ADVERTISEMENT

ಅತಿ ಮಳೆಯಿಂದ ರಸ್ತೆಗುಂಡಿ ಹೆಚ್ಚಳ: ತುಷಾರ್‌ ಗಿರಿನಾಥ್‌

ಮೇನಿಂದ 20 ಸಾವಿರ ಗುಂಡಿ ಮುಚ್ಚಲಾಗಿದೆ: ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 20:53 IST
Last Updated 26 ಆಗಸ್ಟ್ 2022, 20:53 IST

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಮೇ ತಿಂಗಳಿನಿಂದ ಈವರೆಗೆ 20 ಸಾವಿರ ರಸ್ತೆಗುಂಡಿಗಳನ್ನು ಮುಚ್ಚಿದ್ದೇವೆ. ಆದರೆ, ಇತ್ತೀಚೆಗೆ ಅತಿ ಹೆಚ್ಚು ಮಳೆಯಾಗಿರುವುದರಿಂದ ರಸ್ತೆಗುಂಡಿಗಳು ಇನ್ನೂ ಹೆಚ್ಚಾಗಿವೆ. ಮಳೆಯಿಂದ ಗುಂಡಿ ಮುಚ್ಚಲೂ ತೊಂದರೆಯಾಗುತ್ತಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

‘ಘಟಕದಲ್ಲಿ ಡಾಂಬರು ಮಿಕ್ಸ್‌ ಮಾಡಿ ಇಡಲೂ ಮಳೆಯಿಂದ ಅಡ್ಡಿಯಾಗಿದೆ. ಕೋಲ್ಡ್‌ ಮಿಕ್ಸ್‌ನಿಂದ ರಸ್ತೆ ಗುಂಡಿ ಮುಚ್ಚಲು ವ್ಯವಸ್ಥೆ ಮಾಡುತ್ತಿದ್ದೇವೆ. ಹವಾಮಾನ ಸರಿಹೋದರೆ 40 ಲೋಡ್‌ ಮಿಕ್ಸ್‌ನಿಂದ ಗುಂಡಿಗಳನ್ನು ತುಂಬಲು ಯೋಜಿಸಲಾಗಿದೆ. ಪ್ರಮುಖ ರಸ್ತೆಗಳನ್ನು ಮುಚ್ಚಲಾಗುತ್ತಿದೆ. ವಾರ್ಡ್‌ ರಸ್ತೆಗಳಲ್ಲೂ ಗುಂಡಿ ಮುಚ್ಚಲು ಎಂಜಿನಿಯರ್‌ ಹಾಗೂ ಏಜೆನ್ಸಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ರಸ್ತೆ ಗುಂಡಿ ಮುಚ್ಚಲು ಈ ವರ್ಷ ₹25 ಕೋಟಿಯಿಂದ 30 ಕೋಟಿ ವೆಚ್ಚ ಮಾಡಲಾಗುತ್ತಿದೆ’ ಎಂದರು.

‘ಪ್ಲಾಸ್ಟಿಕ್‌ ನಿಷೇಧ ಮಾಡಲು ಉತ್ಪಾದಕರ ಮೇಲೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಯಾರು ನಿಷೇಧಿತ ಪ್ಲಾಸ್ಟಿಕ್‌ ತಯಾರು ಮಾಡುತ್ತಿದ್ದಾರೋ ಅವರಿಗೆ ಟ್ರೇಡ್‌ ಲೈಸೆನ್ಸ್‌ ರದ್ದು ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

ADVERTISEMENT

‘ರಸ್ತೆಯಲ್ಲಿ ಕಸ ಹಾಕುವ ಬ್ಲ್ಯಾಕ್‌ ಸ್ಪಾಟ್‌ಗಳು ಇತ್ತೀಚೆಗೆ ಕಡಿಮೆ ಆಗಿವೆ. ಕೆಲವರು ರಸ್ತೆಯಲ್ಲಿ ಏಕೆ ಕಸ ಹಾಕುತ್ತಿದ್ದಾರೆ ಎಂಬುದನ್ನು ನೋಡುತ್ತಿದ್ದೇವೆ. ಅಂಗಡಿ ಮಾಲೀಕರೊಂದಿಗೆ ಮಾತನಾಡಿ, ಎಲ್ಲೆಲ್ಲೋ ಕಸ ಹಾಕದಂತೆ ಮನವಿ ಮಾಡಿಕೊಳ್ಳಲಾಗುತ್ತದೆ. ನಾಗರಿಕರಿಗೂ ಅರಿವು ಮೂಡಿಸಲಾಗುತ್ತದೆ. ದಂಡ ಹಾಕುವುದೇ ಮುಖ್ಯವಲ್ಲ’ ಎಂದು ಹೇಳಿದರು.

‘ಕಲಾಸಿಪಾಳ್ಯ ಮಾರುಕಟ್ಟೆಯನ್ನು ಸ್ಥಳಾಂತರಿಸುವ ನಿರ್ಣಯ ಸ್ವಾಗತಾರ್ಹ. ಇದರಿಂದ ಕಸದ ಸಮಸ್ಯೆ, ಸಂಚಾರ ದಟ್ಟಣೆ ನಿಯಂತ್ರಣವಾಗುತ್ತದೆ’ ಎಂದು ಹೇಳಿದರು.

ಒಳಚರಂಡಿಯಿಂದ ಕೆರೆಗೆ ತ್ಯಾಜ್ಯ: ಒಳಚರಂಡಿ ವ್ಯವಸ್ಥೆ 110 ಹಳ್ಳಿಗಳಲ್ಲಿ ಸರಿಯಾಗಿ ಇಲ್ಲದಿರುವುದರಿಂದ ಕೆರೆಗಳಿಗೆ ಒಳಚರಂಡಿ ನೀರು ಹರಿಯುತ್ತಿದೆ. ಹೀಗಾಗಿ ಕೆರೆ ನೀರು ಕಲ್ಮಶವಾಗುತ್ತಿದೆ. ಒಳಚರಂಡಿ ವ್ಯವಸ್ಥೆ ಪೂರ್ಣಗೊಂಡ ನಂತರ ಯಾವುದೇ ರೀತಿಯ ಕಲ್ಮಶ ಹರಿಯದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಗಮನಕ್ಕೆ ಬಂದಿರಲಿಲ್ಲ

‘ರೋಷನ್‌ ಬೇಗ್‌ ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯಿಂದ ಮಾಹಿತಿ ರವಾನೆಯಾಗಿಲ್ಲ ಎಂಬ ದೂರಿದೆ. ನಮಗೆ ಪತ್ರ ಬಂದಿದ್ದರ ಮಾಹಿತಿ ಇಲ್ಲ. ಈಗ ಗಮನಕ್ಕೆ ಬಂದಿದೆ. ಮಾಹಿತಿ ಒದಗಿಸದಿರುವುದು ತಪ್ಪೇ. ಅದು ಪತ್ರ ಎಲ್ಲಿದೆ ಎಂದು ಪರಿಶೀಲಿಸಿ, ವಾರ, 10 ದಿನದಲ್ಲಿ ಕಳುಹಿಸಿಕೊಡುತ್ತೇವೆ. ಅಧಿಕಾರಿಗಳ ಮಾಹಿತಿ ಕೇಳಿದ್ದಾರೆ ಅಷ್ಟೆ. ಅದರ ಹೆಸರು, ವಿಳಾಸ ಕೇಳಿದ್ದಾರೆ. ಅದನ್ನು ಕೊಡುತ್ತೇವೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.