ADVERTISEMENT

ಪ್ರಜಾವಾಣಿ ರಸಪ್ರಶ್ನೆ: ಟೈ ಬ್ರೇಕರ್‌ನಲ್ಲಿ ಗೆದ್ದು ಬೀಗಿದ ತ್ರಿವಿಕ್ರಂ, ವಿಶ್ರು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 16:10 IST
Last Updated 15 ಡಿಸೆಂಬರ್ 2025, 16:10 IST
<div class="paragraphs"><p>ಬೆಂಗಳೂರು ವಲಯ ಮಟ್ಟದ ಪ್ರಜಾವಾಣಿ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕ್ವಿಜ್‌ ಮಾಸ್ಟರ್‌ ಮೇಘವಿ ಮಂಜುನಾಥ್‌ ಜೊತೆಗೆ (ನಿಂತವರು) ಮೊದಲ ರನ್ನರ್‌ಅಪ್‌ ವಿಹಾನ್‌ ಮಹೇಶ್ವರಿ, ಇಶಾನ್‌ ಕಾಳೆ, ಪ್ರಥಮ ಸ್ಥಾನ ಪಡೆದ&nbsp;ತ್ರಿವಿಕ್ರಂ ಕೇಶವನ್‌, ವಿಶ್ರು ಶ್ರೀಉರುಗಣೇಶ್‌ ಇತರರು</p></div>

ಬೆಂಗಳೂರು ವಲಯ ಮಟ್ಟದ ಪ್ರಜಾವಾಣಿ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕ್ವಿಜ್‌ ಮಾಸ್ಟರ್‌ ಮೇಘವಿ ಮಂಜುನಾಥ್‌ ಜೊತೆಗೆ (ನಿಂತವರು) ಮೊದಲ ರನ್ನರ್‌ಅಪ್‌ ವಿಹಾನ್‌ ಮಹೇಶ್ವರಿ, ಇಶಾನ್‌ ಕಾಳೆ, ಪ್ರಥಮ ಸ್ಥಾನ ಪಡೆದ ತ್ರಿವಿಕ್ರಂ ಕೇಶವನ್‌, ವಿಶ್ರು ಶ್ರೀಉರುಗಣೇಶ್‌ ಇತರರು

   

ಬೆಂಗಳೂರು: ಕೋರಮಂಗಲ ಎನ್‌ಪಿಎಸ್‌ ತಂಡ ಮತ್ತು ಇಂದಿರಾನಗರ ಶಿಶುಗೃಹ ಸೀನಿಯರ್‌ ಸ್ಕೂಲ್‌ ತಂಡ ಸಮನಾಗಿ ಅಂಕ ಗಳಿಸಿದ್ದರೂ ಟೈ ಬ್ರೇಕರ್‌ನಲ್ಲಿ ಗೋಲು ಹೊಡೆದು (ಉತ್ತರ ನೀಡಿ) ಶಿಶುಗೃಹ ಸೀನಿಯರ್‌ ಸ್ಕೂಲ್‌ ‘ಪ್ರಜಾವಾಣಿ’ ರಸಪ್ರಶ್ನೆ ಸ್ಪರ್ಧೆಯಲ್ಲಿ ಬೆಂಗಳೂರು ವಲಯ ಮಟ್ಟದ ಚಾಂಪಿಯನ್‌ ಆಗಿ ಹೊರ ಹೊಮ್ಮಿತು. 

ಜಯನಗರ ರಾಷ್ಟ್ರೀಯ ವಿದ್ಯಾಲಯ ಶಿಕ್ಷಕರ ಕಾಲೇಜಿನ ಆರ್‌.ವಿ. ಆಡಿಟೋರಿಯಂನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಸಪ್ರಶ್ನೆ ಸ್ಪರ್ಧೆ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು.

