ಬೆಂಗಳೂರು: ಪಾತ್ರೆ ತೊಳೆಯುವ ಪೌಡರ್‌ನ ಪ್ರಚಾರದ ನೆಪದಲ್ಲಿ ಹಾಗೂ ಚಿನ್ನಾಭರಣ ಪಾಲಿಷ್ ಮಾಡುವವರ ಸೋಗಿನಲ್ಲಿ ಬಂದ ಕಳ್ಳರು, ಮಹಿಳೆಯರ ಗಮನ ಬೇರೆಡೆ ಸೆಳೆದು ಲಕ್ಷಾಂತರ ಮೌಲ್ಯದ ಆಭರಣ ದೋಚಿಕೊಂಡು ಹೋಗಿದ್ದಾರೆ.
‘ಒಡವೆಗಳಿದ್ದರೆ ಕೊಡಿ. ಪಾಲಿಷ್ ಮಾಡಿ ಫಳ ಫಳ ಹೊಳೆಯುವಂತೆ ಮಾಡಿಕೊಡುತ್ತೇವೆ’ ಎಂದು ನಂಬಿಸಿ ಜುಲೈ 11ರಂದು ಬೈಯಪ್ಪನಹಳ್ಳಿಯ ಜಿ.ಎಂ.ಪಾಳ್ಯ ನಿವಾಸಿ ರೇಖಾ ಅವರಿಗೆ ವಂಚಿಸಿದ್ದಾರೆ. ಪೊಲೀಸರು ಸಿ.ಸಿ ಟಿ.ವಿ ಕ್ಯಾಮೆರಾಗಳ ಸುಳಿವು ಆಧರಿಸಿ ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.
‘ಬೆಳಿಗ್ಗೆ 11.30ಕ್ಕೆ ಮನೆ ಬಾಗಿಲು ಬಡಿದ ಇಬ್ಬರು, ಕಡಿಮೆ ಬೆಲೆಗೆ ಆಭರಣ ಪಾಲಿಷ್ ಮಾಡಿಕೊಡುವುದಾಗಿ ಹೇಳಿದರು. ಮೊದಲು ತಾಮ್ರದ ಚೊಂಬು ಹಾಗೂ ಬೆಳ್ಳಿ ವಸ್ತುಗಳನ್ನು ಕೊಟ್ಟೆ. ಅವುಗಳನ್ನು ಯಾವುದೋ ಪುಡಿಯಿಂದ ಉಜ್ಜಿ, ಹೊಳೆಯುವಂತೆ ಮಾಡಿಕೊಟ್ಟರು. ನಂತರ, ‘ಒಡವೆಗಳಿದ್ದರೆ ಕೊಡಿ. ಅವೂ ಹೀಗೆ ಹೊಳೆಯುವಂತೆ ಮಾಡಿಕೊಡುತ್ತೇವೆ’ ಎಂದರು. ಅವರ ಮಾತನ್ನು ನಂಬಿ 30 ಗ್ರಾಂನ ಚಿನ್ನದ ಮಾಂಗಲ್ಯ ಸರ, ಐದು ಉಂಗುರಗಳು, ಒಂದು ಜೊತೆ ಜುಮುಕಿಯನ್ನೂ ತಂದು ಕೊಟ್ಟೆ’ ಎಂದು ರೇಖಾ ದೂರಿನಲ್ಲಿ ವಿವರಿಸಿದ್ದಾರೆ.
‘ಸ್ವಲ್ಪ ಸಮಯದ ನಂತರ ಕುಕ್ಕರ್ ತರಿಸಿಕೊಂಡ ಅವರು, ಯಾವುದೋ ರಾಸಾಯನಿಕದ ಜತೆಗೆ ಒಡವೆಗಳನ್ನೂ ಅದರಲ್ಲಿ ಹಾಕಿದಂತೆ ಮಾಡಿದರು. ನಂತರ ಮುಚ್ಚಳ ಮುಚ್ಚಿ ಕುಕ್ಕರ್ ವಾಪಸ್ ಕೊಟ್ಟರು. ‘ಕುಕ್ಕರ್ ಅನ್ನು ಸ್ಟೌ ಮೇಲಿಡಿ. ಒಂದು ವಿಷಲ್ ಆಗುವವರೆಗೂ ಕಾಯಿಸಿ. ನಂತರ ತಣ್ಣನೆ ನೀರಿನಿಂದ ಒಡವೆಗಳನ್ನು ತೊಳೆಯಿರಿ. ಆಗ ಬಣ್ಣ ಹೇಗಿರುತ್ತದೆ ನೋಡಿ’ ಎಂದು ಹೇಳಿ ₹ 150 ಶುಲ್ಕ ಪಡೆದುಕೊಂಡು ಹೊರಟು ಹೋದರು. ಅಂತೆಯೇ ಒಂದು ವಿಷಲ್ ಆದ ಬಳಿಕ ಮುಚ್ಚಳ ತೆಗೆದು ನೋಡಿದಾಗ ಅದರಲ್ಲಿ ಒಡವೆಗಳೇ ಇರಲಿಲ್ಲ’ ಎಂದು ಹೇಳಿದ್ದಾರೆ.
ಪೌಡರ್ ಮೂಸಿ ಪ್ರಜ್ಞೆ ತಪ್ಪಿದರು!
ಜುಲೈ 7ರಂದು ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲೂ ಸೆಲ್ವಿ ಎಂಬುವರಿಗೆ ಇದೇ ರೀತಿ ವಂಚನೆಯಾಗಿದೆ.
