ADVERTISEMENT

200 ಹೆಣ್ಣು ಭ್ರೂಣ ಗರ್ಭಪಾತ; ನಾಲ್ವರ ಬಂಧನ

ಬೆಂಗಳೂರು, ಮಂಡ್ಯ, ಮೈಸೂರಿನಲ್ಲಿ ಸಕ್ರಿಯ; ಆಲೆಮನೆಯಲ್ಲಿ ಭ್ರೂಣ ಲಿಂಗ ಪತ್ತೆ ಸ್ಕ್ಯಾನಿಂಗ್ ಕೇಂದ್ರ!

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2023, 19:30 IST
Last Updated 25 ಅಕ್ಟೋಬರ್ 2023, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಗರ್ಭಿಣಿಯರನ್ನು ಅಕ್ರಮವಾಗಿ ಸ್ಕ್ಯಾನಿಂಗ್‌ಗೆ ಒಳಪಡಿಸಿ ಭ್ರೂಣ ಲಿಂಗ ಪತ್ತೆ ಮಾಡಿ ಹೆಣ್ಣುಭ್ರೂಣದ ಗರ್ಭಪಾತ ಮಾಡುತ್ತಿದ್ದ ಜಾಲವನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಭೇದಿಸಿದ್ದು, ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ.

‘ಮೈಸೂರಿನ ವಸಂತನಗರದ ನಿವಾಸಿ ಶಿವಲಿಂಗೇಗೌಡ ಅಲಿಯಾಸ್ ಶಿವು (50), ಮಂಡ್ಯ ಜಿಲ್ಲೆ ಕೂಳೇನಹಳ್ಳಿಯ ನಯನ್‌ ಕುಮಾರ್ (36), ಪಾಂಡವಪುರ ತಾಲ್ಲೂಕಿನ ಸುಂಕದನೂರಿನ ನವೀನ್‌ಕುಮಾರ್ ಹಾಗೂ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆಯ ಟಿ.ಎಂ. ವೀರೇಶ್ ಬಂಧಿತರು. ಜಾಲದ ಪ್ರಮುಖ ಆರೋಪಿಗಳಾದ ಡಾ. ಮಲ್ಲಿಕಾರ್ಜುನ್, ಸುನಂದಾ ಹಾಗೂ ಇತರರ ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಸೇರಿ ಹಲವು ಜಿಲ್ಲೆಗಳಲ್ಲಿ ಮೂರು ವರ್ಷಗಳಿಂದ ಈ ಜಾಲ ಸಕ್ರಿಯವಾಗಿತ್ತು. ಇದುವರೆಗೂ 650ಕ್ಕೂ ಹೆಚ್ಚು ಭ್ರೂಣ ಲಿಂಗ ಪತ್ತೆ ಮಾಡಿರುವ ಜಾಲ, 150 ರಿಂದ 200 ಹೆಣ್ಣು ಭ್ರೂಣ ಗರ್ಭಪಾತ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಮತ್ತಷ್ಟು ಮಾಹಿತಿ ಕಲೆ ಹಾಕಲು, ಬಂಧಿತ ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ಮಂಡ್ಯ– ಪಾಂಡವಪುರ ರಸ್ತೆಯಲ್ಲಿದ್ದ ಆಲೆಮನೆಯೊಂದರಲ್ಲಿ ಸ್ಕ್ಯಾನಿಂಗ್ ಯಂತ್ರ ಇರಿಸಲಾಗಿತ್ತು. ಆಲೆಮನೆಗೆ ಗರ್ಭಿಣಿಯರನ್ನು ಕರೆಸಿ ಸ್ಕ್ಯಾನಿಂಗ್ ಮಾಡುತ್ತಿದ್ದರು. ಗಂಡು ಅಥವಾ ಹೆಣ್ಣು ಎಂಬುದು ತಿಳಿಯುತ್ತಿತ್ತು. ಕೆಲವರು, ಹೆಣ್ಣು ಭ್ರೂಣವೆಂದು ಗೊತ್ತಾಗುತ್ತಿದ್ದಂತೆ ಗರ್ಭಪಾತ ಮಾಡಿಸುತ್ತಿದ್ದರು’.