ADVERTISEMENT

ಒಟ್ಟು ಐದು ಸುತ್ತುಗಳ ಈ ಸ್ಪರ್ಧೆಯಲ್ಲಿ ಮೊದಲೆರಡು ಸುತ್ತುಗಳಲ್ಲಿ ಸೊನ್ನೆ ಸುತ್ತಿದ್ದ ಕೋರಮಂಗಲ ಎನ್‌ಪಿಎಸ್‌ ತಂಡ ಕೊನೇ ಎರಡು ಸುತ್ತಿನಲ್ಲಿ ಪುಟಿದೆದ್ದು ಮೊದಲ ಸ್ಥಾನಕ್ಕೆ ಜಿಗಿಯಿತು. ಆದರೆ, ಟೈ ಬ್ರೇಕರ್‌ ಪ್ರಶ್ನೆಗೆ ಉತ್ತರ ನೀಡುವ ವೇಳೆ ಅದೃಷ್ಟ ಕೈ ಹಿಡಿಯಲಿಲ್ಲ. ಏಕಕಾಲಕ್ಕೆ ಬರ್ಜರ್‌ ಒತ್ತಿದ್ದರೂ ಕ್ಷಣಮಾತ್ರದಲ್ಲಿ ಶಿಶುಗೃಹ ಸೀನಿಯರ್‌ ತಂಡದ ಬಝರ್‌ ದೀಪ ಉರಿದಿದ್ದರಿಂದ ಉತ್ತರಿಸುವ ಅವಕಾಶ ಶಿಶುಗೃಹ ಸೀನಿಯರ್‌ ಸ್ಕೂಲ್‌ ಪಾಲಾಯಿತು. ಮೊದಲ ಸುತ್ತಿನಿಂದಲೇ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ಶಿಶುಗೃಹ ಸೀನಿಯರ್‌ ತಂಡ  ಟೈ ಬ್ರೇಕರ್‌ನಲ್ಲೂ ಗೆದ್ದು ಬೀಗಿತು.

ಶಿಶುಗೃಹ ಪರವಾಗಿ ತ್ರಿವಿಕ್ರಂ ಕೇಶವನ್‌, ವಿಶ್ರು ಶ್ರೀಉರುಗಣೇಶ್‌ ಹಾಗೂ ಎನ್‌ಪಿಎಸ್‌ ಪರವಾಗಿ ವಿಹಾನ್‌ ಮಹೇಶ್ವರಿ ಮತ್ತು ಇಶಾನ್‌ ಕಾಳೆ ಭಾಗವಹಿಸಿದ್ದರು.

ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಜಿಲ್ಲೆಗಳ 150ಕ್ಕೂ ಅಧಿಕ ವಿದ್ಯಾಸಂಸ್ಥೆಗಳ ತಂಡಗಳು ಭಾಗವಹಿಸಿದ್ದವು. ಪ್ರಾಥಮಿಕ ಹಂತದ ಪರೀಕ್ಷೆಯಲ್ಲಿ 20 ಪ್ರಶ್ನೆಗಳನ್ನು ನೀಡಿ ಆರು ತಂಡಗಳನ್ನು ಆಯ್ಕೆ ಮಾಡಲಾಯಿತು. ಈ ಆಯ್ಕೆ ಪ್ರಕ್ರಿಯೆ ಕುತೂಹಲಕಾರಿಯಾಗಿ ನಡೆಯಿತು. ಕೊನೆಗೆ ಉತ್ತರ ಗೊತ್ತಾದಾಗ ಸರಿ ಉತ್ತರ ನೀಡಿದವರ ಮುಖ ಅರಳಿತು. ತಪ್ಪು ಉತ್ತರಿಸಿದ್ದವರ ಮುಖ ಸಪ್ಪಗಾಯಿತು. ಕೆಲವರು ಸರಿ ತಪ್ಪುಗಳಿಗೆ ಭಾವನೆ ಹೊರಹಾಕದೇ ಸ್ಥಿತಪ್ರಜ್ಞರಾದರು.

