ADVERTISEMENT

ಬದಲಾಗದ ಗ್ರಾಮಗಳ ಚಹರೆ, ತಪ್ಪದ ಸಂಕಷ್ಟ: ಭಾಷಣವೇ ಭೂಷಣ ಅಭಿವೃದ್ಧಿ ಗೌಣ

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 110 ಹಳ್ಳಿಗಳಿಗೆ ಯೋಜನೆ: ಬಾಣಲೆಯಿಂದ ಬೆಂಕಿಗೆ ಬಿದ್ದ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 3:26 IST
Last Updated 20 ಫೆಬ್ರುವರಿ 2024, 3:26 IST
ಕಾನ್ಷಿರಾಮ ನಗರದ ರಸ್ತೆಯ ಸ್ಥಿತಿ
ಕಾನ್ಷಿರಾಮ ನಗರದ ರಸ್ತೆಯ ಸ್ಥಿತಿ   

ಪೀಣ್ಯ ದಾಸರಹಳ್ಳಿ: ಗುಂಡಿ ಬಿದ್ದ ರಸ್ತೆಗಳು, ಅಲ್ಲಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮ್ಯಾನ್‌ಹೋಲ್‌ಗಳು, ಜಲ್ಲಿ ತುಂಬಿದ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಹೈರಾಣಾಗುತ್ತಿರುವ ಸವಾರರು...‌

ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ಸಿಡೇದಹಳ್ಳಿ, ಚಿಕ್ಕಸಂದ್ರ, ಮ್ಯಾದರಹಳ್ಳಿ, ಶೆಟ್ಟಿಹಳ್ಳಿ ಮತ್ತು ಅಬ್ಬಿಗೆರೆಯಲ್ಲಿ ಕಾಡುತ್ತಿರುವ ಸಮಸ್ಯೆಗಳಿವು...

2007ರಲ್ಲಿ 110 ಹಳ್ಳಿಗಳು ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದ್ದವು. ಆಗ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಐದು ಗ್ರಾಮಗಳು ಸೇರ್ಪಡೆಗೊಂಡಿ ದ್ದವು. ಈ ಬೆಳವಣಿಗೆಯ ನಂತರ ಸ್ಥಳೀಯರಲ್ಲಿ ‘ಅಭಿವೃದ್ಧಿಯ’ ಹೊಸ ಭರವಸೆ ಮೂಡಿತ್ತು. ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಕಲ್ಪಿಸುವ ವಿಚಾರದಲ್ಲಿ ಜನರು ಸಹ ಸಂತೋಷದಲ್ಲಿದ್ದರು. ಆದರೆ, ದಶಕ ‌ಕಳೆದರೂ ಈ ಹಳ್ಳಿಗಳು ನಿರೀಕ್ಷಿತ ಪ್ರಗತಿ ಕಂಡಿಲ್ಲ. ಮೂಲಸೌಕರ್ಯಗಳ ತೊಂದರೆಯಿಂದಾಗಿ ಜನರ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.

ADVERTISEMENT

ನೀರು, ರಸ್ತೆ ಸಮಸ್ಯೆ: 

ಬಾಗಲಗುಂಟೆ ವಾರ್ಡ್ ಸಿಡೇದಹಳ್ಳಿ, ಸಿದ್ದೇಶ್ವರ ಬಡಾವಣೆ, ಕಿರ್ಲೋಸ್ಕರ್ ಬಡಾವಣೆ ರಸ್ತೆಗಳು ಹಾಳಾಗಿದ್ದು ಅಲ್ಲಲ್ಲಿ ತೇಪೆ ಹಾಕಲಾಗಿದೆ. ಕೆಲವು ವಾರ್ಡ್‌ಗಳಲ್ಲಿ ಕುಡಿಯುವ ನೀರು, ರಸ್ತೆ, ಒಳಚರಂಡಿ ಇನ್ನಿತರೆ ಮೂಲಸೌಕರ್ಯಗಳ ವಿಳಂಬದಿಂದಾಗಿ ಸ್ಥಳೀಯರು ಪರದಾಡುವಂತಾಗಿದೆ.

ಕೆಲವು ಕಡೆ ಚರಂಡಿಗಳಲ್ಲಿ ಮತ್ತು ರಾಜಕಾಲುವೆಯಲ್ಲಿ ಕಸ ತುಂಬಿದೆ. ಶೆಟ್ಟಿಹಳ್ಳಿ ವಾರ್ಡ್ ಚಿಕ್ಕಸಂದ್ರದ 14, 15 ಮತ್ತು 16ನೇ ಕ್ರಾಸ್, ಬೋನ್‌ಮಿಲ್‌ನಿಂದ ರಾಜಣ್ಣ ಬಡಾವಣೆವರೆಗಿನ ರಸ್ತೆ ಹಾಳಾಗಿ ನಡೆದಾಡುವುದೂ ಕಷ್ಟವಾಗಿದೆ.

