ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಯೋಗ ಕಲಿಸುವ ನೆಪದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಂಧಿತರಾಗಿರುವ ಯೋಗ ಗುರು ಡಾ.ನಿರಂಜನಮೂರ್ತಿ ವಿರುದ್ಧ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಪೋಕ್ಸೊ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.
19 ವರ್ಷದ ಸಂತ್ರಸ್ತೆ ನೀಡಿದ್ದ ದೂರು ಆಧರಿಸಿ ಪೊಲೀಸರು ಸೆಪ್ಟೆಂಬರ್ 18ರಂದು ನಿರಂಜನಮೂರ್ತಿಯನ್ನು ಬಂಧಿಸಿದ್ದರು. ಈ ಪ್ರಕರಣದ ತನಿಖೆಯನ್ನು ಪೊಲೀಸರು ಪೂರ್ಣಗೊಳಿಸಿದ್ದಾರೆ.
ಸಂತ್ರಸ್ತೆಯು 2021ರಿಂದ ನಿರಂಜನಮೂರ್ತಿ ನಡೆಸುತ್ತಿದ್ದ ಯೋಗ ತರಬೇತಿ ಸಂಸ್ಥೆಯಲ್ಲಿ ಯೋಗ ಕಲಿಕೆಗೆ ಹೋಗುತ್ತಿದ್ದರು. 2023ರಲ್ಲಿ ಯೋಗ ಸ್ಫರ್ಧೆಯಲ್ಲಿ ಪಾಲ್ಗೊಳ್ಳಲು ಥಾಯ್ಲೆಂಡ್‍ಗೆ ಹೋಗಿದ್ದಾಗ ನಿರಂಜನಮೂರ್ತಿ, ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡಿದ್ದರು. ‘ಯೋಗದಲ್ಲಿ ಅಂತರರಾಷ್ಟ್ರೀಯ ಮಟ್ಟಕ್ಕೆ ಕರೆದೊಯ್ದು ಹೆಸರು ಬರುವಂತೆ ಮಾಡುತ್ತೇನೆ. ಅದರಿಂದ ಸರ್ಕಾರಿ ಕೆಲಸವೂ ಸಿಗಬಹುದೆಂದು ನಂಬಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಪೊಲೀಸರು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
‘ಆಗಸ್ಟ್‌ನಲ್ಲಿ ನಡೆದಿದ್ದ ರಾಷ್ಟ್ರ ಮಟ್ಟದ ಯೋಗ ಸ್ಫರ್ಧೆಯಲ್ಲಿ ಪದಕ ಕೊಡಿಸುವುದಾಗಿ ಸಂತ್ರಸ್ತೆಗೆ ಆಮಿಷವೊಡ್ಡಿ ತಮ್ಮ ಸಂಸ್ಥೆಯಲ್ಲೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಂತರ ರಾಜ್ಯ ಮಟ್ಟದ ಯೋಗ ಸ್ಫರ್ಧೆಯಲ್ಲಿ ಪದಕ ಕೊಡಿಸುವುದಾಗಿ ಆಕೆಗೆ ನಂಬಿಸಿ ಮತ್ತೆ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದರು. ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿರುವುದಕ್ಕೆ ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ಕೆಲ ವಿಡಿಯೊ ಮತ್ತು ಪೊಟೋಗಳು ಸಿಕ್ಕಿವೆ’ ಎಂದು ಆರೋಪಪಟ್ಟಿಯಲ್ಲಿ ಹೇಳಿದ್ದಾರೆ.
ನಿರಂಜನಮೂರ್ತಿ, ಹಲವು ಮಹಿಳೆಯರ ಜತೆ ಲೈಂಗಿಕ ಸಂಪರ್ಕ ಹೊಂದಿರುವುದು ತನಿಖೆ ವೇಳೆ ದೃಢಪಟ್ಟಿದೆ. ತನಿಖೆಯ ಭಾಗವಾಗಿ ಆ ಮಹಿಳೆಯರನ್ನು ಸಂಪರ್ಕಿಸಲಾಗಿದ್ದು, ಅವರು ಹೇಳಿಕೆ ದಾಖಲಿಸಲು ಹಿಂದೇಟು ಹಾಕಿದ್ದಾರೆ. 19 ವರ್ಷದ ಸಂತ್ರಸ್ತೆಯನ್ನು ಹೊರತುಪಡಿಸಿ ಉಳಿದವರು ದೂರು ನೀಡಲು ನಿರಾಕರಿಸಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರಬೇಕಿದೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.