ADVERTISEMENT

ಪೌರಕಾರ್ಮಿಕರಿಗೂ ಪ್ರೋತ್ಸಾಹಧನ ವಿಸ್ತರಣೆಗೆ ಒತ್ತಾಯ

ಹೆಸರಿಗಷ್ಟೇ ಕೊರೊನಾ ಯೋಧರು: ವಿಶೇಷ ಭತ್ಯೆಯಿಂದ ವಂಚನೆ–ಆರೋಪ

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 17:41 IST
Last Updated 19 ಜುಲೈ 2020, 17:41 IST
ಪೌರ ಕಾರ್ಮಿಕ ಮಹಿಳೆ
ಪೌರ ಕಾರ್ಮಿಕ ಮಹಿಳೆ   

ಬೆಂಗಳೂರು: ‘ಪೌರ ಕಾರ್ಮಿಕರನ್ನು ಕೊರೊನಾ ಯೋಧರ ಪಟ್ಟಿಯಲ್ಲಿ ಹೆಸರಿಗಷ್ಟೆ ಸೇರಿಸಿಕೊಳ್ಳಲಾಗಿದ್ದು, ಬೇರೆ ಸಿಬ್ಬಂದಿಗಳಿಗೆ ನೀಡಿದಂತೆ ವಿಶೇಷ ಭತ್ಯೆ ಅಥವಾ ಪ್ರೋತ್ಸಾಹಧನ ನೀಡದೆ ವಂಚಿಸಲಾಗಿದೆ’ ಎಂದು ಪೌರಕಾರ್ಮಿಕರ ಮಹಾ ಸಂಘ ಆರೋಪಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಡಿ ಗುಂಪಿನ ನೌಕರರಿಗೆ ತಿಂಗಳಿಗೆ ₹10 ಸಾವಿರ ‘ಕೋವಿಡ್ ಅಪಾಯವನ್ನೆದುರಿಸುವ ಪ್ರೋತ್ಸಾಹಧನ’ ನೀಡಲಾಗಿದೆ. ಮುಂದಿನ ಆರು ತಿಂಗಳ ತನಕ ಈ ಪ್ರೋತ್ಸಾಹ ಧನ ನೀಡಬೇಕು ಎಂದು ಸರ್ಕಾರ ಆದೇಶಿಸಿದೆ.

‘ಕೊರೊನಾ ಸಂದರ್ಭದಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಪೌರಕಾರ್ಮಿಕರು ದುಡಿಯುತ್ತಿದ್ದಾರೆ. 50ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, ಅನೇಕರು ಪ್ರಾಣವನ್ನೇ ಕಳೆದುಕೊಂಡಿದ್ಧಾರೆ. ಕಂಟೈನ್‌ಮೆಂಟ್ ಪ್ರದೇಶಗಳಲ್ಲೂ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯವನ್ನು ನಿಲ್ಲಿಸಿಲ್ಲ. ಇವರನ್ನು ಸರ್ಕಾರ ಗುರುತಿಸದೇ ಇರುವುದು ತಾರತಮ್ಯ ನೀತಿ’ ಎಂದು ಸಂಘದ ಅಧ್ಯಕ್ಷ ನಾರಾಯಣ ಆರೋಪಿಸಿದ್ದಾರೆ.

ADVERTISEMENT

ಈ ಸಂಬಂಧ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ನಗರಾಭಿವೃದ್ಧಿ ಸಚಿವ, ಪೌರಾಡಳಿತ ಸಚಿವ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ‘ಕೋವಿಡ್‌ಗೆ ಹೆದರಿ ಪೌರಕಾರ್ಮಿಕರು ಕೂಡ ಮನೆಯಲ್ಲೇ ಕುಳಿತಿದ್ದರೆ ಅದರ ಪರಿಣಾಮ ಏನಾಗುತ್ತಿತ್ತು ಎಂಬುದನ್ನು ಸರ್ಕಾರ ಆಲೋಚಿಸಬೇಕು’ ಎಂದು ಹೇಳಿದ್ದಾರೆ.

‘₹10 ಸಾವಿರ ಪ್ರೋತ್ಸಾಹಧನವನ್ನು ಪೌರಕಾರ್ಮಿಕರಿಗೂ ವಿಸ್ತರಿಸಬೇಕು. ಆಯುಷ್ ಇಲಾಖೆಯಿಂದ ನೀಡುತ್ತಿರುವ ರೋಗನಿರೋಧಕ ಶಕ್ತಿ ಹೆಚ್ಚಿಸುವ ಬೂಸ್ಟರ್, ಮಾಸ್ಕ್, ಸ್ಯಾನಿಟೈಸರ್, ಕೈಗವಸುಗಳನ್ನು ಇವರಿಗೂ ವಿತರಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.