ಅಬ್ಬಿಗೆರೆ ರಸ್ತೆ, ಗಂಗಮ್ಮನ ಗುಡಿ ರಸ್ತೆ, ಕಾನ್ಷಿರಾಮ ನಗರ ರಸ್ತೆಗಳಲ್ಲಿ ಕಾವೇರಿ ನೀರಿನ ಸಂಪರ್ಕಕ್ಕಾಗಿ ಪೈಪ್ ಅಳವಡಿಸಲು ಅಗೆದ ರಸ್ತೆಗಳಲ್ಲಿ ಸಂಚರಿಸಲು ವಾಹನ ಸವಾರರು ಪರದಾಡುತ್ತಿದ್ದಾರೆ. ಪಾಲಿಕೆ ಮತ್ತು ಬೆಂಗಳೂರು ಜಲಮಂಡಳಿ ಹಲವು ನೆಪಗಳನ್ನು ಒಡ್ಡಿ ಕಾಮಗಾರಿಯ ಗಡುವು ಮುಂದೂಡುತ್ತಲೇ ಇದೆ. ಈ ಹಳ್ಳಿಗಳಿಗೆ ನೀರು ಒದಗಿಸಲು ಶುರುವಾದ ಕಾವೇರಿ 5ನೇ ಹಂತದ ಯೋಜನೆಯು ಸಹ ಕುಂಟುತ್ತ ಸಾಗಿದೆ. ಜನರು ದೂಳು ಮತ್ತು ಗುಂಡಿ ಬಿದ್ದಿರುವ ರಸ್ತೆಗಳಲ್ಲಿ ಸಾಗಬೇಕಿದೆ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ.

ಬೋನ್‌ಮಿಲ್‌ನಿಂದ ರಾಜಣ್ಣ ಬಡಾವಣೆವರೆಗಿನ ರಸ್ತೆ ಹಾಳಾಗಿದ್ದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. 
ಹೆಚ್ಚಿನ ಅನುದಾನ ಕಲ್ಪಿಸಲಿ
ಬಡಾವಣೆಯ ಹಲವು ರಸ್ತೆಗಳು ಇದುವರೆಗೂ ಡಾಂಬರೀಕರಣ ಕಂಡಿಲ್ಲ. ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು ಗುಂಡಿ ಬಿದ್ದಿರುವ ರಸ್ತೆಗಳಲ್ಲಿ ಸಂಚರಿಸಲು ಭಯಪಡುತ್ತಾರೆ. ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾದ ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕಲ್ಪಿಸಬೇಕು.-ವೈ.ಬಿ.ಎಚ್.ಜಯದೇವ್, ಚಿಕ್ಕಸಂದ್ರದ 15ನೇ ಕ್ರಾಸ್‌ ನಿವಾಸಿ
ಚಿಕ್ಕಸಂದ್ರ– ಎಜಿಬಿ ಬಡಾವಣೆಯ ರಸ್ತೆಯ ಪಕ್ಕದಲ್ಲಿರುವ ರಾಜ ಕಾಲುವೆಯಲ್ಲಿ ಕಸ ತುಂಬಿದೆ.
ರಘು ಸೂರ್ಯ 
ಮೂಲಸೌಕರ್ಯಗಳನ್ನು ಕಲ್ಪಿಸಿಲ್ಲ. ಇದರಿಂದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲವು ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸಿ ಬಿಲ್‌ ಮಾಡಿಸಿಕೊಂಡಿದ್ದಾರೆ.
ರಘು ಸೂರ್ಯ ಸವಾಲ್ ಟೀಮ್ ಸಂಸ್ಥಾಪಕ ಸಿಡೇದಹಳ್ಳಿ
ಮಂಜುನಾಥ್ 
ಕಾವೇರಿ ನೀರು ಪೂರೈಕೆಗಾಗಿ ಅಗೆದ ರಸ್ತೆಗಳಿಗೆ ಸರಿಯಾಗಿ ಡಾಂಬರು ಹಾಕಿಲ್ಲ. ಅಬ್ಬಿಗೆರೆ ರಸ್ತೆ ಲಕ್ಷ್ಮಿಪುರ ರಸ್ತೆ ಹಾಳಾಗಿದ್ದು ನಿತ್ಯವೂ ದೂಳಿನಿಂದ ಬಸವಳಿಯುವ ಸ್ಥಿತಿಯಿದೆ.
ಮಂಜುನಾಥ್ ಅಬ್ಬಿಗೆರೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.