ADVERTISEMENT

‘ಪವರ್ ಟಿ.ವಿ’ ಎಂ.ಡಿ ಮನೆ ಮೇಲೆ ಸಿಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 8:08 IST
Last Updated 29 ಸೆಪ್ಟೆಂಬರ್ 2020, 8:08 IST
   

ಬೆಂಗಳೂರು: ‘ಟೆಂಡರ್ ಕೊಡಿಸುವ ಆಮಿಷವೊಡ್ಡಿ ಹಣ ಸುಲಿಗೆ ಮಾಡಿ ವಂಚಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇಲೆ ‘ಪವರ್ ಟಿ.ವಿ’ ಸುದ್ದಿವಾಹಿನಿ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ರಾಕೇಶ್‌ ಶೆಟ್ಟಿ ಹಾಗೂ ಇತರರ ವಿರುದ್ಧ ಕೆ.ಪಿ.ಅಗ್ರಹಾರ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ಬೆನ್ನಲ್ಲೇ, ಸಿಸಿಬಿ ಪೊಲೀಸರು ರಾಕೇಶ್ ಮನೆ ಮೇಲೆ ಸೋಮವಾರ ದಿಢೀರ್ ದಾಳಿ ನಡೆಸಿದರು.

‘ರಾಮಲಿಂಗಂ ಕನ್‌ಸ್ಟ್ರಕ್ಷನ್ ಕಂಪನಿಯ ನಿರ್ದೇಶಕ ಚಂದ್ರಕಾಂತ್ ರಾಮಲಿಂಗಂ (36)ಅವರು ದೂರು ನೀಡಿದ್ದರು. ಕ್ರಿಮಿನಲ್ ಪಿತೂರಿ (ಐಪಿಸಿ 120ಬಿ), ಸುಲಿಗೆ (ಐಪಿಸಿ 384), ವಂಚನೆ (ಐಪಿಸಿ 419), ಸಹಿ ನಕಲು ಮಾಡಿದ (ಐಪಿಸಿ 465), ಜೀವ ಬೆದರಿಕೆ (ಐಪಿಸಿ 506) ಆರೋಪದಡಿ ರಾಕೇಶ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ಸಿಸಿಬಿಯ ಡಿಸಿಪಿ ಬಸವರಾಜ ಅಂಗಡಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ಸಿಸಿಬಿ ಇನ್‌ಸ್ಪೆಕ್ಟರ್‌ಗಳ ನೇತೃತ್ವದ ತಂಡವೇ ರಾಕೇಶ್ ಮನೆ ಮೇಲೆ ದಾಳಿ ಮಾಡಿ ಮಾಹಿತಿ ಕಲೆ ಹಾಕಿದೆ. ವಾಹಿನಿಯ ರೆಹಮಾನ್ ಅವರನ್ನೂ ವಿಚಾರಣೆ ನಡೆಸಿದೆ’ ಎಂದೂ ಅವರು ತಿಳಿಸಿದರು.

ADVERTISEMENT

‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಾಮಗಾರಿಗಳ ಗುತ್ತಿಗೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಆಪಾದಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ’ಈ ಪ್ರಕರಣದಲ್ಲಿ ನನ್ನ ಹಾಗೂ ಪುತ್ರ ವಿಜಯೇಂದ್ರನ ಪಾತ್ರ ಇದೆ ಎಂದು ಸಾಬೀತುಪಡಿಸಿದರೆ ರಾಜೀನಾಮೆ ನೀಡುವೆ’ ಎಂಬ ಸವಾಲನ್ನೂ ಒಡ್ಡಿದ್ದರು.

ಪ್ರತೀಕಾರದದಾಳಿ; ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ’ಪವರ್ ಟಿ.ವಿ‘ ಸುದ್ದಿವಾಹಿನಿ ಆಡಳಿತ ಮಂಡಳಿ, ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರರೂ ಆದ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿಜಯೇಂದ್ರ ಅವರ ಅಕ್ರಮದ ಬಗ್ಗೆ ನಿರಂತರವಾಗಿ ಸುದ್ದಿ ಪ್ರಸಾರ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಪ್ರತೀಕಾರವಾಗಿ ಈ ದಾಳಿ ಮಾಡಿಸಲಾಗಿದೆ’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.