ADVERTISEMENT

ಅನುದಾನಿತ ಪ್ರೌಢ ಶಾಲೆಗಳ ಶಿಕ್ಷಕರ ವರ್ಗಾವಣೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 20:28 IST
Last Updated 7 ಏಪ್ರಿಲ್ 2022, 20:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: 2022–23 ನೇ ಸಾಲಿನಲ್ಲಿ ಅನುದಾನಿತ ಪ್ರೌಢ ಶಾಲೆಗಳ ಬೋಧಕ, ಬೋಧಕೇತರ ಸಿಬ್ಬಂದಿಯ ವರ್ಗಾವಣೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಒಂದು ಆಡಳಿತ ಸಂಸ್ಥೆಯ ಅನುದಾನಿತ ಪ್ರೌಢಶಾಲೆಯಲ್ಲಿರುವ ಶಿಕ್ಷಕರನ್ನು ಅದೇ ಆಡಳಿತ ಮಂಡಳಿಯ ಇತರ ಅನುದಾನಿತ ಪ್ರೌಢ ಶಾಲೆಗಳಿಗೆ ಅಥವಾ ಇನ್ನೊಂದು ಆಡಳಿತ ಮಂಡಳಿಯ ಅನುದಾನಿತ ಪ್ರೌಢ ಶಾಲೆಗೆ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಒಂದೇ ಆಡಳಿತ ಮಂಡಳಿಯು ಹಲವು ಅನುದಾನಿತ ಪ್ರೌಢ ಶಾಲೆಗಳನ್ನು ನಡೆಸುತ್ತಿವೆ. ಇಂಥಪ್ರೌಢಶಾಲೆಗಳಲ್ಲಿ ನಿಗದಿತ ಕಾರ್ಯಭಾರ ಇಲ್ಲದ ಶಾಲೆಗಳನ್ನು ಗುರುತಿಸಿ, ಅಲ್ಲಿನ ಶಿಕ್ಷಕರನ್ನು ಅದೇ ಸಂಸ್ಥೆಯ ಕಾರ್ಯಭಾರ ಇರುವ ಶಾಲೆಗಳಿಗೆ ಮರು ಹೊಂದಾಣಿಕೆ ಮಾಡಿಕೊಳ್ಳಬಹುದು. ಒಂದು ಆಡಳಿತ ಮಂಡಳಿಯ ಶಾಲೆಯಿಂದ ಇನ್ನೊಂದು ಆಡಳಿತ ಮಂಡಳಿಯ ಶಾಲೆಗೆ ಶಿಕ್ಷಕರ ಕೋರಿಕೆಯ ಮೇರೆಗೆ ಮತ್ತು ಆಡಳಿತ ಮಂಡಳಿಗಳು ಪರಸ್ಪರ ಒಪ್ಪಿದರೆ ವರ್ಗಾವಣೆ ಮಾಡಬಹುದು. ಆದರೆ, ಅನುದಾನಿತ ಪ್ರೌಢಶಾಲೆಗಳಲ್ಲಿ ಮೂರು ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದ ಸಹ ಶಿಕ್ಷಕರು ಹಾಗೂ ನೇಮಕಾತಿ ಹೊಂದಿ ಅನುದಾನಕ್ಕೆ ಒಳಪಟ್ಟ ನಂತರ ಮೂರು ವರ್ಷ ದಾಟಿದ ಶಿಕ್ಷಕರು ಮಾತ್ರ ವರ್ಗಾವಣೆಗೆ ಅರ್ಹತೆ ಪಡೆಯಲಿದ್ದಾರೆ.

ಹೈದರಾಬಾದ್‌ – ಕರ್ನಾಟಕ ಪ್ರದೇಶದ ಸಿಬ್ಬಂದಿಗೆ ನೇಮಕಾತಿ ಹೊಂದಿದ ದಿನದಿಂದ ನಂತರದ 10 ವರ್ಷಗಳವರೆಗೆ ಹೈದರಾಬಾದ್‌– ಕರ್ನಾಟಕ ಪ್ರದೇಶ ಹೊರತುಪಡಿಸಿ, ಬೇರೆ ಸ್ಥಳಗಳಿಗೆ ವರ್ಗಾವಣೆಗೆ ಅವಕಾಶ ಇಲ್ಲ ಎಂದೂ ಸುತ್ತೋಲೆಯಲ್ಲಿ
ಸ್ಪಷ್ಟಪಡಿಸಲಾಗಿದೆ.

ADVERTISEMENT

‘ಶಾಲಾ ಆಡಳಿತ ಮಂಡಳಿಯವರು ಶಿಕ್ಷಕರ ಮರು ಹೊಂದಾಣಿಕೆ ಮತ್ತು ವರ್ಗಾವಣೆ ಪ್ರಸ್ತಾವನೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಲು ಏಪ್ರಿಲ್‌ 11 ಕೊನೆಯ ದಿನ. ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ತಮ್ಮ ಅಭಿಪ್ರಾಯಗಳ ಸಹಿತ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಿಲ್ಲಾ ಉಪ ನಿರ್ದೇಶಕರಿಗೆ ಸಲ್ಲಿಸಲು ಏ. 16 ಕೊನೆಯ ದಿನ. ವರ್ಗಾವಣೆಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಆಯುಕ್ತರು ಅಥವಾ ಹೆಚ್ಚುವರಿ ಆಯುಕ್ತರಿಗೆ ಜಿಲ್ಲಾ ಉಪ ನಿರ್ದೇಶಕರು ಸಲ್ಲಿಸಲು ಏ.26 ಕೊನೆಯ ದಿನ. ವರ್ಗಾವಣೆಗೆ ಮೇ 31ರ ಒಳಗೆ ಅನುಮೋದನೆ ನೀಡಲಾಗುವುದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು (ಪ್ರೌಢ ಶಿಕ್ಷಣ) ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.