ADVERTISEMENT

‘ಜಾನುವಾರು ಸಾಗಣೆಗೆ ಪೊಲೀಸರಿಂದ ಅಡ್ಡಿ’

ಮಾಂಸ ಮಾರಾಟಗಾರರ ಅಹವಾಲು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 20:15 IST
Last Updated 8 ಆಗಸ್ಟ್ 2019, 20:15 IST
   

ಬೆಂಗಳೂರು: ‘ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜಾನುವಾರುಗಳ ಸಾಗಣೆ ವೇಳೆ ಪೊಲೀಸರು ಅಡ್ಡಿ ಉಂಟು ಮಾಡುತ್ತಿದ್ದು, ಇದರಿಂದ ಮುಸ್ಲಿಂ ಸಮುದಾಯದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ’ ಎಂದು ಅನರ್ಹಗೊಂಡಿರುವ ಶಾಸಕ ಆರ್. ರೋಷನ್ ಬೇಗ್ ಹೇಳಿದರು.

ಮುಸ್ಲಿಂ ಮುಖಂಡರ ನಿಯೋಗದ ಜೊತೆ ಪೊಲೀಸ್ ಕಮಿಷನರ್‌ ಭಾಸ್ಕರ ರಾವ್ ಅವರನ್ನು ಭೇಟಿ ಮಾಡಿದ ಬೇಗ್, ‘ಇದೇ 12ರಂದು ನಡೆಯಲಿರುವ ಹಬ್ಬ ಆಚರಣೆಗೆ ಅಡಚಣೆ ಉಂಟು ಮಾಡಲು ಕೆಲವು ಸಂಘಟನೆಗಳು ಯತ್ನಿಸುತ್ತಿವೆ. ಅದಕ್ಕೆ ಪೊಲೀಸರು ಸಹಕಾರ ನೀಡುತ್ತಿರುವುದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮುಸ್ಲಿಂ ನಿಯೋಗದ ಅಹವಾಲು‌ ಆಲಿಸಿದ ಕಮಿಷನರ್‌, ‘ಪೊಲೀಸರಿಂದ ಯಾವುದೇ ರೀತಿಯಲ್ಲಿ ಅನಗತ್ಯ ಕಿರುಕುಳ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವದಂತಿಗಳನ್ನು ನಂಬಬೇಡಿ’ ಎಂದರು.

ADVERTISEMENT

‘ಯಾವುದೇ ಆತಂಕವಿಲ್ಲದೆ ಹಬ್ಬ‌ ಆಚರಿಸಿ. ಪೊಲೀಸರು ನಿಮ್ಮ ಜೊತೆ ಇರುತ್ತಾರೆ. ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ’ ಎಂದು ಭಾಸ್ಕರ್ ರಾವ್ ಅಭಯ ನೀಡಿದರು.

ಬಿಬಿಎಂಪಿ ಸದಸ್ಯ ಶಕೀಲ್ ಅಹ್ಮದ್, ಮಟನ್ ಮರ್ಚೆಂಟ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಜಿ. ಇಕ್ಬಾಲ್ ಖುರೇಷಿ, ಬೀಫ್ ಮರ್ಚೆಂಟ್ಸ್ ಅಸೋಸಿಯೇಷನ್‌ನ ಖಾಸಿಂ ಜಾನಿ ಖುರೇಷಿ, ಬರ್ಕತ್ ಖುರೇಷಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.