ADVERTISEMENT

ಕೈಗಾರಿಕೆ: ವಿದ್ಯುತ್ ದರ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 30 ಮೇ 2019, 20:17 IST
Last Updated 30 ಮೇ 2019, 20:17 IST
   

ಬೆಂಗಳೂರು: ವಿದ್ಯುತ್ ದರ ಪರಿಷ್ಕರಣೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಅನುಮತಿ ನೀಡಿದ್ದು, ಕೈಗಾರಿಕೆಗಳು ಬಳಸುವ ವಿದ್ಯುತ್ ದರದಲ್ಲೂ ಏರಿಕೆಯಾಗಿದೆ.

ಎಲ್.ಟಿ ಕೈಗಾರಿಕೆ: ಎಲ್.ಟಿ ಕೈಗಾರಿಕೆಗಳು ಬಳಸುವ ವಿದ್ಯುತ್ ದರ ಯೂನಿಟ್‌ಗೆ 15ರಿಂದ 20 ಪೈಸೆ ಹೆಚ್ಚಳವಾಗಿದೆ. ಬೆಸ್ಕಾಂ ವ್ಯಾಪ್ತಿಯ ಬಿಬಿಎಂಪಿ ಹಾಗೂ ಇತರ ಪುರಸಭೆ ವ್ಯಾಪ್ತಿಯಲ್ಲಿ ಮೊದಲ 500 ಯೂನಿಟ್‌ಗಳ ಬಳಕೆಗೆ ಪ್ರತಿ ಯೂನಿಟ್‌
ಗೆ ₹5.65 (ಈಗಿನ ದರ ₹5.50), 500 ಯೂನಿಟ್‌ಗಳಿಗಿಂತ ಹೆಚ್ಚು ಬಳಸಿದರೆ ಪ್ರತಿ ಯೂನಿಟ್‌ಗೆ ₹6.95ಕ್ಕೆ (ಈಗಿನ ದರ ₹6.75) ಹೆಚ್ಚಿಸಲಾಗಿದೆ.

ಬೆಸ್ಕಾಂ ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿಮೊದಲ 500 ಯೂನಿಟ್‌ಗಳ ಬಳಕೆಗೆ ಪ್ರತಿ ಯೂನಿಟ್‌ಗೆ ₹5.35 (ಈಗಿನ ದರ ₹5.20), 500 ಯೂನಿಟ್‌ಗಳಿಗಿಂತ ಹೆಚ್ಚು ಬಳಸಿದರೆ ಪ್ರತಿ ಯೂನಿಟ್‌ಗೆ ₹6.30ಕ್ಕೆ (ಈಗಿನ ದರ ₹6.10) ಏರಿಕೆ ಆಗಲಿದೆ.

ADVERTISEMENT

ಎಚ್.ಟಿ ಕೈಗಾರಿಕೆ: ಎಚ್.ಟಿ ಕೈಗಾರಿಕೆಗಳಿಗೆ ಪ್ರತಿ ಯೂನಿಟ್‌ಗೆ 20 ಪೈಸೆ ಹೆಚ್ಚಳವಾಗಿದೆ. ಬೆಸ್ಕಾಂ ವ್ಯಾಪ್ತಿಯ ಬಿಬಿಎಂಪಿ ಹಾಗೂ ಇತರೆ ಪುರಸಭೆ ವ್ಯಾಪ್ತಿಯಲ್ಲಿ ಒಂದು ಲಕ್ಷ ಯೂನಿಟ್‌ಗಳ ವರೆಗೆ ಪ್ರತಿ ಯೂನಿಟ್‌ಗೆ ₹7.10 (ಈಗಿನ ದರ ₹6.90), ಲಕ್ಷ ಯೂನಿಟ್‌ಗಳಿಗಿಂತ ಹೆಚ್ಚಾದರೆ ಯೂನಿಟ್‌ಗೆ ₹7.40 (ಈಗಿನ ದರ ₹7.20) ಏರಿಕೆಯಾಗಲಿದೆ.

ಬೆಸ್ಕಾಂ ವ್ಯಾಪ್ತಿಯ ಇತರ ಪ್ರದೇಶಗಳಲ್ಲಿ ಲಕ್ಷಯೂನಿಟ್‌ಗಳ ವರೆಗೆ ಪ್ರತಿ ಯೂನಿಟ್‌ಗೆ ₹7 (ಈಗಿನ ದರ ₹6.80), ಲಕ್ಷ ಯೂನಿಟ್‌ಗಳಿಗಿಂತ ಅಧಿಕ ಬಳಸಿದರೆ ಯೂನಿಟ್‌ಗೆ ₹7.20 (ಈಗಿನ ದರ ₹7) ಹೆಚ್ಚಳವಾಗಲಿದೆ.

ರಿಯಾಯಿತಿ:ಬೀದಿ ದೀಪಗಳಿಗೆ ಎಲ್‌ಇಡಿ, ಇಂಡಕ್ಷನ್ ಬಲ್ಬ್‌ಗಳನ್ನು ಬಿಬಿಎಂಪಿ ಅಳವಡಿಸಿಕೊಂಡಿದ್ದು, ಅದು ಬಳಸುವ ಪ್ರತಿ ಯೂನಿಟ್‌ಗೆ ₹1 ರಿಯಾಯಿತಿ ನೀಡಲಾಗಿದೆ. ಪ್ರತಿ ಯೂನಿಟ್ ದರವನ್ನು ₹5.10ರಿಂದ 5.30ಕ್ಕೆ ನಿಗದಿಗೊಳಿಸಲಾಗಿದೆ. ಎಲ್ಇಡಿ ಬಲ್ಬ್ ಬಳಸದಿದ್ದರೆ ಯೂನಿಟ್‌ಗೆ ₹6.30 ತೆರಬೇಕಿದೆ (ಈಗಿನ ದರ ₹6.10).

ಎಫ್‌ಕೆಸಿಸಿಐ ವಿರೋಧ

ವಿದ್ಯುತ್ ದರ ಏರಿಕೆಯು ಎಲ್ಲ ವರ್ಗದ ಗ್ರಾಹಕರಿಗೆ ಹೊರೆಯಾಗಲಿದ್ದು, ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಕೈಗಾರಿಕೆಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿವೆ. ಕಬ್ಬಿಣ, ಸ್ಟೀಲ್ ಸೇರಿದಂತೆ ಇತರ ಕಚ್ಚಾ ವಸ್ತುಗಳ ಬೆಲೆ ದುಬಾರಿಯಾಗಲಿದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಸುಧಾಕರ್ ಶೆಟ್ಟಿ ತಿಳಿಸಿದ್ದಾರೆ.

ಈಗಾಗಲೇ ಕೈಗಾರಿಕೆಗಳು ಹಿನ್ನಡೆ ಅನುಭವಿಸುತ್ತಿದ್ದು, ಒಂದು ಕೋಟಿ ಮಂದಿ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಲಿದ್ದಾರೆ. ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರದಲ್ಲೂ ಬಳಸುವ ವಿದ್ಯುತ್ ದರ ಪರಿಷ್ಕರಣೆ ಮಾಡಿರುವುದು ಸರಿಯಲ್ಲ. ದರ ಏರಿಕೆ ಪ್ರಸ್ತಾಪದ ಸಮಯದಲ್ಲೇ ಎಫ್‌ಕೆಸಿಸಿಐ ವಿರೋಧ ವ್ಯಕ್ತಪಡಿಸಿತ್ತು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.