ADVERTISEMENT

ಪೋಕ್ಸೊ ಪ್ರಕರಣ ‌ | ಆರೋಪಿ ಖುಲಾಸೆ ರದ್ದುಪಡಿಸಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 24 ಮೇ 2023, 7:45 IST
Last Updated 24 ಮೇ 2023, 7:45 IST
ಹೈಕೋರ್ಟ್‌
ಹೈಕೋರ್ಟ್‌    

ಬೆಂಗಳೂರು: ಅಪ್ರಾಪ್ತ ವಯಸ್ಸಿನ ಸೋದರ ಸಂಬಂಧಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ವಂಚಿಸಿದ ಪ್ರಕರಣವೊಂದರಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಪೊಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ಪ್ರಕರಣ ಎದುರಿಸುತ್ತಿದ್ದ ವಿಜಯ ಅಲಿಯಾಸ್ ವಿಜಯಕುಮಾರ್‌ ಎಂಬ ಆರೋಪಿಯನ್ನು ಕೊಡಗಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ 2016ರ ಮಾರ್ಚ್ 10ರಂದು  ಖುಲಾಸೆಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪ್ರಾಸಿಕ್ಯೂಷನ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೆ. ಎಸ್ ಮುದಗಲ್ ನೇತೃತ್ವದ ವಿಭಾಗೀಯ ನ್ಯಾಯಪೀಠ  ಪುರಸ್ಕರಿಸಿದೆ. ಅಪರಾಧಿಗೆ ಶಿಕ್ಷೆ ವಿಧಿಸುವಂತೆ ಆದೇಶಿಸಿದೆ.

‘ಆರೋಪಿ ತನ್ನ ಸೋದರ ಸಂಬಂಧಿಯಾದ 15 ವರ್ಷದ ಬಾಲಕಿಯ ಜೊತೆ ಸಂಭೋಗ ನಡೆಸಿರುವುದಲ್ಲದೇ ಆಕೆಗೆ ವಂಚಿಸಿರುವುದನ್ನು ಪರಿಗಣಿಸುವಲ್ಲಿ ವಿಚಾರಣಾ ನ್ಯಾಯಾಲಯ ವಿಫಲವಾಗಿದೆ. ವಿಚಾರಣಾ ನ್ಯಾಯಾಲಯವು ದಾಖಲೆಯಲ್ಲಿರುವ ಸಾಕ್ಷ್ಯಗಳನ್ನು ಪರಿಗಣಿಸಿಲ್ಲ. ಹೀಗಾಗಿ, ಆರೋಪಿಯನ್ನು ಖುಲಾಸೆ ಮಾಡಿರುವ ಆದೇಶವು ನ್ಯಾಯದಾನಕ್ಕೆ ಮಾರಕವಾಗಿದೆ’ ಎಂದು ನ್ಯಾಯ‍ಪೀಠ ಅಭಿಪ್ರಾಯಪಟ್ಟಿದೆ.

ADVERTISEMENT

ಪ್ರಕರಣವೇನು?: ‘ಆರೋಪಿಯು ಸಂತ್ರಸ್ತ ಬಾಲಕಿಯ ಚಿಕ್ಕಪ್ಪನ ಮಗ. ಕೂಲಿ ಕೆಲಸಕ್ಕೆ ಬಂದಿದ್ದ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ಸಂಭೋಗ ನಡೆಸಿದ್ದ’ ಎಂದು ಆರೋಪಿಸಲಾಗಿತ್ತು. ಈ ಘಟನೆ 2008ರಲ್ಲಿ ನಡೆದಿತ್ತು. ಬಾಲಕಿ ಗರ್ಭಿಣಿಯಾಗಿದ್ದು ಪೋಷಕರ ಗಮನಕ್ಕೆ ಬಂದಿತ್ತು. ಈ ಕುರಿತು ಗ್ರಾಮಸ್ಥರು ನಡೆಸಿದ ಪಂಚಾಯಿತಿಯಲ್ಲಿ ಆರೋಪಿಯನ್ನು ವಿಚಾರಿಸಿದಾಗ ಆತ, ‘ಗರ್ಭದಲ್ಲಿರುವ ಮಗುವನ್ನು ತೆಗೆಸಿದರೆ ಆಕೆಯನ್ನು ಮದುವೆಯಾಗುವುದಾಗಿ’ ಷರತ್ತು ವಿಧಿಸಿದ್ದ. ಆದರೆ, ನಂತರ ನಾಪತ್ತೆಯಾಗಿದ್ದ.

ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಆತನ ವಿರುದ್ಧ ಐಪಿಸಿಯ ಕಲಂ 376 ಮತ್ತು 420ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಏತನ್ಮಧ್ಯೆ, ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ನಂತರ ಆಕೆ ಮತ್ತೊಂದು ಮದುವೆಯಾಗಿ, ಮತ್ತೊಂದು ಮಗುವನ್ನು ಹೆತ್ತಿದ್ದಳು.

ವಿಚಾರಣೆ ನಡೆಸಿದ್ದ ನ್ಯಾಯಾಲಯ, ‘ಸಂತ್ರಸ್ತೆಯ ವಯಸ್ಸು ಸಾಬೀತಾಗಿಲ್ಲ. ಆರೋಪಿ ಮತ್ತು ಸಂತ್ರಸ್ತೆಯ ನಡುವಿನ ಸಂಬಂಧ ಒಪ್ಪಿತವಾಗಿತ್ತು. ಆರೋಪಿಯು ಸಂತ್ರಸ್ತೆಯ ಜೊತೆ ಸಂಭೋಗ ನಡೆಸಿದ ಕಾರಣದಿಂದಾಗಿಯೇ ಆಕೆ ಗರ್ಭಿಣಿಯಾಗಿದ್ದಳು ಎಂಬುದನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ಪ್ರಾಸಿಕ್ಯೂಷನ್, ವಂಶವಾಹಿ ಪರೀಕ್ಷಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಆರೋಪಿಯನ್ನು ಖುಲಾಸೆಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.