ADVERTISEMENT

‘ಡ್ರಗ್ಸ್‌’ ವ್ಯಸನಿಗಳನ್ನು ಜೈಲಿಗಟ್ಟುತ್ತಿರುವ ಪೊಲೀಸರು

ಅಪರಾಧಗಳ ನಿಯಂತ್ರಣಕ್ಕೆ ವಿಶೇಷ ಕಾರ್ಯಾಚರಣೆl‘ಎನ್‌ಡಿಪಿಎಸ್’ ಕಾಯ್ದೆಯಡಿ ಸ್ವಯಂಪ್ರೇರಿತ ದೂರು ದಾಖಲು

ಸಂತೋಷ ಜಿಗಳಿಕೊಪ್ಪ
Published 20 ಜುಲೈ 2019, 19:10 IST
Last Updated 20 ಜುಲೈ 2019, 19:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಕತ್ತಲಾಗುತ್ತಿದ್ದಂತೆ ‘ಡ್ರಗ್ಸ್‌’ ಅಮಲಿನಲ್ಲಿ ಸುತ್ತಾಡುತ್ತಿರುವ ಕೆಲವು ಯುವಕರು, ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ನಡುರಸ್ತೆಯಲ್ಲೇ ಜನರನ್ನು ಅಡ್ಡಗಟ್ಟಿ ಸುಲಿಗೆಗೂ ಇಳಿಯುತ್ತಿದ್ದಾರೆ. ಇಂಥ ಕೃತ್ಯಗಳನ್ನು ತಡೆಯಲು ಮುಂದಾಗಿರುವ ನಗರ ಪೊಲೀಸರು, ‘ಡ್ರಗ್ಸ್’ ಮತ್ತೇರಿಸಿಕೊಳ್ಳುವ ವ್ಯಸನಿಗಳನ್ನು ಪತ್ತೆ ಹಚ್ಚಿ ಜೈಲುಗಟ್ಟುತ್ತಿದ್ದಾರೆ.

ಹಲಸೂರು ಗೇಟ್ ಠಾಣೆ ವ್ಯಾಪ್ತಿಯಲ್ಲಿ ಎರಡು ತಿಂಗಳ ಹಿಂದಷ್ಟೇ ಮೊಬೈಲ್‌ಗಾಗಿ ಟ್ರ್ಯಾಕ್ಟರ್ ಚಾಲಕ ಶಿವನಾಯ್ಕ ಎಂಬುವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಮಲ್ಲೇಶ್ವರದ 8ನೇ ಅಡ್ಡರಸ್ತೆಯಲ್ಲೂ ಲಾಂಗ್ ಬೀಸಿ ಎಲೆಕ್ಟ್ರಿಶಿಯನ್ ಗಣೇಶ್‌ ಅವರನ್ನು ಕೊಂದಿದ್ದರು.

ವಿಜಯನಗರದಲ್ಲೂ ಪುಡಿ ರೌಡಿಗಳು ಸಾರ್ವಜನಿಕರ ಮೇಲೆ ಮಚ್ಚು ಬೀಸಿ ಅಟ್ಟಹಾಸ ಮೆರೆದಿದ್ದರು.

ADVERTISEMENT

ಈ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಬಂಧಿತ ಆರೋಪಿಗಳೆಲ್ಲರೂ ‘ಡ್ರಗ್ಸ್‌’ ವ್ಯಸನಿಗಳು, ಅದರ ಅಮಲಿನಲ್ಲೇ ಕೃತ್ಯ ಎಸಗಿದ್ದರು ಎಂಬ ಸಂಗತಿ ತನಿಖೆಯಿಂದ ಗೊತ್ತಾಗಿತ್ತು.

ಅಪರಾಧಗಳ ಹೆಚ್ಚಳಕ್ಕೆ ‘ಡ್ರಗ್ಸ್‌’ ಕಾರಣವಾಗುತ್ತಿರುವುದನ್ನು ಮನಗಂಡ ನಗರ ಪೊಲೀಸ್‌ ಕಮಿಷನರ್ ಅಲೋಕ್‌ಕುಮಾರ್, ‘ಇದುವರೆಗೂ ‘ಡ್ರಗ್ಸ್’ ಮಾರಾಟ ಮಾಡುವವರನ್ನು ಬಂಧಿಸಲಾಗುತ್ತಿತ್ತು. ಇನ್ನು ಮುಂದೆ ‘ಡ್ರಗ್ಸ್‌’ ಸೇವಿಸುವವರನ್ನೇ ಬಂಧಿಸಿ ಜೈಲಿಗೆ ಕಳುಹಿಸಿ’ ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಕೆಲವು ಠಾಣೆಗಳ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಕಾರ್ಯಾಚರಣೆ ಆರಂಭಿಸಿರುವ ಪೊಲೀಸರು, ಈಗಾ ಗಲೇ 10ಕ್ಕೂ ಹೆಚ್ಚು ಮಂದಿಯನ್ನು ಜೈಲಿಗಟ್ಟಿದ್ದಾರೆ. ಅವರೆಲ್ಲರ ವಿರುದ್ಧ ‘ಮಾದಕವಸ್ತು ನಿಯಂತ್ರಣ ಕಾಯ್ದೆ–1985 (ಎನ್‌ಡಿಪಿಎಸ್)’ ಅಡಿ ಸ್ವಯಂಪ್ರೇರಿತವಾಗಿ ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ.

