ADVERTISEMENT

ಯಲಹಂಕ | ವಿದ್ಯುತ್‌ ಕಡಿತ: ಸಾರ್ವಜನಿಕರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 15:54 IST
Last Updated 20 ಮಾರ್ಚ್ 2025, 15:54 IST
ವಿದ್ಯುತ್‌ ಕಡಿತ
ವಿದ್ಯುತ್‌ ಕಡಿತ   

ಯಲಹಂಕ:  ಬ್ಯಾಟರಾಯನಪುರ ಹಾಗೂ ಯಲಹಂಕ ಭಾಗದ ಗ್ರಾಮಗಳಲ್ಲಿ ವಿದ್ಯುತ್‌ ಕಡಿತದ ಸಮಸ್ಯೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ.

ಬ್ಯಾಟರಾಯನಪುರ, ಜಕ್ಕೂರು, ಕೊಡಿಗೇಹಳ್ಳಿ, ಅಮೃತಹಳ್ಳಿ, ಕೆಂಪಾಪುರ, ದಾಸರಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಪದೇ ಪದೇ ವಿದ್ಯುತ್‌ ಕಡಿತವಾಗುತ್ತಿದೆ. ಇದರಿಂದ ಮನೆಗಳು, ಸಣ್ಣಪುಟ್ಟ ಕಾರ್ಖಾನೆಗಳು ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ನಿತ್ಯದ ಕೆಲಸಕಾರ್ಯಗಳಿಗೆ ಅಡಚಣೆಯಾಗುತ್ತಿದೆ ಎಂದು ನಾಗರಿಕರು ದೂರಿದ್ದಾರೆ.

‘ದಿನದಲ್ಲಿ ಐದಾರು ಬಾರಿ ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ. ಅದರಲ್ಲೂ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ವಿದ್ಯುತ್‌ ಕಡಿತಗೊಳಿಸುವುದರಿಂದ ಕೆಲಸಗಳಿಗೆ ತೆರಳುವ ಕಾರ್ಮಿಕರಿಗೆ ಮತ್ತು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದೆ. ಉಪಾಹಾರ ತಯಾರಿಸಲು ಸಾಧ್ಯವಾಗುತ್ತಿಲ್ಲ. ಬೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದರೆ, ಅವರು ಸ್ವೀಕರಿಸುವುದಿಲ್ಲ’ ಎಂದು ಜಕ್ಕೂರು ಗ್ರಾಮದ ನಿವಾಸಿ ಗೋವಿಂದರಾಜ್‌ ದೂರಿದರು.

ADVERTISEMENT

‘ಪ್ರತಿದಿನ ಆಗಾಗ್ಗೆ ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ. ಅಡುಗೆ ಕೆಲಸ, ಟ್ಯಾಂಕ್‌ಗೆ ನೀರು ತುಂಬಿಸುವುದು ಸೇರಿದಂತೆ ಹಲವು ಕಾರ್ಯಗಳಿಗೆ ತೊಂದರೆಯಾಗಿದೆ. ಫ್ಯಾನ್‌ ಇಲ್ಲದೇ  ಹಿರಿಯ ನಾಗರಿಕರು ಮತ್ತು ರೋಗಿಗಳು ಸೆಖೆಯಿಂದ ಬಳಲಬೇಕಾಗಿದೆ. ಪರೀಕ್ಷೆ ಆರಂಭವಾಗಿರುವುದರಿಂದ ವಿದ್ಯಾರ್ಥಿಗಳ ಅಧ್ಯಯನಕ್ಕೂ ಸಮಸ್ಯೆಯಾಗುತ್ತಿದೆ. ಕೂಡಲೇ ಅಸಮರ್ಪಕ ವಿದ್ಯುತ್‌ ಪೂರೈಕೆ ಸಮಸ್ಯೆಯನ್ನು ನಿವಾರಣೆ ಮಾಡಬೇಕು’ ಎಂದು ಮಾರುತಿನಗರ ನಿವಾಸಿ ಶಾರದ ಒತ್ತಾಯಿಸಿದರು.

ಕಾಮಗಾರಿಗಳಿಂದ ಸಮಸ್ಯೆ: ಬೆಸ್ಕಾಂ
‘ಸಹಕಾರ ನಗರದ ರಾಧಾಕೃಷ್ಣ ಕಲ್ಯಾಣ ಮಂಟಪ ಮುಖ್ಯರಸ್ತೆಯಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ ನಡೆಯುತ್ತಿದೆ. ಜಲಮಂಡಳಿಯವರು ಕಾವೇರಿ ಕೊಳವೆ ಅಳವಡಿಸಲು ರಾತ್ರೋ ರಾತ್ರಿ ರಸ್ತೆ ಅಗೆಯುತ್ತಾರೆ, ನಮ್ಮ ಗಮನಕ್ಕೆ ತರುವುದಿಲ್ಲ. ಖಾಸಗಿ ಕಂಪನಿಗಳು ಕೇಬಲ್‌ಗಳ ಅಳವಡಿಕೆಗೂ ರಸ್ತೆ ಅಗೆಯುವುದು, ಇಂಥ ಕಾಮಗಾರಿಗಳ ವೇಳೆ ವಿದ್ಯುತ್ ತಂತಿಗಳು ತುಂಡಾಗುತ್ತವೆ. ಇವುಗಳನ್ನು ಪರಿಶೀಲಿಸಿ ಸರಿಪಡಿಸಲು ಕೆಲವೊಮ್ಮೆ ಗಂಟೆಗಳೇ ಹಿಡಿಯುತ್ತವೆ. ಇಷ್ಟನ್ನು ಹೊರತುಪಡಿಸಿ, ವಿದ್ಯುತ್ ನಿರ್ವಹಣೆಯಲ್ಲಿ ಯಾವುದೇ ಸಮಸ್ಯೆಯಿಲ್ಲ’ ಎಂದು ಬೆಸ್ಕಾಂನ ಸಹಕಾರನಗರ, ಸಿ-8 ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಡಾಕಾ ನಾಯಕ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.