ADVERTISEMENT

ಕೋರ್ಟ್‌ನಲ್ಲಿ ಪೊಲೀಸ್–ವಕೀಲರ ವಾಕ್ಸಮರ

ಮಾರುವೇಷದ ಕಾರ್ಯಾಚರಣೆಗೆ ಹೋಗಿದ್ದ ಪಿಎಸ್ಐ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 20:02 IST
Last Updated 14 ಡಿಸೆಂಬರ್ 2018, 20:02 IST

ಬೆಂಗಳೂರು: ಹಳೇ ಬಾಂಡ್ ಪೇಪರ್ ಮಾರಾಟ ಜಾಲದ ಪತ್ತೆಗಾಗಿ ಕೋರ್ಟ್ ಆವರಣ ಪ್ರವೇಶಿಸಿದ್ದ ಶಿವಾಜಿನಗರ ಪೊಲೀಸರು, ಮಾರುವೇಷದ ಕಾರ್ಯಾಚರಣೆಗೆ ಮುಂದಾಗಿ ವಕೀಲರ ಕೈಗೆ ಸಿಕ್ಕಿಬಿದ್ದರು. ಆನಂತರ ಪರಸ್ಪರ ವಾಕ್ಸಮರ, ತಳ್ಳಾಟ–ನೂಕಾಟ ನಡೆದು ವಿಕೋಪಕ್ಕೆ ಹೋಗಿದ್ದ ಪರಿಸ್ಥಿತಿಯು ಇಬ್ಬರು ಡಿಸಿಪಿಗಳ ಮಧ್ಯಪ್ರವೇಶದ ಬಳಿಕ ತಿಳಿಯಾಯಿತು.

ನಗರದ ಮೆಯೋಹಾಲ್ ನ್ಯಾಯಾಲಯದ ಆವರಣದಲ್ಲಿ ಬುಧವಾರ (ಡಿ. 12) ಮಧ್ಯಾಹ್ನ ಈ ಘಟನೆ ನಡೆದಿದ್ದು, ವಕೀಲರು ಹಾಗೂ ಡಿಸಿಪಿಗಳು ಪರಸ್ಪರ ಮಾತುಕತೆ ಮೂಲಕ ಗೊಂದಲ ಬಗೆಹರಿಸಿಕೊಂಡಿದ್ದಾರೆ.

ಆಗಿದ್ದೇನು?: ಹಲಸೂರು ಬಳಿಯ ಕೆಲವು ಅಂಗಡಿಗಳಲ್ಲಿ ಹಳೇ ಖಾಲಿ ಬಾಂಡ್ ಪೇಪರ್‌ ಮಾರಾಟ ಮಾಡುತ್ತಿದ್ದ ಬಗ್ಗೆ ಪೂರ್ವ ವಿಭಾಗದ ಡಿಸಿಪಿ ರಾಹುಲ್‌ಕುಮಾರ್‌ ಅವರಿಗೆ ಮಾಹಿತಿ ಬಂದಿತ್ತು. ಅದರ ಪತ್ತೆಗೆ ಮುಂದಾಗಿದ್ದ ಡಿಸಿಪಿ, ತನಿಖೆ ಜವಾಬ್ದಾರಿಯನ್ನು ಶಿವಾಜಿನಗರ ಇನ್‌ಸ್ಪೆಕ್ಟರ್‌ ತಬ್ರೇಜ್‌ ಅವರಿಗೆ ವಹಿಸಿದ್ದರು.ತನಿಖೆಗೆ ತಂಡ ರಚಿಸಿದ್ದ ಇನ್‌ಸ್ಪೆಕ್ಟರ್, ಜಾಲದ ಪತ್ತೆಗೆ ಮಾಹಿತಿ ಕಲೆ ಹಾಕಲಾರಂಭಿಸಿದ್ದರು.

ADVERTISEMENT

‘ಮೆಯೋಹಾಲ್‌ನಲ್ಲಿರುವ ಇಬ್ಬರು ವ್ಯಕ್ತಿಗಳು, ಬಾಂಡ್‌ ಪೇಪರ್ ಮಾರಾಟ ಮಾಡುತ್ತಿದ್ದಾರೆ. ಅವರ ಬಳಿ ಖರೀದಿಸಿದ ಪೇಪರ್‌ಗಳನ್ನೇ ಅಂಗಡಿಯವರು ಮಾರುತ್ತಿದ್ದಾರೆ’ ಎಂಬುದು ಪೊಲೀಸರಿಗೆ ಗೊತ್ತಾಗಿತ್ತು. ಕೋರ್ಟ್‌ನಲ್ಲಿ ಬಾಂಡ್‌ ಮಾರಾಟ ಮಾಡುತ್ತಿರುವವರು ಯಾರು? ಎಂಬುದನ್ನು ತಿಳಿಯಲು ಹೆಡ್‌ ಕಾನ್‌ಸ್ಟೆಬಲ್ ಜೊತೆಯಲ್ಲಿ ಪಿಎಸ್‌ಐ ಶಿಲಾ ಗೌಡ, ಕೋರ್ಟ್‌ ಆವರಣ ಪ್ರವೇಶಿಸಿ ಮಾರುವೇಷದ ಕಾರ್ಯಾಚರಣೆಗೆ ಮುಂದಾಗಿದ್ದರು.

