ADVERTISEMENT

ಹಬ್ಬಗಳ ಸಂದರ್ಭದಲ್ಲಿ ಮಾಲಿನ್ಯಕ್ಕೆ ಅಂಕುಶ!

ಅರಿಶಿನ ಗಣೇಶ, ಹಸಿರು ಪಟಾಕಿ ಫಲಪ್ರದ l ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಧ್ಯಯನ

ವರುಣ ಹೆಗಡೆ
Published 24 ನವೆಂಬರ್ 2020, 21:06 IST
Last Updated 24 ನವೆಂಬರ್ 2020, 21:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಗಣೇಶ ಹಬ್ಬದ ಅವಧಿಯಲ್ಲಿ ಅರಿಶಿನ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ದೀ‍ಪಾವಳಿ ಹಬ್ಬದ ಸಂದರ್ಭದಲ್ಲಿ ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ ನೀಡಿದ ಪರಿಣಾಮ ಈ ಬಾರಿ ಹಬ್ಬಗಳ ಸಂದರ್ಭದಲ್ಲಿ ಜಲ ಹಾಗೂ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬಂದಿದೆ ಎಂಬುದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದ ಅಧ್ಯಯನದಿಂದ ದೃಢಪಟ್ಟಿದೆ.

ಕೋವಿಡ್ ಕಾರಣ ರಾಜ್ಯ ಸರ್ಕಾರವು ಈ ಬಾರಿ ಸಾರ್ವಜನಿಕ ಗಣೇಶೋತ್ಸವಕ್ಕೆ ನಿರ್ಬಂಧ ವಿಧಿಸಿ, ಜನರು ಒಂದೆಡೆ ಗುಂಪಾಗಿ ಸೇರುವಂತಿಲ್ಲ ಎಂದು ಸೂಚಿಸಿತ್ತು. ಇದರಿಂದಾಗಿ ಪಿಒಪಿ ಗಣೇಶ ಮೂರ್ತಿಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಇನ್ನೊಂದೆಡೆ, ಮಂಡಳಿಯು ಅರಿಶಿನ ಗಣೇಶ ಅಭಿಯಾನ ಹಮ್ಮಿಕೊಂಡಿತ್ತು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸರ್ಕಾರವು ಹಸಿರು ಪಟಾಕಿ ಬಳಸುವಂತೆ ಸೂಚಿಸಿ, ಮಾರ್ಗಸೂಚಿಯನ್ನು ಹೊರಡಿಸಿತ್ತು.

‘ಕಳೆದ ಕೆಲ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಜಲ, ವಾಯು ಹಾಗೂ ಶಬ್ದ ಮಾಲಿನ್ಯವಾಗಿದೆ. ಸಾಮಾನ್ಯ ದಿನಗಳಿಗೆ ಹೋಲಿಕೆ ಮಾಡಿದಲ್ಲಿ ಅಂತಹ ವ್ಯತ್ಯಾಸ ಕಂಡುಬಂದಿಲ್ಲ. ನೀರಿನ ಗುಣಮಟ್ಟದ ಮಾನದಂಡದಲ್ಲಿ ನಿಯಂತ್ರಿತ ತ್ಯಾಜ್ಯ ನಿರ್ವಹಣೆಗೆ ಬಳಸುವ ನೀರಿನ ಗುಣಮಟ್ಟವು (ಇ) ಕಳೆದ ವರ್ಷ ಗಣೇಶ ಮೂರ್ತಿಗಳ ವಿಸರ್ಜನೆಗೂ ಮುನ್ನ ಶೇ 91ರಷ್ಟಿತ್ತು. ವಿಸರ್ಜನೆ ಮಾಡಿದ ಬಳಿಕ ಶೇ 100ಕ್ಕೆ ಏರಿಕೆಯಾಗಿತ್ತು. ಆದರೆ, ಈ ಬಾರಿ ಹಬ್ಬಕ್ಕೂ ಮುನ್ನ ಶೇ 6ರಷ್ಟಿದ್ದ ಈ ಗುಣಮಟ್ಟ, ಶೇ 5ಕ್ಕೆ ಇಳಿಕೆಯಾಗಿದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

ದೀಪಾವಳಿಯಲ್ಲೂ ಇಳಿಕೆ: ಅರಿಶಿನದಲ್ಲಿನ ಬಹುಮುಖ ಗುಣಗಳು ನೀರನ್ನು ಶುದ್ಧಗೊಳಿಸಲು ಸಹಕಾರಿಯಾಗಿದೆ. ಇದರಿಂದಾಗಿ ಗಣೇಶ ಹಬ್ಬದ ಸಂದರ್ಭದಲ್ಲಿ ಕೆರೆಯ ನೀರು ಮಾಲಿನ್ಯಗೊಳ್ಳದಂತೆ ತಡೆಯುವ ಪ್ರಯತ್ನ ಯಶಸ್ವಿಯಾಗಿದೆ. ದೀಪಾವಳಿ ವೇಳೆ ಹೆಚ್ಚುತ್ತಿದ್ದ ವಾಯುಮಾಲಿನ್ಯ ಕೂಡ ನಿಯಂತ್ರಣಕ್ಕೆ ಬಂದಿದೆ. ಕಳೆದ ವರ್ಷ ಹಬ್ಬದ ದಿನದಂದು ಗಾಳಿಯ ಗುಣಮಟ್ಟದ ಸೂಚ್ಯಂಕ 67 ರಷ್ಟಿತ್ತು. ಈ ಬಾರಿ ಅದು 43ಕ್ಕೆ ಇಳಿಕೆಯಾಗಿದೆ ಎಂದು ಉಲ್ಲೇಖಿಸಲಾಗಿದೆ.