‘ಬೆಳಿಗ್ಗೆ 10.30ರ ಸುಮಾರಿಗೆ ಮನೆ ಮುಂದೆ ಒಬ್ಬಳೇ ನಿಂತಿದ್ದೆ. ಈ ವೇಳೆ ಬಂದ ಇಬ್ಬರು, ‘ಪಾತ್ರೆ ಹಾಗೂ ಟೈಲ್ಸ್ ತೊಳೆಯುವ ಪೌಡರ್‌ನ ಪ್ರಚಾರಕ್ಕೆ ಬಂದಿದ್ದೇವೆ. ನೀವು ಸ್ಯಾಂಪಲ್ ನೋಡಿ. ಚೆನ್ನಾಗಿದೆ ಎನಿಸಿದರೆ, ಹೊರಗಡೆ ಅಂಗಡಿಗಳಲ್ಲಿ ಖರೀದಿ ಮಾಡಬಹುದು’ ಎಂದು ಹೇಳಿದರು. ಎಷ್ಟೇ ಬೇಡವೆಂದರೂ ಸ್ಯಾಂಪಲ್ ನೋಡುವಂತೆ ಬಲವಂತ ಮಾಡಿದರು’ ಎಂದು ಸೆಲ್ವಿ ಬೊಮ್ಮನಹಳ್ಳಿ ಠಾಣೆಗೆ ದೂರು ಕೊಟ್ಟಿದ್ದಾರೆ.
‘ಇದೇ ಸಮಯಕ್ಕೆ ನೆರೆಮನೆಯ ವೆಂಕಟೇಶ್ ಸಹ ಬಂದು ಏನೆಂದು ವಿಚಾರಿಸಿದರು. ಅವರಿಗೂ ಅದೇ ರೀತಿ ಹೇಳಿದ ಅಪರಿಚಿತರು, ಇಬ್ಬರ ಕೈ ಮೇಲೂ ಪೌಡರ್ ಹಾಕಿದರು. ಅದರ ವಾಸನೆ ನೋಡುತ್ತಿದ್ದಂತೆಯೇ ನಾವು ಪ್ರಜ್ಞೆ ತಪ್ಪಿ ಬಿದ್ದೆವು. ಸ್ವಲ್ಪ ಸಮಯದ ಬಳಿಕ ಎಚ್ಚರವಾದಾಗ ಮೈಮೇಲಿದ್ದ ಒಡವೆಗಳೇ ಮಾಯವಾಗಿದ್ದವು.’
‘ಚಿನ್ನದ ಮಾಂಗಲ್ಯ ಸರ, ಓಲೆಗಳು, ಒಂದು ಜೊತೆ ಮಾಟಿ, ಚಿನ್ನದ ಉಂಗುರಗಳನ್ನು ಬಿಚ್ಚಿಕೊಂಡು ಹೊರಟು ಹೋಗಿದ್ದರು. ಸ್ಥಳೀಯರ ಜತೆ ಸೇರಿ ಸುತ್ತಮುತ್ತಲ ರಸ್ತೆಗಳಲ್ಲಿ ಹುಡುಕಾಟ ನಡೆಸಿದರೂ ಅವರು ಪತ್ತೆಯಾಗಲಿಲ್ಲ. ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ವ್ಯವಹರಿಸುತ್ತಿದ್ದ ಆ ಇಬ್ಬರ ವಯಸ್ಸು 30 ರಿಂದ 35 ಇರಬಹುದು’ ಎಂದು ಸೆಲ್ವಿ ವಿವರಿಸಿದ್ದಾರೆ.
‘ಜನ ನಮ್ಮ ಮಾತು ಕೇಳಲ್ಲ’
‘ಅಪರಿಚಿತರ ಜತೆ ವ್ಯವಹರಿಸಬೇಡಿ, ಮನೆಗೆ ಸೇರಿಸಬೇಡಿ, ಯಾವುದೇ ಆಮಿಷಗಳಿಗೆ ಒಳಗಾಗಬೇಡಿ, ಮನೆ ಬಾಗಿಲಿಗೆ ಬರುವ ಜ್ಯೋತಿಷಿಗಳನ್ನು ನಂಬಬೇಡಿ.... ಎಂದು ಎಷ್ಟೇ ತಿಳಿವಳಿಕೆ ನೀಡಿದರೂ ಜನ ನಮ್ಮ ಮಾತು ಕೇಳುತ್ತಿಲ್ಲ. ಅಲ್ಪ ಹಣ ಉಳಿಸಲು ಹೋಗಿ, ದೊಡ್ಡ ನಷ್ಟಕ್ಕೆ ಒಳಗಾಗುತ್ತಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಗಮನ ಬೇರೆಡೆ ಸೆಳೆದು ವಂಚಿಸುವ ಗ್ಯಾಂಗ್‌ಗಳನ್ನು ಮಟ್ಟ ಹಾಕುತ್ತಲೇ ಇದ್ದೇವೆ. ಆದರೂ, ಹೊಸ ಹೊಸ ತಂಡಗಳು ನಗರಕ್ಕೆ ಬಂದು ಕಾರ್ಯಾಚರಣೆ ನಡೆಸುತ್ತಿವೆ. ಜನರ ಮುಗ್ಧತೆ ಹಾಗೂ ಆಸೆಗಳೇ ವಂಚಕರ ಬಂಡವಾಳ. ಈ ಬಗ್ಗೆ ಜನ ಎಚ್ಚರ ವಹಿಸಲೇಬೇಕು. ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಬಂಧಿಸಲಾಗುವುದು’ ಎಂದು ಹೇಳಿದರು.
ಮುಖ್ಯಾಂಶಗಳು
* ಇಬ್ಬರು ಮಹಿಳೆಯರಿಗೆ ವಂಚನೆ
* ಕಳ್ಳರ ಚಹರೆ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆ
* ಪಾಲಿಷ್ ಹಾಕುವ ನೆಪದಲ್ಲೂ ಚಿನ್ನ ಕದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.