ಸುತ್ತುಗಳು: ಆರ್ಕಿಡ್‌ ಚಾಯ್ಸ್‌ ಮೊದಲ ಸುತ್ತು ಆಗಿತ್ತು. ಎಲ್ಲ ತಂಡಗಳಿಗೂ ಒಂದೊಂದು ಪ್ರಶ್ನೆಗಳಿದ್ದವು. ಅದಕ್ಕೆ ಸರಿ ಉತ್ತರ ನೀಡಿದರೆ 15 ಅಂಕಗಳಿದ್ದವು. ನೇರಪ್ರಶ್ನೆ ಇರುವ ತಂಡ ಉತ್ತರ ನೀಡದೇ ಇದ್ದರೆ ಉಳಿದ ತಂಡಗಳಲ್ಲಿ ಮೊದಲು ಬಝರ್‌ ಒತ್ತಿದವರಿಗೆ ಅವಕಾಶ ನೀಡಲಾಗಿತ್ತು. ಅಲ್ಲಿ ಉತ್ತರ ಬಾರದಿದ್ದರೆ ಎರಡನೇ ಬಾರಿ ಉಳಿದ ತಂಡಗಳಿಗೆ ಅವಕಾಶ ಇತ್ತು. ಮೊದಲ ಬಾರಿಯಲ್ಲೇ ಸರಿ ಉತ್ತರಕ್ಕೆ 10 ಅಂಕ, ತಪ್ಪು ಉತ್ತರಿಸಿದರೆ ನಕಾರಾತ್ಮಕ 10, ಎರಡನೇ ಬಾರಿಗೆ 5 ಮತ್ತು ನಕಾರಾತ್ಕ 5 ಅಂಕಗಳಿದ್ದವು. ಈ ಸುತ್ತಿನಲ್ಲಿ ಶಿಶುಗೃಹ ಸೀನಿಯರ್‌ ಸ್ಕೂಲ್‌ ಮತ್ತು ಬಿಎನ್‌ಎಂ ಪಬ್ಲಿಕ್‌ ಸ್ಕೂಲ್‌ ತಲಾ 25 ಅಂಕ, ವಿದ್ಯಾನಿಕೇತನ ಎಚ್‌ಪಿಎಸ್‌ ಮತ್ತು ಆರ್ಕೆಡ್‌ ವಿವೇಕಾನಂದ ಶಾಲೆ ತಂಡ ತಲಾ 15 ಅಂಕ ಪಡೆದರೆ, ಎಚ್‌ಎಎಲ್‌ ಪಬ್ಲಿಕ್‌ ಸ್ಕೂಲ್‌ ಮತ್ತು ಎನ್‌ಪಿಎಸ್‌ ಕೋರಮಂಗಲ ಯಾವುದೇ ಅಂಕ ಪಡೆದಿರಲಿಲ್ಲ. 

‘ದೇಶ ಸುತ್ತು ಕೋಶ ಓದು’ ಎರಡನೇ ಸುತ್ತಾಗಿದ್ದು, ಇದರಲ್ಲಿ ನಕಾರಾತ್ಮಕ ಅಂಕ ಇರಲಿಲ್ಲ. ಈ ಸುತ್ತು ಮುಗಿಯುವಾಗ ಶಿಶುಗೃಹ ಸೀನಿಯರ್‌ ಸ್ಕೂಲ್‌ 35 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿತ್ತು. ಬಿಎನ್‌ಎಂ ಪಬ್ಲಿಕ್‌ ಸ್ಕೂಲ್‌ 40 ಅಂಕ ಗಳಿಸಿ ಮೊದಲ ಸ್ಥಾನಕ್ಕೇರಿತ್ತು. ಉಳಿದ ತಂಡಗಳ ಅಂಕದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ.

‘ಚಿತ್ರ–ವಿಚಿತ್ರ’ ಮೂರನೇ ಸುತ್ತಿನಲ್ಲಿ ಶಿಶುಗೃಹ 50 ಅಂಕ ಪಡೆದು ಮೊದಲ ಸ್ಥಾನಕ್ಕೇರಿತು. 45 ಅಂಕಗಳೊಂದಿಗೆ ಬಿಎನ್‌ಎಂ ಪಬ್ಲಿಕ್‌ ಸ್ಕೂಲ್‌ ಪೈಪೋಟಿ ನೀಡಿತ್ತು. ಮೊದಲೆರಡು ಸುತ್ತುಗಳಲ್ಲಿ ಸೊನ್ನೆಯಲ್ಲೇ ಉಳಿದಿದ್ದ ಎಚ್‌ಎಎಲ್‌ ಪಬ್ಲಿಕ್‌ ಸ್ಕೂಲ್‌ (10 ಅಂಕ) ಮತ್ತು ಎನ್‌ಪಿಎಸ್‌ ಕೋರಮಂಗಲ (5 ಅಂಕ) ಈ ಸುತ್ತಿನಲ್ಲಿ ಖಾತೆ ತೆರೆದವು.

