ADVERTISEMENT

ಯುವಕರಿಗೆ ವಿಜ್ಞಾನಿಗಳೇ ತಾರೆಯರಾಗಿ ಕಾಣಬೇಕು: ಕೊಳ್ಳೆಗಾಲ ಶರ್ಮ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 20:01 IST
Last Updated 18 ಡಿಸೆಂಬರ್ 2020, 20:01 IST

ಬೆಂಗಳೂರು: ‘ವಿಜ್ಞಾನಿಯೊಬ್ಬನ ಕೂದಲು ವಿನ್ಯಾಸವನ್ನು ಕಾಲೇಜು ಯುವಕರು ಅನುಸರಿಸಿದ ದಿನ ನಮ್ಮಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಕಾಣಲಿದೆ. ಯುವಕರಿಗೆ ವಿಜ್ಞಾನಿಗಳೇ ತಾರೆಯರಾಗಿ ಕಾಣಬೇಕು’ ಎಂದು ಸಿಎಫ್‌ಟಿಆರ್‌ಐನ ನಿವೃತ್ತ ವಿಜ್ಞಾನಿ ಹಾಗೂ ಹಿರಿಯ ವಿಜ್ಞಾನ ಬರಹಗಾರ ಕೊಳ್ಳೆಗಾಲ ಶರ್ಮ ಅಭಿಪ್ರಾಯಪಟ್ಟರು.

ಪ್ರೆಸ್ ಇನ್ಫರ್ಮೇಷನ್ ಬ್ಯುರೋ ಮತ್ತು ಕರ್ನಾಟಕ ಪತ್ರಕರ್ತೆಯರ ಸಂಘಗಳು ಶುಕ್ರವಾರ ಜಂಟಿಯಾಗಿ ಆಯೋಜಿಸಿದ್ದ ‘ಭಾರತದಲ್ಲಿ ವಿಜ್ಞಾನದ ಬೆಳವಣಿಗೆ’ ಕುರಿತ ವೆಬಿನಾರ್‌ನಲ್ಲಿ ಅಭಿವೃದ್ಧಿಶೀಲ ಭಾರತದಲ್ಲಿ ವಿಜ್ಞಾನ ವಿಷಯದ ಕುರಿತು ಅವರು ಮಾತನಾಡಿದರು. ಡಿಸೆಂಬರ್ 22ರಿಂದ ಆರಂಭವಾಗಲಿರುವ ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಮಹೋತ್ಸವ -2020ಕ್ಕೆ ಪೂರ್ವಭಾವಿಯಾಗಿ ಈ ವೆಬಿನಾರ್ ಆಯೋಜಿಸಲಾಗಿತ್ತು.

‘ಭಾರತವು ಸಾವಿರಾರು ವರ್ಷಗಳಿಂದ ಅಭಿವೃದ್ಧಿ ಪಥದಲ್ಲಿ ಇದ್ದರೂ ಯಂತ್ರಗಳನ್ನು ಅಧರಿಸಿದ ಕೈಗಾರಿಕಾ ಕ್ರಾಂತಿ ಸಮಯದಲ್ಲಿ ಹಿಂದಕ್ಕೆ ಉಳಿಯಿತು. ಇದಕ್ಕೆ ಇಲ್ಲಿನ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳು ಕಾರಣ ಇರಬಹುದು. ಆದರೆ, 1958ರಲ್ಲಿ ಸ್ವಾತಂತ್ರ್ಯ ಬಂದ ಹೊಸದರಲ್ಲೇ ದೇಶದ ಅಭಿವೃದ್ಧಿಗೆ ವಿಜ್ಞಾನದ ಬೆಳವಣಿಗೆ ಅನಿವಾರ್ಯ ಎಂದು ಮನಗಂಡು ವೈಜ್ಞಾನಿಕ ನೀತಿಯನ್ನು ಆಡಳಿತದಲ್ಲಿ ಅಳವಡಿಸಿಕೊಂಡಿತ್ತು. ವೈಜ್ಞಾನಿಕ ಸಂಶೋಧನೆ ಮತ್ತು ಕೈಗಾರಿಕೆಗಳ ಬೆಳವಣಿಗೆಯ ನಡುವಿನ ಸಂಬಂಧ ಅರಿತುಕೊಂಡು ಸ್ವಾತಂತ್ರ್ಯ ಪೂರ್ವದಲ್ಲಿ 1942ರಲ್ಲೇ `ಕೌನ್ಸಿಲ್ ಆಫ್ ಸೈಂಟಿಫಿಕ್ ಎಂಡ್ ಇಂಡಸ್ಟ್ರಿಯಲ್ ರಿಸರ್ಚ್' ಸ್ಥಾಪಿಸಲಾಗಿತ್ತು. ಪರಮಾಣು ವಿಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ, ಕೈಗಾರಿಕೆ, ಕೃಷಿ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಸಾಕಷ್ಟು ಪ್ರಗತಿ ಸಾಧಿಸಿದೆ. ಆದರೆ, ದೇಶದ ಇತರ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಬೇಕಾದ ಸಲಕರಣೆ, ತಂತ್ರಜ್ಞಾನಗಳನ್ನು ಆಮದು ಮಾಡಿಕೊಳ್ಳದಂತೆ ನಾವು ಸ್ವಾವಲಂಬನೆ ಸಾಧಿಸುವ ಅಗತ್ಯವಿದೆ’ ಎಂದು ಶರ್ಮ ಅವರು ಪ್ರತಿಪಾದಿಸಿದರು.

ADVERTISEMENT

‘ಭಾರತದಲ್ಲಿ ಕಂಪ್ಯೂಟರ್ ವಿಜ್ಞಾನದ ಇತಿಹಾಸ’ ಕುರಿತು ಮಾತನಾಡಿದ ಇ ಜ್ಞಾನ.ಕಾಮ್ ಸಂಪಾದಕ ಟಿ.ಜಿ. ಶ್ರೀನಿಧಿ, ‘50–60ರ ದಶಕದಲ್ಲೇ ನಮ್ಮ ವಿಜ್ಞಾನಿಗಳು ಮಾಡಿದ ಸಾಧನೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ಕಂಪ್ಯೂಟರ್ ಕ್ಷೇತ್ರದಲ್ಲಿ ನಾವು ಕೇವಲ ಬಳಕೆದಾರರಾಗದೇ ಮತ್ತಷ್ಟು ಆವಿಷ್ಕಾರಗಳನ್ನು ಮಾಡಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್,ಕಾರ್ಯದರ್ಶಿ ಮಾಲತಿ ಭಟ್, ಹಿರಿಯ ಪತ್ರಕರ್ತೆಯರಾದ ಎಂ.ಪಿ.ಸುಶೀಲಾ, ಕೆ.ಎಚ್. ಸಾವಿತ್ರಿ, ಸಿ.ಜಿ. ಮಂಜುಳಾ, ಪತ್ರಕರ್ತ ಮತ್ತು ಬರಹಗಾರ ಜಿ.ಎನ್. ಮೋಹನ್, ಪ್ರೆಸ್ ಇನ್ಫರ್ಮೇಷನ್ ಬ್ಯುರೋ ಅಧಿಕಾರಿ ಜಯಂತಿ, ಪತ್ರಕರ್ತೆಯರಾದ ಎಸ್. ನಯನಾ, ಚಿತ್ರಾ ಫಾಲ್ಗುಣಿ, ಶ್ರೀಜಾ ವಿ.ಎನ್. ಜಗದೀಶ್ವರಿ ವೆಬಿನಾರ್‌ನಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.