ಬೆಂಗಳೂರು: ರಾಜ್ಯದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಐದು ಪ್ರಮುಖ ಆದ್ಯತಾ ವಲಯಗಳನ್ನು ಗುರುತಿಸಿ, ಉಪಸಮಿತಿಗಳನ್ನು ರಚಿಸಲಾಗಿದೆ. ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಬಜೆಟ್ ಪೂರ್ವ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಹೇಳಿದರು.
ಆದ್ಯತಾ ವಲಯಗಳಾದ ಶಿಕ್ಷಣ ಮತ್ತು ಕೌಶಲ, ಆರೋಗ್ಯ, ಪೋಷಣೆ, ನೈರ್ಮಲ್ಯ ಮತ್ತು ನೀರು ಸರಬರಾಜು, ಪರಿಸರ–ಹವಾಮಾನ ಬದಲಾವಣೆ, ಕೃಷಿ ಮತ್ತು ಕೃಷಿ ಸಂಬಂಧಿತ ವಲಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ದುರ್ಬಲ ವರ್ಗ ಮತ್ತು ಕಾರ್ಮಿಕ ವಲಯಕ್ಕೆ ಉಪಸಮಿತಿಗಳನ್ನು ರಚಿಸಿ, ಆಯೋಗದ ಸದಸ್ಯರು ಹಾಗೂ ತಜ್ಞರನ್ನು ನೇಮಕ ಮಾಡಲಾಗಿದೆ. ಮುಂದಿನ ಬಜೆಟ್‌ನೊಳಗೆ ಮುಖ್ಯಮಂತ್ರಿಗೆ ಶಿಫಾರಸುಗಳ ಸಹಿತ ವರದಿ ಸಲ್ಲಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಪಸಮಿತಿಗಳು ಸಂಬಂಧಿಸಿದ ಇಲಾಖೆಗೆ ಜತೆ ಸಭೆ, ಚರ್ಚೆ ನಡೆಸಿ ಯೋಜನೆಗಳು, ನೀತಿ ನಿರ್ಧಾರಗಳ ಅಗತ್ಯದ ಬಗ್ಗೆ ಸ್ಪಷ್ಟ ಅಭಿಪ್ರಾಯದೊಂದಿಗೆ ಪ್ರಸ್ತಾವನೆಗಳನ್ನು ನವೆಂಬರ್ ಅಂತ್ಯದೊಳಗೆ ಸಲ್ಲಿಸಬೇಕು. ನಂತರ ಜಿಲ್ಲಾ ಯೋಜನಾ ಸಮಿತಿಗಳಿಗೆ ಕಳುಹಿಸಿ ವಿವರಣೆ ಪಡೆದು ಸಂಬಂಧಿಸಿದ ಸಚಿವರೊಂದಿಗೆ ಸಭೆಗಳನ್ನು ನಡೆಸಿ, ಬಜೆಟ್‌ಗೆ ಮುನ್ನ ಮುಖ್ಯಮಂತ್ರಿಗೆ ವರದಿ ಸಲ್ಲಿಸಲಾಗುವುದು. ನಂತರ ಅವರು ಯಾವ ಇಲಾಖೆಗೆ ಎಷ್ಟು ಅನುದಾನ ಎಂಬುದನ್ನು ನಿರ್ಧರಿಸುತ್ತಾರೆ ಎಂದು ಮಾಹಿತಿ ನೀಡಿದರು.
ಬಜೆಟ್‌ನಲ್ಲಿ ಆಯೋಗದ ಶಿಫಾರಸು, ವರದಿಯಲ್ಲಿನ ಅಂಶಗಳನ್ನು ಸೇರಿಸುವುದು ಅಥವಾ ಬಿಡುವುದು ಸರ್ಕಾರದ ವಿವೇಚನೆಗೆ ಬಿಟ್ಟಿದ್ದು. ಹಣಕಾಸಿನ ಲಭ್ಯತೆ ಆಧರಿಸಿ ಪರಿಗಣಿಸಲಾಗುತ್ತದೆ. ಜಿಲ್ಲಾ ಯೋಜನಾ ಸಮಿತಿಗೆ ಚುನಾವಣೆಯೇ ನಡೆದಿಲ್ಲ. ರಾಜ್ಯ ಬಜೆಟ್‌ಗೆ ತಳಮಟ್ಟದ ಮಾಹಿತಿ ನೀಡಬೇಕಾದ ಜಿಲ್ಲಾ ಯೋಜನಾ ಸಮಿತಿಗಳನ್ನು (ಡಿಪಿಸಿ) ರಚಿಸುವಲ್ಲಿ ಮತ್ತು ಸಭೆ ನಡೆಸುವಲ್ಲಿ ಸಚಿವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ತಳಹಂತದ ಸಮಸ್ಯೆಗಳಿಗೆ ಬಜೆಟ್‌ನಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಡಿಪಿಸಿಗೆ ಪರ್ಯಾಯವಾಗಿ ವ್ಯವಸ್ಥೆ ರೂಪಿಸುವಂತೆ ಮನವಿ ಮಾಡಲಾಗಿದೆ ಎಂದರು.
ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯದ ಕಾರಣ ಜನರು ಎಲ್ಲಾ ಸಮಸ್ಯೆಗಳಿಗೂ ಶಾಸಕರನ್ನು ಹುಡುಕಿಕೊಂಡು ಬರುತ್ತಾರೆ. ಹಾಗಾಗಿ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ ಮಾತನಾಡಿ, ರಾಜ್ಯದಲ್ಲಿ ಗದಗದಲ್ಲಿ ಮಾತ್ರ ಜಿಲ್ಲಾ ಯೋಜನಾ ಸಮಿತಿಗೆ ಚುನಾವಣೆ ನಡೆದಿದೆ. ಹಳ್ಳಿಗಳಲ್ಲಿ ಸ್ಮಶಾನಕ್ಕೆ ಜಾಗದ ಸಮಸ್ಯೆ ಇದೆ ಎಂದರು.
ಗೋಷ್ಠಿಯಲ್ಲಿ ಸದಸ್ಯರಾದ ಅಲಿಬಾಬಾ, ಎಸ್.ಮೋಹನ್ ದಾಸ್ ಹೆಗ್ಡೆ, ಡಾ.ರಝಾಕ್ ಉಸ್ತಾದ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.