ಆ ನಂತರ ನಡೆದ ‘ವಿಷಯ ವಿಶೇಷ’ ಸುತ್ತು ತಂಡ ಆಯ್ಕೆ ಮಾಡಿದ ವಿಷಯದಲ್ಲಿ ಪ್ರಶ್ನೆ ಕೇಳುವುದಾಗಿತ್ತು. ಇಲ್ಲಿಂದ ಕೋರಮಂಗಲ ತಂಡದ ಕಮಾಲ್‌ ಶುರುವಾಯಿತು. ಈ ಸುತ್ತಿನ ಅಂತ್ಯಕ್ಕೆ 45 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಬಂದು ಕೂತಿತ್ತು. ಮೊದಲ ಮೂರು ಸುತ್ತಿನಲ್ಲಿ 15ರಲ್ಲೇ ಉಳಿದಿದ್ದ ವಿದ್ಯಾನಿಕೇತನ ಎಚ್‌ಪಿಎಸ್‌ 10 ಅಂಕ ಹೆಚ್ಚಿಸಿಕೊಂಡು 25ಕ್ಕೇರಿಸಿಕೊಂಡಿತು. ಶಿಶುಗೃಹ (50) ಸೇರಿದಂತೆ ಉಳಿದ ತಂಡಗಳ ಅಂಕ ಹಿಂದಿನ ಸುತ್ತಿನದ್ದೇ ಮುಂದುವರಿಯಿತು.

ಫಟಾಫಟ್‌: ಇದು ಅಂತಿಮ ಸುತ್ತು ಮಾತ್ರವಲ್ಲ ಸ್ಪರ್ಧೆಯ ಚಿತ್ರಣವನ್ನೇ ಬದಲಾಯಿಸಿದ ಸುತ್ತೂ ಆಗಿತ್ತು. ಸ್ಟೆಪ್‌ಅಪ್‌ ಆಯ್ಕೆ ಮಾಡಿ ಸರಿ ಉತ್ತರ ನೀಡಿದರೆ 15 ಅಂಕ, ಡಿಫಾಲ್ಟ್‌ ಸರಿ ಉತ್ತರಕ್ಕೆ 10 ಅಂಕ ಇತ್ತು. ಸ್ಟೆಪ್‌ಅಪ್‌ ಮತ್ತು ಡಿಫಾಲ್ಟ್‌ಗೆ ಕ್ರಮವಾಗಿ ನಕಾರಾತ್ಮಕ 7 ಮತ್ತು 5 ಅಂಕಗಳಿದ್ದವು.

ಸ್ಟೆಪ್‌ಅಪ್‌ ತೆಗೆದುಕೊಂಡು ಒಂದು ಸರಿ ಉತ್ತರ ನೀಡಿದ ಶಿಶುಗೃಹ 65 ಅಂಕ ಪಡೆಯಿತು. ಕೋರಮಂಗಲ ತಂಡವು ಎರಡು ಸರಿ ಉತ್ತರ ನೀಡಿದ್ದರೂ ಸ್ಟೆಪ್‌ಅಪ್‌ ತೆಗೆದುಕೊಳ್ಳದೇ ಇದ್ದಿದ್ದರಿಂದ ಈ ತಂಡದ ಮೊತ್ತವೂ 65 ಆಯಿತು. ಬಿಎನ್‌ಎಂ ಪಬ್ಲಿಕ್‌ ಸ್ಕೂಲ್‌ ಸ್ಟೆಪ್‌ಅಪ್‌ ತೆಗೆದುಕೊಂಡು ಒಂದು ಸರಿ, ಒಂದು ತಪ್ಪು ಉತ್ತರ ನೀಡಿದ್ದರಿಂದ ಅವರ ಅಂಕ 63ಕ್ಕೇ ಬಂದು ನಿಂತಿತು. ಈ ತಂಡದ ಆರ್ಯ ರಾಘವೇಂದ್ರ, ಗೌತಮ್‌ ಕೃಷ್ಣಮೂರ್ತಿ ದ್ವಿತೀಯ ರನ್ನರ್‌ ಅಪ್‌ ಆದರು. ಆರ್ಕಿಡ್‌ ವಿವೇಕಾನಂದದ ಪರೀಕ್ಷೀತ್‌ ರಾಮ್‌, ಋತ್ವಿಕ್‌ ರಾಜೀವ್‌ ಭಾರಧ್ವಾಜ್‌, ವಿದ್ಯಾನಿಕೇತನ ಎಚ್‌ಪಿಎಸ್‌ನ ಉಜ್ವಲ್‌ ಕೃಷ್ಣ, ಸುಮುಧ ಕೆ.ಜಿ., ಎಚ್‌ಎಎಲ್‌ ಪಬ್ಲಿಕ್‌ ಸ್ಕೂಲ್‌ನ ರೋಹನ್‌ ಎಂ. ಮತ್ತು ಋತ್ವಿಕ್‌ ಸಿ.ಎನ್‌. ಆ ನಂತರದ ಸ್ಥಾನಗಳಿಗೆ ತೃಪ್ತಿಪಟ್ಟರು.

