ADVERTISEMENT

ಪ್ರಮೋದ್ ಮುತಾಲಿಕ್ ಬಂಧನಕ್ಕೆ ಆಗ್ರಹ

ನಾಳೆ ಕ್ರೈಸ್ತ ಮುಖಂಡರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಮೇ 2022, 16:22 IST
Last Updated 9 ಮೇ 2022, 16:22 IST

ಬೆಂಗಳೂರು: ‘ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಒತ್ತಾಯಿಸಿ ಮೇ 11ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಕ್ರೈಸ್ತ ಮುಖಂಡರು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ’ ಎಂದು ಕರ್ನಾಟಕ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹ್ಯಾರಿ ಡಿಸೋಜ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ಪ್ರಮೋದ್ ಮುತಾಲಿಕ್ ಅವರು ಕ್ರೈಸ್ತರ ಮೇಲೆ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಚರ್ಚ್‌, ಸಮಾರಂಭಗಳಿಗೆ ನುಗ್ಗಿ ಶಾಂತಿ ಕದಡುತ್ತಿದ್ದಾರೆ. ಅವರನ್ನು ಕೂಡಲೇ ಬಂಧಿಸಬೇಕು’ ಎಂದರು.

‘ಸರ್ಕಾರ ಈ ದೌರ್ಜನ್ಯಗಳನ್ನು ಕಂಡೂ ಕಾಣದಂತೆ ಇರುವುದು ಕ್ರೈಸ್ತ ಸಮುದಾಯದಲ್ಲಿ ಆತಂಕ ತರಿಸಿದೆ.ಈ ರೀತಿ ಗಲಭೆ ಸೃಷ್ಟಿಸಲು ಸರ್ಕಾರವೇ ಪರವಾನಗಿ ನೀಡಿದೆಯಾ ಎಂಬ ಅನುಮಾನ ಮೂಡುತ್ತಿದೆ’ ಎಂದು ಹೇಳಿದರು.

ADVERTISEMENT

‘ಮತಾಂತರಕ್ಕೂ ಮತ ಪ್ರಚಾರಕ್ಕೂ ವ್ಯತ್ಯಾಸವಿದೆ. ಮತ ಪ್ರಚಾರವನ್ನೇ ಮತಾಂತರ ಎಂದು ತಪ್ಪಾಗಿ ತಿಳಿದಿರುವ ಕೆಲ ಕಿಡಿಗೇಡಿಗಳು ಕ್ರೈಸ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿವೆ’ ಎಂದರು.

‘ಸರ್ಕಾರ ಶ್ರೀರಾಮ ಸೇನೆಯನ್ನು ಕೂಡಲೇ ನಿಷೇಧಿಸಬೇಕು. ಕ್ರೈಸ್ತರಿಗೆ ಭದ್ರತೆ ಕಲ್ಪಿಸುವ ಜೊತೆಗೆ ಎಲ್ಲ ಬೇಡಿಕೆಗಳನ್ನು ಈಡೇರಿಸುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.