ADVERTISEMENT

ಹಿರಿಯ ಅಧಿಕಾರಿಗಳ ಕಿರುಕುಳದ ಆರೋಪ: ಖಾಸಗಿ ಬ್ಯಾಂಕ್‌ ಉದ್ಯೋಗಿ ಆತ್ಮಹತ್ಯೆ

ತಲಘಟ್ಟಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2025, 19:30 IST
Last Updated 8 ಮಾರ್ಚ್ 2025, 19:30 IST
<div class="paragraphs"><p> ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಖಾಸಗಿ ಬ್ಯಾಂಕ್‌ವೊಂದರ ಉದ್ಯೋಗಿ, ತಲಘಟ್ಟಪುರದ ನಿವಾಸಿ ವಿವೇಕ್ ಸಮದರ್ಶಿ (35) ಎಂಬುವವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ತಲಘಟ್ಟಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಮಾರ್ಚ್‌ 6ರ ರಾತ್ರಿ ತಲಘಟ್ಟಪುರದ ತಮ್ಮ ಫ್ಲ್ಯಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಅವರ ಪತ್ನಿ ಮೋನಿಷಾ ಅವರು ದೂರು ನೀಡಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

‘ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ನೀಡುತ್ತಿದ್ದ ಕಿರುಕುಳದಿಂದ ವಿವೇಕ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಕುಟುಂಬಸ್ಥರು ಆರೋಪಿಸಿ ದೂರು ನೀಡಿದ್ದಾರೆ. ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಬಿಹಾರದ ವಿವೇಕ್ ಸಮದರ್ಶಿ ಐದು ವರ್ಷಗಳಿಂದ ಕೋರಮಂಗಲದಲ್ಲಿರುವ ಖಾಸಗಿ ಬ್ಯಾಂಕ್‌ನ ಸಾಲ ವಿತರಣಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಗುರುವಾರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ ಅವರು, ಕೊಠಡಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಕೆಲವೇ ಕ್ಷಣಗಳ ಮೊದಲು ಮಲಗುವ ಕೋಣೆಯ ಪಕ್ಕದಲ್ಲಿರುವ ಕೋಣೆಯಲ್ಲಿ ಕುಳಿತಿದ್ದ ಪತ್ನಿಗೆ ವಿಡಿಯೊ ಕರೆ ಮಾಡಿದ್ದರು. ‘ಗುಡ್ ಬಾಯ್... ಮತ್ತೆ ಯಾವತ್ತೂ ಸಿಗುವುದಿಲ್ಲ’ ಎಂದು ಹೇಳಿದ್ದರು. ಇದರಿಂದ ಗಾಬರಿಗೊಂಡ ಪತ್ನಿ, ಪತಿಯ ಸ್ನೇಹಿತರು ಹಾಗೂ ಸ್ಥಳೀಯರಿಗೆ ವಿಷಯ ತಿಳಿಸಿದ್ದರು. ಅವರು ಬಂದು ಬಾಗಿಲು ಒಡೆದು ನೋಡುವಷ್ಟರಲ್ಲಿ ವಿವೇಕ್‌ ನೇಣು ಹಾಕಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.