ಪ್ರಥಮ ಸ್ಥಾನ ಮತ್ತು ಮೊದಲ ರನ್ನರ್‌ ಅಪ್‌ ನಿರ್ಧರಿಸಲು ಒಂದು ಪ್ರಶ್ನೆ ನೀಡಲಾಯಿತು. ಮೊದಲು ಬಝರ್‌ ಒತ್ತಿದವರಿಗೆ ಉತ್ತರ ನೀಡಬೇಕು. ಸರಿ ಇದ್ದರೆ ಚಾಂಪಿಯನ್‌, ತಪ್ಪು ಉತ್ತರ ನೀಡಿದರೆ ಎದುರು ತಂಡ ಚಾಂಪಿಯನ್‌ ಎಂಬುದು ನಿಯಮವಾಗಿತ್ತು.

ಮಿರ್ಜಾಪುರದ ಗೋಪುರದ ಚಿತ್ರ ತೋರಿಸಿ ಅದು ಏನನ್ನು ನಿರ್ಧರಿಸುತ್ತದೆ ಎಂದು ಕೇಳಿದ ಪ್ರಶ್ನೆಗೆ ಎರಡೂ ತಂಡಗಳಿಗೆ ಉತ್ತರ ಗೊತ್ತಿದ್ದರೂ ಶಿಶುಗೃಹ ತಂಡ ಕೂದಲೆಳೆ ಅಂತರದಲ್ಲಿ ಮೊದಲು ಬಝರ್‌ ಒತ್ತಿ ವಿಜಯಶಾಲಿಯಾಯಿತು. ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಯಿತು.

ಸ್ಪರ್ಧಿಗಳು ಉತ್ತರಿಸಲಾಗದೇ ಪ್ರೇಕ್ಷಕರ ಕಡೆಗೆ ಬಂದ ಪ್ರಶ್ನೆಗಳಿಗೆ ಮತ್ತು ಪ್ರೇಕ್ಷಕರಿಗಾಗಿಯೇ ಸೀಮಿತವಾದ ಪ್ರಶ್ನೆಗಳಿಗೆ ಉತ್ತರಿಸಿ ಹಲವರು ಸ್ಥಳದಲ್ಲೇ ಬಹುಮಾನ ಪಡೆದರು. ‘ಕ್ಯೂರಿಯೊಸಿಟಿ ಸೊಲ್ಯುಷನ್ಸ್‌’ ಸಂಸ್ಥೆಯ ಕ್ವಿಜ್‌ ಮಾಸ್ಟರ್‌ ಮೇಘವಿ ಮಂಜುನಾಥ್‌ ಆಕರ್ಷಕವಾಗಿ ಕ್ವಿಜ್‌ ನಡೆಸಿಕೊಟ್ಟರು.

ಬುದ್ಧಿಮತ್ತೆಯ ಬೆಳವಣಿಗೆ: ಕುಲಪತಿ ರಮೇಶ್

ರಸಪ್ರಶ್ನೆ ಎಂಬುದು ಪ್ರಶ್ನೆಗೆ ಉತ್ತರ ನೀಡುವುದಕ್ಕಷ್ಟೇ ಸೀಮಿತವಾಗಿಲ್ಲ. ಅದು ಬುದ್ಧಿಮತ್ತೆಯನ್ನು ಬೆಳೆಸಲು ಅನುಕೂಲವಾಗುವ ಪ್ರಕ್ರಿಯೆ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಬಿ. ರಮೇಶ್ ತಿಳಿಸಿದರು. ‘ಪ್ರಜಾವಾಣಿ’ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ಅಡಗಿರುವ ಶಕ್ತಿ ಬುದ್ಧಿವಂತಿಕೆ ಹೊರಬರಬೇಕಿದ್ದರೆ ಅನೇಕ ಪ್ರಯತ್ನಗಳು ಬೇಕಾಗುತ್ತವೆ. ‘ಪ್ರಜಾವಾಣಿ’ಯು ರಸಪ್ರಶ್ನೆ ಸ್ಪರ್ಧೆ ಮೂಲಕ ಮಕ್ಕಳ ಜ್ಞಾನಮಟ್ಟವನ್ನು ಹೆಚ್ಚಿಸುತ್ತಿದೆ ಎಂದು ಶ್ಲಾಘಿಸಿದರು.

