ADVERTISEMENT

ಗೊಂದಲದಲ್ಲಿ ಖಾಸಗಿ ಕೇಂದ್ರಗಳು

ಫಲಾನುಭವಿಗಳು ಬಾರದಿದ್ದರೆ ಖರೀದಿಸಿದ ಲಸಿಕೆ ವ್ಯರ್ಥವಾಗುವ ಸಾಧ್ಯತೆ

ವರುಣ ಹೆಗಡೆ
Published 15 ಜುಲೈ 2022, 19:32 IST
Last Updated 15 ಜುಲೈ 2022, 19:32 IST
ಡಾ. ಪ್ರಸನ್ನ ಎಚ್.ಎಂ.
ಡಾ. ಪ್ರಸನ್ನ ಎಚ್.ಎಂ.   

ಬೆಂಗಳೂರು: ಸರ್ಕಾರವು 18 ವರ್ಷಗಳು ಮೇಲ್ಪಟ್ಟವರಿಗೆ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿಯೇ ಉಚಿತವಾಗಿ ಕೋವಿಡ್ ಲಸಿಕೆಯ ಮುನ್ನೆಚ್ಚರಿಕೆ ಡೋಸ್‌ಗಳ ವಿತರಣೆ ಪ್ರಾರಂಭಿಸಿರುವುದರಿಂದ ಖಾಸಗಿ ಆಸ್ಪತ್ರೆಗಳು ಗೊಂದಲಕ್ಕೆ ಒಳಗಾಗಿವೆ. ಬಹುತೇಕ ಕೇಂದ್ರಗಳಲ್ಲಿ ಲಸಿಕೆಯ ದಾಸ್ತಾನು ವ್ಯರ್ಥವಾಗುವ ಸಾಧ್ಯತೆಯಿದೆ.

ಈವರೆಗೆ 18ರಿಂದ 59 ವರ್ಷದವರಿಗೆ ಖಾಸಗಿ ಕೇಂದ್ರಗಳಲ್ಲಿ ಮಾತ್ರ ಮುನ್ನೆಚ್ಚರಿಕೆ ಡೋಸ್‌ಗಳನ್ನು ವಿತರಿಸಲಾಗುತ್ತಿತ್ತು. 60 ವರ್ಷಗಳು ಮೇಲ್ಪಟ್ಟವರು, ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್ ಯೋಧರಿಗೆ ಸರ್ಕಾರಿ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತಿತ್ತು. ಸ್ವಾತಂತ್ರ್ಯದ ಅಮೃತಮಹೋತ್ಸವದ ಪ್ರಯುಕ್ತ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಸರ್ಕಾರಿ ಕೇಂದ್ರಗಳಲ್ಲಿ ಶುಕ್ರವಾರದಿಂದ ಉಚಿತವಾಗಿ ಲಸಿಕೆ ವಿತರಣೆ ಪ್ರಾರಂಭಿಸಲಾಗಿದೆ. ಇದರಿಂದಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಹಣ ಪಾವತಿಸಿ, ಲಸಿಕೆ ಪಡೆಯುವವರ ಸಂಖ್ಯೆ ಇಳಿಮುಖವಾಗುವ ಸಾಧ್ಯತೆಯಿದೆ.

18ರಿಂದ 60 ವರ್ಷದೊಳಗಿನವರಿಗೆ ಸರ್ಕಾರದ ಆದೇಶದ ಅನ್ವಯ ಕಳೆದ ಏ.10ರಿಂದ ಮುನ್ನೆಚ್ಚರಿಕೆ ಡೋಸ್‌ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿತ್ತು. ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್ ಲಸಿಕೆಯ ಮುನ್ನೆಚ್ಚರಿಕೆ ಡೋಸ್‌ಗಳನ್ನು ಲಸಿಕೆ ತಯಾರಿಕಾ ಕಂಪನಿಗಳು ₹225ಕ್ಕೆ ಖಾಸಗಿ ಆಸ್ಪತ್ರೆಗಳಿಗೆ ಒದಗಿಸುತ್ತಿದ್ದವು. ಸೇವಾ ಶುಲ್ಕ ಸಹಿತ ಒಂದು ಡೋಸ್‌ ಲಸಿಕೆಗೆ ಆಸ್ಪತ್ರೆಗಳು ₹ 386 ಪಡೆಯುತ್ತಿದ್ದವು.

