಾಹ್ನ 2ರ ನಂತರ ತೆರೆಯಲಾಗುವುದು. ಅಲ್ಲಿವರೆಗೆ ಎಲ್ಲ ಪ್ಲಾಟ್‌ಫಾರ್ಮ್‌ಗಳನ್ನು ಪ್ರವೇಶಿಸಲು ಪ್ರಯಾಣಿಕರು ನಿಲ್ದಾಣದ ಮುಖ್ಯ ಪ್ರವೇಶ ದ್ವಾರವನ್ನು (ಮುಂಭಾಗ) ಬಳಸಬೇಕು ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಕೋರಿದ್ದಾರೆ.
ರೈಲುಗಳ ಬದಲಾವಣೆ: ಆ.10ರಂದು ಕೆಎಸ್ಆರ್ ಬೆಂಗಳೂರು - ಅಶೋಕಪುರ- ಕೆಎಸ್ಆರ್ ಬೆಂಗಳೂರು, ಕೆಎಸ್ಆರ್ ಬೆಂಗಳೂರು - ತುಮಕೂರು–ಕೆಎಸ್ಆರ್ ಬೆಂಗಳೂರು, ಕೆಎಸ್ಆರ್ ಬೆಂಗಳೂರು - ಚನ್ನಪಟ್ಟಣ–ಕೆಎಸ್ಆರ್ ಬೆಂಗಳೂರು ರೈಲುಗಳನ್ನು ರದ್ದು ಮಾಡಲಾಗಿದೆ.
ಮಾರಿಕುಪ್ಪಂ ರೈಲು ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿಯೇ ಸಂಚಾರ ಅಂತ್ಯಗೊಳಿಸಲಿದೆ. ಅಲ್ಲಿಂದಲೇ ವಾಪಸ್ ಮಾರಿಕುಪ್ಪಂಗೆ ಹೊರಡಲಿದೆ. ಕುಪ್ಪಂ ರೈಲು ಕಂಟೋನ್ಮೆಂಟ್‌ನಿಂದ ಹೊರಡಲಿದೆ. ಮೈಸೂರು - ಕೆಎಸ್ಆರ್ ಬೆಂಗಳೂರು ಚಾಮುಂಡಿ ಎಕ್ಸ್‌ಪ್ರೆಸ್ ಕೆಂಗೇರಿಯಲ್ಲಿ ಸಂಚಾರ ಅಂತ್ಯಗೊಳ್ಳಲಿದೆ. ಬೆಂಗಳೂರು - ಮೈಸೂರು ರಾಜ್ಯ ರಾಣಿ ಎಕ್ಸ್‌ಪ್ರೆಸ್ ಕೆಂಗೇರಿಯಿಂದ ಆರಂಭಗೊಳ್ಳಲಿದೆ. ವೈಟ್‌ಫೀಲ್ಡ್ - ಕೆಎಸ್‌ಆರ್ ಬೆಂಗಳೂರು, ಕೆಎಸ್ಆರ್ ಬೆಂಗಳೂರು - ಬಂಗಾರಪೇಟೆ ರೈಲುಗಳು ಕಂಟೋನ್ಮೆಂಟ್‌ನಿಂದ ಹೊರಡಲಿವೆ. ಹಿಂದೂಪುರ - ಕೆಎಸ್‌ಆರ್ ಬೆಂಗಳೂರು ಯಲಹಂಕದಲ್ಲಿ ಕೊನೆಗೊಳ್ಳಲಿದೆ. ಕೆಎಸ್‌ಆರ್ ಬೆಂಗಳೂರು - ಜೋಲಾರಪೇಟೆ ರೈಲು ಕಂಟೋನ್ಮೆಂಟ್‌ನಲ್ಲಿ ಕೊನೆಗೊಳ್ಳಲಿದೆ. ಅರಸೀಕೆರೆ - ಕೆಎಸ್‌ಆರ್ ಬೆಂಗಳೂರು ಚಿಕ್ಕಬಾಣಾವರದಲ್ಲಿ ಕೊನೆಗೊಳ್ಳಲಿದೆ.
ಶಿವಮೊಗ್ಗ ಪಟ್ಟಣ - ಕೆಎಸ್ಆರ್ ಬೆಂಗಳೂರು, ಅಶೋಕಪುರಂ - ಕೆಎಸ್ಆರ್ ಬೆಂಗಳೂರು, ಎಂಜಿಆರ್ ಚೆನ್ನೈ ಸೆಂಟ್ರಲ್ - ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಕ್ರಮವಾಗಿ 90 ನಿಮಿಷ, 150 ನಿಮಿಷ ಮತ್ತು 90 ನಿಮಿಷ ವಿಳಂಬವಾಗಿ ಹೊರಡುವಂತೆ ಮರು ನಿಗದಿಪಡಿಸಲಾಗಿದೆ.
ಅಶೋಕಪುರಂ - ಕೆಎಸ್ಆರ್ ಬೆಂಗಳೂರು ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲು ಮಾರ್ಗ ಮಧ್ಯೆ 45 ನಿಮಿಷ, ಎಂಜಿಆರ್ ಚೆನ್ನೈ ಸೆಂಟ್ರಲ್ - ಮೈಸೂರು ಶತಾಬ್ದಿ ಎಕ್ಸ್‌ಪ್ರೆಸ್ ರೈಲು ಮಾರ್ಗಮಧ್ಯೆ 30 ನಿಮಿಷ ನಿಯಂತ್ರಣಗೊಳ್ಳಲಿದೆ. ಮೈಸೂರು - ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲನ್ನು ಪಾಂಡವಪುರದಿಂದ ತಿಪಟೂರು ವರೆಗಿನ ನಿಲ್ದಾಣಗಳ ಬದಲಿಗೆ ಕೃಷ್ಣರಾಜನಗರ, ಹಾಸನ ಮತ್ತು ಅರಸೀಕೆರೆ ಮೂಲಕ ಸಂಚರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.