‘ಕೆಲವರು ಡ್ರಗ್ಸ್ ಅಮಲಿನಲ್ಲಿ ಕೃತ್ಯ ಎಸಗಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಗೆ ಧಕ್ಕೆ ತರುತ್ತಿದ್ದಾರೆ. ಜನರಲ್ಲೂ ಭಯವನ್ನುಂಟು ಮಾಡುತ್ತಿ ದ್ದಾರೆ. ಆ ಬಗ್ಗೆ ನಿರಂತರವಾಗಿ ದೂರುಗಳು ಬರುತ್ತಿವೆ. ಹೀಗಾಗಿ, ವಿಶೇಷ ಕಾರ್ಯಾಚರಣೆ ನಡೆಸು ವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಮುರುಗನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲವು ಠಾಣೆಗಳ ವ್ಯಾಪ್ತಿಯಲ್ಲಷ್ಟೇ ಸದ್ಯ ಕಾರ್ಯಾಚರಣೆ ಆರಂಭಿಸಲಾಗಿದೆ. ಜನರಿಗೆ ಒಳ್ಳೆಯದು ಆಗುವುದಾದರೆ ಉಳಿದ ಠಾಣೆ ವ್ಯಾಪ್ತಿಗೂ ವಿಸ್ತರಿಸಲಾಗುವುದು’ ಎಂದು ಹೇಳಿದರು.

ವೈದ್ಯಕೀಯ ಪರೀಕ್ಷೆ ನಡೆಸಿ ಎಫ್‌ಐಆರ್‌: ‘ರಾತ್ರಿ ಹೊತ್ತು ‘ಡ್ರಗ್ಸ್’ ಅಮಲಿನಲ್ಲಿದ್ದವರು ಕಂಡುಬಂದರೆ ವಶಕ್ಕೆ ಪಡೆದು ವಿಚಾರಣೆ ನಡೆಸುವಂತೆ ಗಸ್ತು ತಿರುಗುವ ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ’ ಎಂದು ಠಾಣಾಧಿಕಾರಿಯೊಬ್ಬರು ಹೇಳಿದರು.

‘ಕಮರ್ಷಿಯಲ್ ಸ್ಟ್ರೀಟ್‌ ಬಳಿಯ ವೆಂಕಟಸ್ವಾಮಿ ಮೊದಲಿಯಾರ್ ರಸ್ತೆಯಲ್ಲಿ ಇದೇ 17ರಂದು ರಾತ್ರಿ ತೋಹಿದ್ (34) ಎಂಬಾತ, ‘ಡ್ರಗ್ಸ್‌’ ಅಮಲೇರಿಸಿಕೊಂಡು ಸಾರ್ವಜನಿಕರನ್ನು ಅಡ್ಡಗಟ್ಟಿ ಬೆದರಿಸುತ್ತಿದ್ದ. ಆತನನ್ನು ವಶಕ್ಕೆ ಪಡೆದು ಸಂತೋಷ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಡ್ರಗ್ಸ್‌ ಸೇವಿಸಿದ್ದು ವರದಿಯಿಂದ ಖಾತ್ರಿಯಾಗುತ್ತಿದ್ದಂತೆ ಆತನನ್ನು ಬಂಧಿಸಿ ಜೈಲಿಗೆ ಕಳುಹಿ ಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ಜೀವನ್‌ಬಿಮಾ ನಗರ ಬಳಿಯ ಚಲ್ಲಘಟ್ಟ ಮುಖ್ಯರಸ್ತೆಯಲ್ಲೂ ಟಿ. ಮನೋಹರ್ ಎಂಬಾತ ಗಾಂಜಾ ಮತ್ತಿನಲ್ಲಿ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡುತ್ತಿದ್ದ. ಆತನನ್ನೂ ಬಂಧಿಸ ಲಾಗಿದೆ’ ಎಂದು ಮಾಹಿತಿ ನೀಡಿದರು.

‘ಡ್ರಗ್ಸ್’ ಮಾರಾಟಗಾರರ ಪತ್ತೆಗೂ ಕ್ರಮ

‘ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಮಾದಕ ವಸ್ತುವನ್ನು ತಂದು ನಗರದಲ್ಲಿ ಮಾರಾಟ ಮಾಡಲಾಗುತ್ತಿದೆ. ಆ ಮಾರಾಟಗಾರರು ಯಾರು ಎಂಬುದನ್ನು ಪತ್ತೆಹಚ್ಚಿ ಕ್ರಮ ಜರುಗಿಸುವ ಕೆಲಸ ನಡೆದಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

‘ಎಲ್ಲ ಬಗೆಯ ಡ್ರಗ್ಸ್‌ ಮಾರಾಟ ಜಾಲವನ್ನು ಬುಡಸಮೇತ ಕಿತ್ತು ಹಾಕಬೇಕಿದೆ. ಈ ಕಾರ್ಯಾಚರಣೆ ಆರಂಭ ಮಾತ್ರ. ಬಂಧಿತ ಮಾದಕ ವ್ಯಸನಿಗಳು ನೀಡಿರುವ ಮಾಹಿತಿ ಆಧರಿಸಿ ಮಾರಾಟಗಾರರ ಪತ್ತೆಗೆ ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.