ADVERTISEMENT

ರಾಜಕೀಯ ಒತ್ತಡ: ಚಾರ್ಜ್‌ಶೀಟ್‌ ಸಲ್ಲಿಕೆಗೆ ಎಸಿಬಿ ಮೀನಮೇಷ

ಗುತ್ತಿಗೆ ನೌಕರನ ಬಳಿ ಭಾರಿ ಹಣ ವಶ *ಲೋಕೋಪಯೋಗಿ ಅಧಿಕಾರಿಗೆ ಪಾಲು?

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 21:06 IST
Last Updated 9 ಆಗಸ್ಟ್ 2020, 21:06 IST
ಚಂದ್ರಶೇಖರ್
ಚಂದ್ರಶೇಖರ್   

ಬೆಂಗಳೂರು: ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರ ಬಳಿ ಅಕ್ರಮ ಹಣ ಪ‍ತ್ತೆಯಾದ ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಪ್ರಕರಣ ದಾಖಲಿಸಿ ಐದು ತಿಂಗಳು ಕಳೆಯುತ್ತಾ ಬಂದರೂ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ಎಸಿಬಿ ಅಧಿಕಾರಿಗಳು ಪ್ರಕರಣವನ್ನು ಮುಚ್ಚಿ ಹಾಕಲು ಹೊರಟಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ಲೋಕೋಪಯೋಗಿ ಇಲಾಖೆಯ ಜಂಟಿ ನಿಯಂತ್ರಕ ಸೋಮನಾಥ್‌ ಹಾಗೂ ಹಣಕಾಸು ಇಲಾಖೆಯ (ಲೋಕೋಪಯೋಗಿ ಇಲಾಖೆಯ ಆರ್ಥಿಕ ಕೋಶ) ಗುತ್ತಿಗೆ ನೌಕರ (ಗ್ರೂಪ್‌ ಡಿ) ಸೆಲ್ವಂ ಎಂ. ಪ್ರಕರಣದ ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಸೆಲ್ವಂ ಅವರನ್ನು ಬಾಣಸವಾಡಿ ರೈಲ್ವೆ ನಿಲ್ದಾಣದಲ್ಲಿ ಬೈಯಪ್ಪನಹಳ್ಳಿ ರೈಲ್ವೆ ಠಾಣೆಯ ಪೊಲೀಸರು ಮಾರ್ಚ್‌ 17ರ ಮಧ್ಯರಾತ್ರಿ 12.15ಕ್ಕೆ ವಶಕ್ಕೆ ಪಡೆದಿದ್ದರು. ಈ ವೇಳೆ ಆರೋಪಿ ಮದ್ಯಪಾನ ಮಾಡಿದ್ದರು. ಅವರ ಬಳಿ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿತ್ತು. ವಿಚಾರಣೆ ವೇಳೆ ಸೋಮನಾಥ ಅವರ ಹೆಸರನ್ನು ಸೆಲ್ವಂ ಹೇಳಿದ್ದರು. ಬಳಿಕ ಪೊಲೀಸರು ಪ್ರಕರಣವನ್ನು ಎಸಿಬಿಗೆ ಹಸ್ತಾಂತರಿಸಿದ್ದರು. ಎಸಿಬಿ ಅಧಿಕಾರಿಗಳು ಅಂದೇ ಎಫ್‌ಐಆರ್ ದಾಖಲಿಸಿದ್ದರು. ಆದರೆ, ವಶಪಡಿಸಿಕೊಂಡ ಹಣದ ಮೊತ್ತದ ಉಲ್ಲೇಖವೇ ಎಫ್‌ಐಆರ್‌ನಲ್ಲಿ ಇಲ್ಲ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಣಕಾಸು ಇಲಾಖೆಯ ಉಪ ಕಾರ್ಯದರ್ಶಿ ಮಟ್ಟದ ಇನ್ನೊಬ್ಬ ಅಧಿಕಾರಿಯನ್ನು ಸಹ ಎಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು. ಈ ಹಣಕ್ಕೂ ನನಗೂ ಸಂಬಂಧ ಇಲ್ಲ ಎಂದು ಅಧಿಕಾರಿ ಹೇಳಿಕೆ ನೀಡಿದ್ದರು.

ADVERTISEMENT

ಎಫ್‌ಐಆರ್ ದಾಖಲಿಸಿದ ಮೂರು ತಿಂಗಳಲ್ಲಿ (90 ದಿನಗಳು) ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಬೇಕು. ಆದರೆ, ಈ ಪ್ರಕರಣದಲ್ಲಿ ಇನ್ನೂ ಚಾರ್ಜ್‌ಶೀಟ್‌ ಸಲ್ಲಿಕೆ ಆಗಿಲ್ಲ. ಬಿಜೆಪಿ ಶಾಸಕರೊಬ್ಬರ ಒತ್ತಡಕ್ಕೆ ಮಣಿದು ಎಸಿಬಿ ಅಧಿಕಾರಿಗಳು ಚಾರ್ಜ್‌ಶೀಟ್‌ ಸಲ್ಲಿಸಲು ಮೀನಮೇಷ ಎಣಿಸುತ್ತಿದ್ದಾರೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರಿಗೆ ಕಾಮಗಾರಿಯ ಹಣ ಬಿಡುಗಡೆ ಪತ್ರ (ಎಲ್‌ಒಸಿ) ನೀಡಲು ಈ ಹಣ ಸಂಗ್ರಹ ಮಾಡಲಾಗಿತ್ತು. ಅದನ್ನು ಕೊಂಡೊಯ್ಯುತ್ತಿದ್ದ ವೇಳೆ ಸೆಲ್ವಂ ಸಿಕ್ಕಿಬಿದ್ದಿದ್ದರು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

‘ಭ್ರಷ್ಟಾಚಾರ ಮುಚ್ಚಿ ಹಾಕುವ ಸಂಸ್ಥೆ’
‘ಎಸಿಬಿ ಹಲ್ಲಿಲ್ಲದ ಹಾವು. ಇದು ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಹುಟ್ಟಿಕೊಂಡ ಸಂಸ್ಥೆ. ಎಸಿಬಿ ಅಧಿಕಾರಿಗಳು ಕಾಟಾಚಾರಕ್ಕೆ ಪ್ರಕರಣ ದಾಖಲಿಸುತ್ತಾರೆ. ಇಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣವೂ ಕಡಿಮೆ ಇದೆ. ಇದಕ್ಕೆ ಈ ಪ್ರಕರಣವೇ ಸಾಕ್ಷಿ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಎನ್‌.ದೀಪಕ್‌ ಹೇಳಿದರು.

‘ಎಸಿಬಿಯಲ್ಲಿ ಕೆಲವು ಅಧಿಕಾರಿಗಳು ಅನೇಕ ವರ್ಷಗಳಿಂದ ತಳವೂರಿದ್ದಾರೆ. ಮೊದಲು ಅವರನ್ನು ವರ್ಗಾವಣೆ ಮಾಡಬೇಕು. ಜತೆಗೆ, ಲೋಕಾಯುಕ್ತ ಸಂಸ್ಥೆಗೆ ಬಲ ತುಂಬಿ ಎಸಿಬಿಯ ಪ್ರಕರಣಗಳನ್ನು ಹಸ್ತಾಂತರಿಸಬೇಕು’ ಎಂದು ಅವರು ಆಗ್ರಹಿಸಿದರು.

*
ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಮಾಹಿತಿ ಪಡೆದು ವಿವರ ನೀಡುತ್ತೇನೆ.
-ಎಂ.ಚಂದ್ರಶೇಖರ್‌, ಐಜಿಪಿ. ಎಸಿಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.