ಬಾಂಡ್‌ ಖರೀದಿ ನೆಪದಲ್ಲಿ ಅಲ್ಲಿದ್ದವರನ್ನು ಮಾತನಾಡಿಸುತ್ತಿದ್ದ ಅವರ ನಡೆ ಬಗ್ಗೆ ಅನುಮಾನಗೊಂಡ ವಕೀಲರು, ಇಬ್ಬರನ್ನೂ ಸುತ್ತುವರೆದು ವಿಚಾರಿಸಿದರು. ಇದರಿಂದ ಗಲಿಬಿಲಿಗೊಂಡ ಶಿಲಾ, ‘ನಾವು ಪೊಲೀಸರ ಭಾತ್ಮಿದಾರರು’ ಎಂದಿದ್ದರು. ‘ಯಾವ ಠಾಣೆ’ ಎಂದು ಪ್ರಶ್ನಿಸಿದಾಗ ಕೂಡಲೇ ಮಾತು ಬದಲಿಸಿ, ‘ಭಾತ್ಮಿದಾರರಲ್ಲ, ನಾವು ಪತ್ರಕರ್ತರು’ ಎಂದು ಹೇಳಿದ್ದರು.

ಇಂಥ ಗೊಂದಲದ ಹೇಳಿಕೆಯಿಂದ ಮತ್ತಷ್ಟು ಸಂಶಯಗೊಂಡ ವಕೀಲರು, ಇಬ್ಬರನ್ನೂ ಹೊರಗೆ ಹೋಗಲು ಬಿಡಲಿಲ್ಲ. ಆಗ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಅವಾಗಲೇ ಹೆಡ್ ಕಾನ್‌ಸ್ಟೆಬಲ್, ‘ನಾವು ಪೊಲೀಸರು’ ಎಂದಿದ್ದರು. ‘ಗುರುತಿನ ಚೀಟಿ ತೋರಿಸಿ’ ಎಂದೊಡನೆ ಇಕ್ಕಟ್ಟಿಗೆ ಸಿಲುಕಿದ್ದ ಅವರು, ‘ಚೀಟಿ ಇಲ್ಲ. ಮರೆತು ಬಂದಿದ್ದೇವೆ’ ಎಂದಿದ್ದರು. ಕೊನೆಗೆ ತಾವು ಧರಿಸಿದ್ದ ಬೆಲ್ಟ್‌ ತೋರಿಸಿ ಅವರನ್ನು ನಂಬಿಸಿದ್ದರು.

ಅಷ್ಟರಲ್ಲೇ ಅಶೋಕನಗರ ಪೊಲೀಸರ ಸಮೇತ ಕೋರ್ಟ್‌ಗೆ ಬಂದಿದ್ದ ಡಿಸಿಪಿಗಳಾದ ರಾಹುಲ್‌ ಕುಮಾರ್ ಹಾಗೂ ದೇವರಾಜ್, ‘ಹಳೇ ಬಾಂಡ್‌ ಪೇಪರ್ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಲು ಇವರಿಬ್ಬರು ಇಲ್ಲಿಗೆ ಬಂದಿದ್ದಾರೆ’ ಎಂದು ಹೇಳಿ ವಕೀಲರನ್ನು
ಸಮಾಧಾನಪಡಿಸಿದರು.

ಪ್ರೇಮಿ’ಗಳ ಸೋಗಿನಲ್ಲಿ ಬಂಧಿಸಿದ್ದರು

ಪಿಎಸ್‌ಐ ಶಿಲಾ ಗೌಡ ಹಾಗೂ ಹೆಡ್‌ ಕಾನ್‌ಸ್ಟೆಬಲ್ ಅವರು ವಾರದ ಹಿಂದಷ್ಟೇ ಪ್ರೇಮಿಗಳ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿ ಮೂವರು ಅಪಹರಣಕಾರರನ್ನು ಬಂಧಿಸಿದ್ದರು. ಅವರ ಕಾರ್ಯವೈಖರಿಗೆ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಮೂವರ ಬಂಧನ

ಕೋರ್ಟ್‌ನಲ್ಲಿ ನಡೆದ ಘಟನೆ ದಿನವೇ ಶಿವಾಜಿನಗರ ಪೊಲೀಸರು,ಬಾಂಡ್ ಪೇಪರ್ ಮಾರಾಟ ಜಾಲದ ಮೂವರನ್ನು ಬಂಧಿಸಿದ್ದಾರೆ.

ಹಲಸೂರಿನ ಮುರುಗೇಶ್, ರಾಘವ್ ಹಾಗೂ ಕುಮಾರ್ ಬಂಧಿತರು. ಹಲಸೂರಿನಲ್ಲಿ ಅಂಗಡಿ ಇಟ್ಟುಕೊಂಡಿದ್ದ ಆರೋಪಿಗಳು, ಅಕ್ರಮವಾಗಿ ಬಾಂಡ್‌ ಪೇಪರ್ ಮಾರಾಟ ಮಾಡುತ್ತಿದ್ದರು. ಜಾಲದ ಪ್ರಮುಖ ಆರೋಪಿ ಗೋಪಾಲ್ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.