‘ಆಲೆಮನೆ ಮೇಲೂ ದಾಳಿ ಮಾಡಿ ಯಂತ್ರ ಜಪ್ತಿ ಮಾಡಲಾಗಿದೆ. ದಾಳಿ ವೇಳೆಯಲ್ಲಿ, ಆಲೆಮನೆಯಲ್ಲಿ ನಾಲ್ವರು ಗರ್ಭಿಣಿಯರು ಇದ್ದರು. ಅವರಿಗೂ ಬುದ್ದಿವಾದ ಹೇಳಿ ಸಂಬಂಧಿಕರೊಂದಿಗೆ ಕಳುಹಿಸಲಾಗಿದೆ’ ಎಂದು ಹೇಳಿದರು.

‘ಪ್ರಮುಖ ಆರೋಪಿ ಡಾ. ಮಲ್ಲಿಕಾರ್ಜುನ್, ಈ ಹಿಂದೆಯೇ ಜೈಲಿಗೆ ಹೋಗಿ ಜಾಮೀನು ಮೇಲೆ ಹೊರಬಂದಿದ್ದ. ಈತನ ಸಂಬಂಧಿ ವೀರೇಶ್, ಇತ್ತೀಚಿನ ದಿನಗಳಲ್ಲಿ ಪುನಃ ಹೆಣ್ಣು ಭ್ರೂಣ ಪತ್ತೆ ಕೆಲಸಕ್ಕೆ ಇಳಿದಿದ್ದ. ಇದಕ್ಕೆ ಹಲವರು ಸಹಕಾರ ನೀಡಿದ್ದರು. ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಗರ್ಭಪಾತ ಮಾಡಿರುವ ಶಂಕೆ ಇದೆ’ ಎಂದು ತಿಳಿಸಿದರು.

₹ 20 ಸಾವಿರ ನಿಗದಿ: ‘ಡಾ. ಮಲ್ಲಿಕಾರ್ಜುನ್ ಹಾಗೂ ವೀರೇಶ್, ಹಲವರ ಜೊತೆ ಒಡನಾಟ ಹೊಂದಿದ್ದರು. ಹೆಣ್ಣು ಭ್ರೂಣ ಪತ್ತೆ ಹಾಗೂ ಗರ್ಭಪಾತ ಮಾಡುವುದಾಗಿ ಹೇಳಿಕೊಳ್ಳುತ್ತಿದ್ದರು. ಮಧ್ಯವರ್ತಿಗಳು, ಗರ್ಭಿಣಿ ಹಾಗೂ ಅವರ ಸಂಬಂಧಿಕರನ್ನು ಸಂಪರ್ಕಿಸಿ ಆರೋಪಿಗಳ ಬಳಿ ಕರೆದೊಯ್ಯುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಭ್ರೂಣ ಪತ್ತೆ ಹಾಗೂ ಗರ್ಭಪಾತಕ್ಕೆ ತಲಾ ₹ 15 ಸಾವಿರದಿಂದ ₹ 20 ಸಾವಿರ ನಿಗದಿ ಮಾಡಲಾಗಿತ್ತು. ಮಂಡ್ಯ ಹಾಗೂ ಮೈಸೂರಿನ ಹಲವು ಗರ್ಭಿಣಿಯರು ಗರ್ಭಪಾತ ಮಾಡಿಸಿಕೊಂಡಿರುವ ಮಾಹಿತಿ ಇದ್ದು, ಅವರ ವಿಳಾಸಗಳನ್ನು ಪತ್ತೆ ಮಾಡಲಾಗುತ್ತಿದೆ. ಕೆಲ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿ ಸಹ ಕಮಿಷನ್ ಆಸೆಗಾಗಿ ಜಾಲದೊಂದಿಗೆ ಕೈ ಜೋಡಿಸಿರುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.