ಇಂಥ ಕಾರ್ಯಕ್ರಮಗಳು ವಿಶ್ಲೇಷಣಾತ್ಮಕ ಚಿಂತನೆ ನಿರ್ಧಾರ ಕೈಗೊಳ್ಳುವ ಶಕ್ತಿ ಮತ್ತು ಸಮರ್ಥ ವ್ಯಕ್ತಿತ್ವ ಬೆಳೆಸಲು ಸಹಕಾರಿಯಾಗಿರುತ್ತದೆ. ಯೋಚನಾ ಶಕ್ತಿಯನ್ನು ಹೆಚ್ಚಿಸುವುದರಿಂದ ನಿಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡುವುದರಿಂದ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದು ಹೇಳಿದರು. ಕೃತಕ ಬುದ್ಧಿಮತ್ತೆ ಮತ್ತು ಮೊಬೈಲ್‌ಗಳಿಗೆ ದಾಸರಾಗಬಾರದು. ನಮ್ಮ ಜ್ಞಾನ ಹೆಚ್ಚಿಸಲಷ್ಟೇ ಅವು ಬಳಕೆಯಾಗಬೇಕು ಎಂದು ಸಲಹೆ ನೀಡಿದರು.

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಸನ್‌ಭೀಮ್‌ ವೆಂಚರ್ಸ್‌ ಉಪಾಧ್ಯಕ್ಷೆ (ಮಾರ್ಕೆಟಿಂಗ್‌) ದೀಪ್ತಿ ಭಾಗವಹಿಸಿದ್ದರು. ಆರ್ಕಿಡ್ಸ್‌ ದಿ ಇಂಟರ್‌ನ್ಯಾಷನಲ್‌ ಸ್ಕೂಲ್‌ ಪ್ರಸ್ತುತಿಪಡಿಸಿದ ಈ ಕಾರ್ಯಕ್ರಮದಲ್ಲಿ ಬ್ಯಾಂಕಿಂಗ್‌ ಪಾರ್ಟ್‌ನರ್‌ 'ಎಸ್‌ಬಿಐ" ರೀಫ್ರೆಶ್‌ಮೆಂಟ್‌ ಪಾರ್ಟ್‌ನರ್‌ 'ಮೊಗು ಮೊಗು ಸ್ಪೆಷಲ್ ಪಾರ್ಟ್‌ನರ್‌ ಭೀಮ ನ್ಯೂಟ್ರಿಷನ್ ಪಾರ್ಟ್‌ನರ್‌ ‘ನಂದಿನಿ’ ಸಹಕರಿಸಿದವು. ಪೂರ್ವಿಕಾ ವಿಐಪಿಎಸ್‌ ಟ್ಯಾಲೆಂಟ್‌ ಸ್ಪ್ರಿಂಟ್‌ ಐಸಿಎಸ್‌ ಮಹೇಶ್‌ ಪಿಯು ಕಾಲೇಜು ಸೂಪರ್‌ ಬ್ರೈನ್‌ ಮಾರ್ಗದರ್ಶಿ  ದಿ ಟೀಮ್‌ ಅಕಾಡೆಮಿ ಐಬಿಎಂಆರ್‌ ಮಂಗಳೂರು ಪಿಯು ಕಾಲೇಜು ಶಾರದಾ ವಿದ್ಯಾಮಂದಿರ ಸಹಯೋಗ ನೀಡಿದ್ದವು. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಟಿವಿ ಸಹಯೋಗವನ್ನು ನೀಡಿತು.

