ADVERTISEMENT

‘ಪೊಲೀಸರಿಂದ ದೈಹಿಕ ಹಲ್ಲೆ’

ಅಪರಾಧ ಹಿನ್ನೆಲೆಯ ಮಹಿಳೆಯ ಆರೋಪಗಳಲ್ಲಿ ಹುರುಳಿಲ್ಲ: ಪೊಲೀಸರು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 19:57 IST
Last Updated 12 ಡಿಸೆಂಬರ್ 2019, 19:57 IST

ಬೆಂಗಳೂರು: ಕೆಂಪಾಪುರ ಅಗ್ರಹಾರ ಠಾಣೆಯ ಇನ್‌ಸ್ಪೆಕ್ಟರ್‌, ಸಬ್ ಇನ್‌ಸ್ಪೆಕ್ಟರ್ ಮತ್ತು ಮೂವರು ಪೊಲೀಸ್‌ ಸಿಬ್ಬಂದಿ, ಮಹಿಳೆಯೊಬ್ಬರನ್ನು 11 ದಿನ ಬಂಧನದಲ್ಲಿಟ್ಟು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬನ್ನೇರುಘಟ್ಟ ರಸ್ತೆಯ ಪಿಳ್ಳಗಾನಹಳ್ಳಿ ನಿವಾಸಿ ಜಬೀನ್ ತಾಜ್ (56) ಎಂಬುವವರು ಈ ಆರೋಪ ಮಾಡಿದ್ದಾರೆ. ಜಬೀನ್ ತಾಜ್ ಅವರ ಆರೋಪವನ್ನು ನಿರಾಕರಿಸಿರುವ ಪೊಲೀಸರು, ಅಪರಾಧ ಪ್ರಕರಣಗಳ ಹಿನ್ನೆಲೆ ಹೊಂದಿರುವ ಜಬೀನ್ ತಾಜ್ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದಿದ್ದಾರೆ.

‘ಅ. 24ರಿಂದ ನ. 4ರವರೆಗೆ ಅಕ್ರಮ ಬಂಧನದಲ್ಲಿರಿಸಿ, ನನ್ನ ಕಾಲುಗಳನ್ನು ಕಟ್ಟಿ ಪೊಲೀಸರು ಹಲ್ಲೆ ನಡೆಸಿದ್ದಾರೆ. ದೈಹಿಕ ಹಿಂಸೆ ನೀಡಿದ್ದಾರೆ. ಕಳ್ಳತನ ಕೃತ್ಯ ಒಪ್ಪಿಕೊಳ್ಳುವಂತೆ ಗನ್ ತೋರಿಸಿ ಬೆದರಿಸಿದ್ದಾರೆ’ ಎಂದು ಜಬೀನ್ ತಾಜ್ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು. ಈ ದೂರು ಆಧರಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ 30ನೇ ಎಸಿಎಂಎಂ ನ್ಯಾಯಾಲಯದ ಆದೇಶದ ಮೇರೆಗೆ ಕೆಂಪಾಪುರ ಅಗ್ರಹಾರ ಠಾಣೆಯ ಇನ್‌ಸ್ಪೆಕ್ಟರ್‌ ಶಿವಪ್ರಸಾದ್, ಒಬ್ಬರು ಸಬ್‌ ಇನ್‌ಸ್ಪೆಕ್ಟರ್, ಕ್ರೈಂ ಸಿಬ್ಬಂದಿಯಾದ ಶ್ರೀನಿವಾಸ, ಅರ್ಜುನ್ ಗೋಮಲೆ ಹಾಗೂ ಮಹಿಳಾ ಕಾನ್‌ಸ್ಟೆಬಲ್‌ ಹರ್ಷಿತಾ ವಿರುದ್ಧ ಅದೇ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ADVERTISEMENT

‘ಪೊಲೀಸರ ದೌರ್ಜನ್ಯ, ಹಿಂಸೆ ಸಂಬಂಧ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಿದ್ದೇನೆ. ಡಿ. 26ರಂದು ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ’ ಎಂದರು.

‘ಆರೋಪಿಯ ಮಕ್ಕಳಾದ ಇಮ್ರಾನ್ ಮತ್ತು ಇರ್ಫಾನ್ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಅವರು ತಂದುಕೊಟ್ಟ ಆಭರಣಗಳನ್ನು ಬೇರೆಡೆ ಅಡವಿಟ್ಟು ಆರೋಪಿಯೂ ಕೃತ್ಯಕ್ಕೆ ಸಹಕರಿಸುತ್ತಿದ್ದರು’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.