ADVERTISEMENT

‘ಅಪ್ಪು’ ಜನ್ಮದಿನ; ‘ಪುನೀತ’ ನಮನ...: ಟ್ವಿಟರ್‌ನಲ್ಲಿ ಪತ್ರ ಹಂಚಿಕೊಂಡ ಶಿವಣ್ಣ

ನಗರದೆಲ್ಲೆಡೆ ವಿವಿಧ ಸೇವಾ ಕಾರ್ಯಗಳ ಮೂಲಕ ಹುಟ್ಟು ಹಬ್ಬ ಆಚರಣೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 22:41 IST
Last Updated 17 ಮಾರ್ಚ್ 2023, 22:41 IST
ನಟ ಪುನೀತ್ ರಾಜಕುಮಾರ್ ಜನ್ಮದಿನದ ಪ್ರಯುಕ್ತ ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅವರ ಸಮಾಧಿಯ ದರ್ಶನ ಪಡೆಯಲು ಅಭಿಮಾನಿಗಳು ಶುಕ್ರವಾರ ಸೇರಿದ್ದರು  –ಪ್ರಜಾವಾಣಿ ಚಿತ್ರ
ನಟ ಪುನೀತ್ ರಾಜಕುಮಾರ್ ಜನ್ಮದಿನದ ಪ್ರಯುಕ್ತ ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅವರ ಸಮಾಧಿಯ ದರ್ಶನ ಪಡೆಯಲು ಅಭಿಮಾನಿಗಳು ಶುಕ್ರವಾರ ಸೇರಿದ್ದರು  –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ 48ನೇ ಜನ್ಮದಿನವಾದ ಶುಕ್ರವಾರ (ಮಾರ್ಚ್‌ 17) ಅಭಿಮಾನಿಗಳು ಅಪ್ಪು ನೆನಪುಗಳನ್ನು ಮೆಲುಕು ಹಾಕಿದರು.

ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಪುನೀತ್‌ ಅವರ ಸಮಾಧಿಯನ್ನು ಹೂಗಳಿಂದ ಅಲಂಕರಿಸಲಾಗಿತ್ತು. ಸಾವಿರಾರು ಅಭಿಮಾನಿಗಳು ಅಲ್ಲಿ ಜಮಾಯಿಸಿ ಸಮಾಧಿಯ ದರ್ಶನ ಪಡೆದರು. ಸಮಾಧಿಯ ಒಂದು ಪಾರ್ಶ್ವದಲ್ಲಿ ಮೇಣದಿಂದ ತಯಾರಿಸಿದ ಪುನೀತ್‌ ಅವರ ಮೂರ್ತಿಯನ್ನು ಸ್ಥಾಪಿಸಲಾಗಿತ್ತು. ಅಭಿಮಾನಿಗಳು ತಮ್ಮ ಪ್ರೀತಿಯ ‘ಅಪ್ಪು’ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಪುನೀತ್‌ ಅವರ ‘ಬೊಂಬೆ ಹೇಳುತೈತೆ’ ಹಾಡನ್ನು ಹಾಡಿ ಅಭಿಮಾನ ಮೆರೆದರು. ಅಪ್ಪು ಒಡನಾಟವನ್ನು ಸ್ಮರಿಸಿದರು. ಎಂದಿನಂತೆ ಪುನೀತ್‌ ನೆನಪು ಸಾರುವ ಭಾವಚಿತ್ರ, ಟೀ ಷರ್ಟ್‌, ಉಡುಗೊರೆ, ಆಟಿಕೆಗಳು ಭರ್ಜರಿಯಾಗಿ ಮಾರಾಟಗೊಂಡವು.

ಪುನೀತ್‌ ಸಹೋದರ ಶಿವರಾಜ್‌ ಕುಮಾರ್‌ ಅವರು ಈ ಸಂಬಂಧ ದೀರ್ಘ ಪತ್ರವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

