ADVERTISEMENT

ಪಿಪಿಇ ಕಿಟ್‌ ಖರೀದಿಯಲ್ಲಿ ಅಕ್ರಮ: ಕೆಆರ್‌ಎಸ್ ಪಕ್ಷ ಆರೋಪ

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 15:24 IST
Last Updated 31 ಜುಲೈ 2021, 15:24 IST
ಕಳಪೆ ಪಿಪಿಇ ಕಿಟ್‌ ಅನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಲಾಯಿತು. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸಿ.ಎನ್.ದೀಪಕ್, ಮಲ್ಲಿಕಾರ್ಜುನ ಭಟ್ಟರಹಳ್ಳಿ ಹಾಗೂ ರಘುಪತಿ ಭಟ್ ಇದ್ದಾರೆ –ಪ್ರಜಾವಾಣಿ ಚಿತ್ರ
ಕಳಪೆ ಪಿಪಿಇ ಕಿಟ್‌ ಅನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಲಾಯಿತು. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸಿ.ಎನ್.ದೀಪಕ್, ಮಲ್ಲಿಕಾರ್ಜುನ ಭಟ್ಟರಹಳ್ಳಿ ಹಾಗೂ ರಘುಪತಿ ಭಟ್ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು:‘ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು (ಕೆಎಸ್‌ಎಂಎಸ್‌ಸಿಎಲ್‌)ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಪಿಪಿಇ ಕಿಟ್‌ ಖರೀದಿಯಲ್ಲಿ ಭಾರಿ ಅಕ್ರಮ ಎಸಗಿದೆ’ ಎಂದು ಕರ್ನಾಟಕ ರಾಷ್ಟ್ರಸಮಿತಿ (ಕೆಆರ್‌ಎಸ್‌) ಪಕ್ಷ ಆರೋಪಿಸಿದೆ.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದಪ್ರಧಾನ ಕಾರ್ಯದರ್ಶಿಸಿ.ಎನ್.ದೀಪಕ್,‘ವೈದ್ಯಕೀಯ ಸರಬರಾಜು ಕಂಪನಿಗಳಿಂದ ಒಟ್ಟು 12 ಲಕ್ಷ ಪಿಪಿಇ ಕಿಟ್ ಖರೀದಿಗಾಗಿಕೆಎಸ್‌ಎಂಎಸ್‌ಸಿಎಲ್‌ ದರಪಟ್ಟಿ ಆಹ್ವಾನಿಸಿತ್ತು. ಖರೀದಿ ನಿಯಮಗಳನ್ನು ಪಾಲಿಸದ ಎಚ್‌ ಆ್ಯಂಡ್ ಜೆಡ್ ಅಪಾರೆಲ್ಸ್‌ ಎಂಬ ಕಂಪನಿಗೆ ಪಿಪಿಇ ಕಿಟ್ ಸರಬರಾಜಿಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ದೂರಿದರು.

‘ಯುಕ್ಬಾ ಫ್ಯಾಷನ್ಸ್‌ ಎಂಬ ಮತ್ತೊಂದು ಸಂಸ್ಥೆ ಕಡಿಮೆ ದರಕ್ಕೆ ಕಿಟ್‌ ಸರಬರಾಜು ಮಾಡುವುದಾಗಿ ಹೇಳಿದ್ದರೂ ಅಧಿಕ ಬೆಲೆ ಉಲ್ಲೇಖಿಸಿದ್ದಅಪಾರೆಲ್ಸ್‌ ಸಂಸ್ಥೆಗೆ ₹16 ಕೋಟಿ ವೆಚ್ಚದಲ್ಲಿ 4 ಲಕ್ಷ ಪಿಪಿಇ ಕಿಟ್ ಖರೀದಿಸುವ ಆದೇಶ ಹೊರಡಿಸಲಾಗಿದೆ. ಆದರೆ, ಅಪಾರೆಲ್ಸ್‌ ಸಂಸ್ಥೆ ಸರಬರಾಜು ಮಾಡಿರುವ ಕಿಟ್‌ಗಳು ಕಳಪೆ ಗುಣಮಟ್ಟದ್ದಾಗಿದ್ದು, ನಿಗದಿತ ಮಾನದಂಡಗಳಿಗೆ ಅನುಗುಣವಾಗಿಲ್ಲ. ಈ ಅಕ್ರಮದಲ್ಲಿ ನಿಗಮದ ಅಧಿಕಾರಿಗಳು ನೇರವಾಗಿ ಭಾಗಿಯಾಗಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಯುಕ್ಬಾ ಸಂಸ್ಥೆಯನ್ನು ಯಾವ ಕಾರಣಕ್ಕಾಗಿ ಕೈಬಿಡಲಾಯಿತು ಎಂಬ ಕಾರಣವನ್ನು ನಿಗಮ ಸ್ಪಷ್ಟಪಡಿಸಿಲ್ಲ. ನಿಗಮವು ಟೆಂಡರ್ ಕರೆಯದೆಯೇ ಕೇವಲ ದರಪಟ್ಟಿ ಆಧಾರದ ಮೇಲೆ ಖರೀದಿ ಪ್ರಕ್ರಿಯೆ ನಡೆಸುತ್ತಿದೆ. ಇದರಿಂದ ಮಧ್ಯವರ್ತಿಗಳಿಗೆ ಹಾಗೂ ಭ್ರಷ್ಟರಿಗೆ ಹೆಚ್ಚು ಅನುಕೂಲವಾಗುತ್ತಿದೆ’ ಎಂದರು.

ಪಕ್ಷದ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ,‘ಸರ್ಕಾರ ಎಲ್ಲ ಖರೀದಿ ಪ್ರಕ್ರಿಯೆಗಳನ್ನು ಪಾರದರ್ಶಕವಾಗಿ ನಡೆಸಬೇಕು. ಖರೀದಿ ಆದೇಶಗಳನ್ನು ತಕ್ಷಣ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಬೇಕು. ಇಲ್ಲಿಯವರೆಗೆ ನಿಗಮವು ನಡೆಸಿರುವ ಖರೀದಿಗಳ ಕುರಿತು ಶ್ವೇತಪತ್ರ ಹೊರಡಿಸಬೇಕು. ಈಗ ನಡೆದಿರುವ ಅಕ್ರಮದ ಬಗ್ಗೆ ಹೈಕೋರ್ಟ್‌ ನ್ಯಾಯಾಧೀಶರ ಉಸ್ತುವಾರಿಯಲ್ಲಿ ತನಿಖೆಯಾಗಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.