‘ಹಬ್ಬಗಳ ವೇಳೆ ಉಂಟಾಗುತ್ತಿದ್ದ ಜಲ ಹಾಗೂ ವಾಯು ಮಾಲಿನ್ಯ ನಿಯಂತ್ರಣ ಮಾಡಲಾಗಿದೆ. ಪಿಒಪಿ ಗಣೇಶ ವಿಗ್ರಹಗಳಿಗೆ ಬಳಸುತ್ತಿದ್ದ ರಾಸಾಯನಿಕ ಮಿಶ್ರಿತ ಬಣ್ಣಗಳು ಕೆರೆಗಳ ನೀರನ್ನು ಮಲಿನ ಮಾಡುತ್ತಿದ್ದವು. ವಿಷಕಾರಿ ತ್ಯಾಜ್ಯವು ಜಲಚರಗಳಿಗೆ ಅಪಾಯವನ್ನೊಡ್ಡುತ್ತಿದ್ದವು. ನೀರಿನ ಮಾಲಿನ್ಯವು ಮಾನವನ ಆರೋಗ್ಯದ ಮೇಲೆ ಕೂಡ ಪ್ರತಿಕೂಲ ಪರಿಣಾಮ ಉಂಟುಮಾಡುತ್ತಿದ್ದವು. ಪರಿಸರಸ್ನೇಹಿ ಗಣೇಶ ಹಬ್ಬದ ಆಚರಣೆಯು ಈ ಬಾರಿ ಅರ್ಥ ಪಡೆದುಕೊಂಡಿದೆ. ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಿದ ಪರಿಣಾಮ ವಾಯುಮಾಲಿನ್ಯವೂ ನಿಯಂತ್ರಣಕ್ಕೆ ಬಂದಿದೆ’ ಎಂದು ಮಂಡಳಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು ತಿಳಿಸಿದರು.

ಗಾಳಿಯ ಗುಣಮಟ್ಟ ‘ಉತ್ತಮ’
ದೀಪಾವಳಿ ವೇಳೆ ನಗರದ ಗಾಳಿಯ ಗುಣಮಟ್ಟದ ಸೂಚ್ಯಂಕವು (ಎಕ್ಯೂಐ) ‘ಉತ್ತಮ’ ಹಂತ ಕಾಯ್ದುಕೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಎಕ್ಯೂಐ ನ.14ರಂದು 48, ನ.15ರಂದು 58 ಹಾಗೂ ನ.16ರಂದು 42ರಷ್ಟಿತ್ತು. ಈ ಮೂರು ದಿನಗಳ ಅವಧಿಯಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕವು ಸರಾಸರಿ 49.33ರಷ್ಟಿತ್ತು. ಈ ಪ್ರಮಾಣವು ದೆಹಲಿಯಲ್ಲಿ 356.66, ಕೊಲ್ಕತ್ತಾದಲ್ಲಿ 172, ಮುಂಬೈನಲ್ಲಿ 140.66, ಹೈದರಾಬಾದ್‌ನಲ್ಲಿ 98 ಹಾಗೂ ಚೆನ್ನೈನಲ್ಲಿ 65ರಷ್ಟಿತ್ತು.

ಗಾಳಿಯ ಗುಣಮಟ್ಟದ ಸೂಚ್ಯಂಕ (ಎಕ್ಯೂಐ)
00–50;
ಉತ್ತಮ
51–100; ಸಮಾಧಾನಕರ
101–200; ಮಧ್ಯಮ
201–300; ಕಳಪೆ
301–400;ತುಂಬಾ ಕಳಪೆ
401 ಮೇಲ್ಪಟ್ಟು; ತೀವ್ರ

ದೀಪಾವಳಿ ಸಂದರ್ಭದಲ್ಲಿ ವಾಯುಮಾಲಿನ್ಯ ಇಳಿಕೆ
ಪ್ರದೇಶ; ಎಕ್ಯೂಐ–2019; ಎಕ್ಯೂಐ–2020

ನಗರದ ರೈಲು ನಿಲ್ದಾಣ; 111 (2019), 76.76 (2020)
ಹೆಬ್ಬಾಳ; 85(2019), 39.33 (2020)
ಜಯನಗರ; 71(2019), 63.67(2020)
ಕವಿಕಾ ಲೇಔಟ್; 90(2019), 44(2020)
ನಿಮ್ಹಾನ್ಸ್; 76(2019), 61.67(2020)
ಸೆಂಟ್ರಲ್ ಸಿಲ್ಕ್‌ ಬೋರ್ಡ್; 69(2019), 61(2020)
ಎಸ್.ಜಿ. ಹಳ್ಳಿ; 111(2019), 76.76(2020)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.