‘ಅಪ್ಪು, ನೀನು ಹುಟ್ಟಿದಾಗ ನಮ್ಮ ಮನೆಯಲ್ಲಿ ಉಲ್ಲಾಸ ಉಕ್ಕಿ ಹರಿಯುತ್ತಿತ್ತು. ನಿನ್ನ ಕಣ್ಣಲ್ಲಿದ್ದ ಹೊಳಪು ನೀನು ಪವರ್ ಸ್ಟಾರ್ ಆಗುವುದನ್ನು ಆವಾಗಲೇ ಹೇಳುತ್ತಿತ್ತು. ನೀನು ನಕ್ಕರೆ ಎಲ್ಲರೂ ನಗುತ್ತಿದ್ದರು. ನೀನು ಕುಣಿದರೆ ಎಲ್ಲರೂ ರೋಮಾಂಚನದಿಂದ ನೋಡ್ತಾ ಇದ್ದರು. ಮನೆಗೆ ಬಂದ ಅತಿಥಿ ನೆಂಟರುಗಳಿಗೆಲ್ಲ ನೀನೇ ಬೇಕು. ಅಂತಹ ಪುಟ್ಟ ಅಪ್ಪು ಮಿಂಚಿನಂತೆ ತೆರೆಯ ಮೇಲೆ ಬಂದು, ಹೆಮ್ಮರವಾಗಿ, ಕೋಟ್ಯಂತರ ಜನರಿಗೆ ನೆರಳಾಗಿದ್ದನ್ನು ಹತ್ತಿರದಿಂದ ನೋಡಿದ ನಾನೇ ಪುನೀತ. ನಿನ್ನನ್ನು ಎತ್ತಿ ಆಡಿಸಿದ ಅಣ್ಣನಾಗಿ, ನಿನ್ನ ಜೊತೆ ಕೂಡಿ ಆಡಿದ ಸ್ನೇಹಿತನಾಗಿ, ನಿನ್ನ ಕೆಲಸಗಳನ್ನು ಮೆಚ್ಚಿ ಅಪ್ಪಿಕೊಂಡ ಕನ್ನಡಿಗನಾಗಿ, ಹಬ್ಬ ಯಾವುದೇ ಆಗಿದ್ದರೂ ನಿನ್ನ ಹೆಸರಲ್ಲಿ ಪಟಾಕಿ ಹಚ್ಚಿದ ಅಭಿಮಾನಿಗಳಲ್ಲಿ ಒಬ್ಬನಾಗಿ ಹೇಳ್ತಾ ಇದ್ದೇನೆ. ನೀನು ಹುಟ್ಟಿದ್ದೇ ಒಂದು ಉತ್ಸವ, ನೀನು ಬೆಳೆದಿದ್ದು ಇತಿಹಾಸ, ನಿನ್ನ ಜೀವನ ಒಂದು ದಂತಕಥೆ, ನಿನ್ನ ನೆನಪುಗಳು ಎಂದಿಗೂ ಅಮರ! ಹುಟ್ಟು ಹಬ್ಬದ ಶುಭಾಶಯಗಳು ಅಪ್ಪು!’ ಎಂದು ಬರೆದಿದ್ದಾರೆ.

ಬೆಂಗಳೂರು ಸೇರಿ ನಾಡಿನ ವಿವಿಧ ಭಾಗಗಳ ಹೋಟೆಲ್‌ನವರು ಪುನೀತ್‌ ಇಷ್ಟಪಡುತ್ತಿದ್ದ ಮಾಂಸಾಹಾರಿ ವಿಶೇಷ ಖಾದ್ಯಗಳನ್ನು ತಯಾರಿಸಿ ಗ್ರಾಹಕರಿಗೆ ಬಡಿಸಿದರು. ಕೆಲವೆಡೆ ರಕ್ತದಾನ, ಅನ್ನದಾನ, ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳೂ ನಡೆದವು.

ಹಣ್ಣು, ವಾಕಿಂಗ್‌ ಸ್ಟಿಕ್‌ ವಿತರಣೆ
ಪೀಣ್ಯ ದಾಸರಹಳ್ಳಿ: ಡಿಫೆನ್ಸ್ ಕಾಲೊನಿಯಲ್ಲಿ ವಿಕಾಸ್ ಜನಹಿತ ಟ್ರಸ್ಟ್ ಅಂಧರ ಆಶ್ರಮದ ಅಂಧರಿಗೆ ನಟಿಯರಾದ ಸೋನುಗೌಡ ಮತ್ತು ನೇಹಗೌಡ ಅವರು ನಟ ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ವಾಕಿಂಗ್‌ ಸ್ಟಿಕ್, ಕುಡಿಯುವ ನೀರಿನ ಬಾಟಲ್‌, ಹಣ್ಣುಗಳನ್ನು ವಿತರಿಸಿದರು.

ಬಳಿಕ ಮಾತನಾಡಿದ ಅವರು, ‘ನಟ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಾಗಿ ಅವರ ಮಾನವೀಯತೆ, ಜನಸೇವೆ ನಮಗೆಲ್ಲ ಮಾದರಿಯಾಗಿದೆ. ಅವರ ಜನ್ಮದಿನದಂದು ನಾವು ತಮ್ಮ ಕೈಲಾದ ಸಹಾಯವನ್ನು ಆಶ್ರಮಕ್ಕೆ ನೀಡುತ್ತಿದ್ದೇವೆ. ಜೀವನದಲ್ಲಿ ಉಳ್ಳವರು ಇಲ್ಲದವರಿಗೆ ಸಹಾಯ ಮಾಡುವ ಗುರಿ ಹೊಂದಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಆಯೋಜಕರಾದ ಜೀವನ್ ಕಿಶೋರ್ ಮಾತನಾಡಿ, ‘ಪುನೀತ್ ರಾಜ್‍ಕುಮಾರ್ ಅವರನ್ನು ಆದರ್ಶವಾಗಿಟ್ಟುಕೊಂಡು ಪ್ರತಿಯೊಬ್ಬರೂ ಮರಣದ ನಂತರ ಕಣ್ಣುಗಳನ್ನು ದಾನ ಮಾಡಬೇಕು. ಅದು ಇನ್ನೊಬ್ಬರ ಜೀವನಕ್ಕೆ ಬೆಳಕಾಗುತ್ತದೆ’ ಎಂದು ತಿಳಿಸಿದರು.

ಆಶ್ರಮದ ಅಧ್ಯಕ್ಷ ರುದ್ರೇಶ್, ಜೀವಸ್ಪಂದನ ಸೇವಾ ಟ್ರಸ್ಟ್‌ನ ಜಂಟಿ ಕಾರ್ಯದರ್ಶಿ ರವೀನ್, ಸದಸ್ಯರಾದ ಪ್ರವೀಣ್, ಶ್ರುತಿ, ವಿಜಯಲಕ್ಷ್ಮಿ, ನಂದ, ಚೈತ್ರಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.