‘ಸೋಲುವ ಭಯ ಉಂಟಾಗಿತ್ತು’

ಮೊದಲಿನಿಂದಲೂ ನಾವು ಚೆನ್ನಾಗಿ ಉತ್ತರ ನೀಡುತ್ತಾ ಬಂದಿದ್ದೆವು. ಆದರೆ ಅಂತಿಮ ಸುತ್ತಿನಲ್ಲಿ ಅಂಕಗಳು ಸರಿ ಸಮವಾದಾಗ ಟೈ ಬ್ರೇಕರ್‌ನಲ್ಲಿ ಸೋಲುವ ಭೀತಿ ಕಾಡಿತ್ತು. ಭಯ ಮೆಟ್ಟಿ ಗೆದ್ದಿರುವುದಕ್ಕೆ ಖುಷಿಯಾಗಿದೆ. ಇಂಥ ಕಾರ್ಯಕ್ರಮವನ್ನು ಆಯೋಜಿಸಿದ್ದ ಪ್ರಜಾವಾಣಿಗೆ ಧನ್ಯವಾದಗಳು ಎಂದು ಶಿಶುಗೃಹ ಸೀನಿಯರ್‌ ಸ್ಕೂಲನ್‌ ತ್ರಿವಿಕ್ರಂ ಕೇಶವನ್‌ ವಿಶ್ರು ಶ್ರೀಉರುಗಣೇಶ್‌ ಪ್ರತಿಕ್ರಿಯಿಸಿದರು.

‘ಅವಕಾಶ ತಪ್ಪಿ ಹೋಯಿತು’

ಆರಂಭದಲ್ಲಿ ನಾವು ಅಂಕ ಗಳಿಸುವಲ್ಲಿ ವಿಫಲರಾದರೂ ಕೊನೆಗೆ ಮೊದಲ ಸ್ಥಾನಕ್ಕೆ ಬಂದೆವು. ಇನ್ನೊಂದು ತಂಡವೂ ಅಷ್ಟೇ ಅಂಕ ಗಳಿಸಿದ್ದರಿಂದ ಟೈಬ್ರೇಕರ್‌ಗೆ ಹೋಗಬೇಕಾಯಿತು. ಅಲ್ಲಿ ಕೇಳಿದ ಪ್ರಶ್ನೆ ಸುಲಭದ್ದಾಗಿತ್ತು. ಆದರೆ ನಮ್ಮಿಂದ ಮೊದಲು ಅವರು ಬಝರ್‌ ಒತ್ತಿದರು. ಉತ್ತರಿಸುವ ಅದೃಷ್ಟ ನಮಗೆ ಸಿಗಲಿಲ್ಲ. ನಮಗೇನು ಅದರಿಂದ ಬೇಸರವಾಗಿಲ್ಲ ಎಂದು ಕೋರಮಂಗಲ ಎನ್‌ಪಿಎಸ್‌ನ ವಿಹಾನ್‌ ಮಹೇಶ್ವರಿ ಮತ್ತು ಇಶಾನ್‌ ಕಾಳೆ ತಿಳಿಸಿದರು.

ಬೆಂಗಳೂರು ವಲಯ ಮಟ್ಟದ ‘ಪ್ರಜಾವಾಣಿ’ ರಸಪ್ರಶ್ನೆ ಸ್ಪರ್ಧೆಯಲ್ಲಿ ಟೈಬ್ರೇಕರ್‌ ಮೂಲಕ ಗೆದ್ದಾಗ  ತ್ರಿವಿಕ್ರಮ್‌ ವಿಶ್ರು ಅವರ ಮುಖದಲ್ಲಿ ಆಶ್ಚರ್ಯ–ಖುಷಿ ಒಮ್ಮೆಲೆ ಹೊಮ್ಮಿದ ಕ್ಷಣ  ಪ್ರಜಾವಾಣಿ ಚಿತ್ರ
ಪ್ರಾಥಮಿಕ ಸುತ್ತಿನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಿದ ಕ್ವಿಜ್‌ ಮಾಸ್ಟರ್‌ ಮೇಘವಿ ಮಂಜುನಾಥ ಪ್ರಜಾವಾಣಿ ಚಿತ್ರ
ಬೆಂಗಳೂರು ವಲಯ ಮಟ್ಟದ ಪ್ರಜಾವಾಣಿ ರಸಪ್ರಶ್ನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿ. ರಮೇಶ್ ಅವರಿಗೆ ರವೀಂದ್ರ ಭಟ್ಟ ಸ್ಮರಣಿಕೆ ನೀಡಿದರು. ದೀಪ್ತಿ ಉಪಸ್ಥಿತರಿದ್ದರು. ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.