ADVERTISEMENT

ಕೇಂದ್ರಗಳ ಸಂಖ್ಯೆ ಇಳಿಕೆ: ನಗರದಲ್ಲಿ 150ಕ್ಕೂ ಅಧಿಕ ಖಾಸಗಿ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಡೋಸ್‌ಗಳನ್ನು ವಿತರಿಸಲಾಗುತ್ತಿತ್ತು. ಸರ್ಕಾರಿ ಕೇಂದ್ರಗಳಲ್ಲಿ ಉಚಿತ ವಿತರಣೆ ಪ್ರಾರಂಭವಾಗುತ್ತಿದ್ದಂತೆ ಖಾಸಗಿ ಕೇಂದ್ರಗಳ ಸಂಖ್ಯೆ ಇಳಿಕೆಯಾಗಿದೆ.ಕೋವಿನ್ ಪೋರ್ಟಲ್‌ನಲ್ಲಿ ಲಸಿಕೆಯನ್ನು ಮುಂಚಿತವಾಗಿ ಕಾಯ್ದಿರಿಸಲು ಅವಕಾಶವಿದ್ದರೂ ಫಲಾನುಭವಿಗಳು ನಿರಾಸಕ್ತಿ ತಾಳಿದ್ದಾರೆ. ವೈದೇಹಿ, ಮಲ್ಲಿಗೆ, ಮಣಿಪಾಲ್, ಸುಗುಣ, ಅಪೋಲೊ, ಫೋರ್ಟಿಸ್ ಸೇರಿದಂತೆ ಪ್ರಮುಖ ಆಸ್ಪತ್ರೆಗಳಲ್ಲಿಯೇ ಲಸಿಕೆ ಕಾಯ್ದಿರಿಸುವ ಪೋರ್ಟಲ್‌ನಲ್ಲಿ ನಿಗದಿಪಡಿಸಲಾದ ಬಹುತೇಕ ಎಲ್ಲ ಸ್ಲಾಟ್‌ಗಳು ಖಾಲಿ ಉಳಿದಿವೆ. ಸದ್ಯ ಪ್ರಮುಖ ಖಾಸಗಿ ಆಸ್ಪತ್ರೆಗಳು ಐದು ಸಾವಿರದಷ್ಟು ಡೋಸ್‌ಗಳ ದಾಸ್ತಾನು ಹೊಂದಿವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 18ರಿಂದ 44 ವರ್ಷದವರಲ್ಲಿ 56.23 ಲಕ್ಷ ಮಂದಿ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. 45 ವರ್ಷಗಳು ಮೇಲ್ಪಟ್ಟವರಲ್ಲಿ 26.34 ಲಕ್ಷಕ್ಕೂ ಅಧಿಕ ಮಂದಿ ಎರಡನೇ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. 18ರಿಂದ 60 ವರ್ಷದೊಳಗಿನವರಲ್ಲಿ 3.24 ಲಕ್ಷ ಮಂದಿ ಮಾತ್ರ ಮೂರನೇ ಡೋಸ್ ಲಸಿಕೆ ಪಡೆದಿದ್ದಾರೆ. 60 ವರ್ಷಗಳು ಮೇಲ್ಪಟ್ಟವರಲ್ಲಿ 3.62 ಲಕ್ಷ ಮಂದಿಗೆ ಮುನ್ನೆಚ್ಚರಿಕೆ ಡೋಸ್ ಲಸಿಕೆ ಹಾಕಲಾಗಿದೆ.

‘ಮುನ್ನೆಚ್ಚರಿಕೆ ಡೋಸ್ ವಿತರಣೆ ಅವಧಿಯನ್ನು 6 ತಿಂಗಳಿಗೆ ಇಳಿಕೆ ಮಾಡಿದ ಬಳಿಕ ಲಸಿಕೆಗೆ ಬೇಡಿಕೆ ಹೆಚ್ಚಲಿದೆ ಎಂದು ಅಧಿಕ ಪ್ರಮಾಣದಲ್ಲಿ ಲಸಿಕೆ ಖರೀದಿಸಲಾಗಿತ್ತು. ಸರ್ಕಾರವು ಈಗ ಏಕಾಏಕಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವುದಾಗಿ ಆದೇಶ ಹೊರಡಿಸಿದೆ. ಇದರಿಂದ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಪಡೆಯಲು ಫಲಾನುಭವಿಗಳು ಬರುವುದಿಲ್ಲ. ಇರುವ ದಾಸ್ತಾನನ್ನು ಏನು ಮಾಡುವುದು ಎಂದು ತಿಳಿಯದಾಗಿದೆ’ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್‌ (ಫನಾ) ನಿಕಟಪೂರ್ವ ಅಧ್ಯಕ್ಷ ಡಾ.ಆರ್. ರವೀಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.