ADVERTISEMENT

ಸಂಧಾನ ವಿಫಲ: ಸೆ.11ರಂದು ಖಾಸಗಿ ಸಾರಿಗೆ ಬಂದ್‌ ನಿಶ್ಚಿತ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2023, 17:37 IST
Last Updated 8 ಸೆಪ್ಟೆಂಬರ್ 2023, 17:37 IST
ರಾಮಲಿಂಗರೆಡ್ಡಿ 
ರಾಮಲಿಂಗರೆಡ್ಡಿ    

ಬೆಂಗಳೂರು: ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಹಾಗೂ ಸರ್ಕಾರದ ನಡುವೆ ನಡೆದ ಸಂಧಾನ ಸಭೆಯು ವಿಫಲವಾಗಿದ್ದು, ಸೆ.11ರಂದು ಖಾಸಗಿ ಸಾರಿಗೆ ಬಂದ್‌ ನಡೆಯುವುದು ಬಹುತೇಕ ನಿಶ್ಚಿತವಾಗಿದೆ.

‘ಶಕ್ತಿ’ ಯೋಜನೆಯಿಂದ ನಷ್ಟಕ್ಕೆ ಸಿಲುಕಿದ್ದು ಖಾಸಗಿ ಸಾರಿಗೆ ವಾಹನ ಚಾಲಕರಿಗೆ ಪರಿಹಾರ ಧನ ನೀಡುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟವು ಬಂದ್‌ಗೆ ಕರೆ ನೀಡಿದೆ.

ಬಂದ್‌ ನಡೆದರೆ ಶಾಲಾ ಮಕ್ಕಳು, ಉದ್ಯೋಗಿಗಳು ಸೇರಿದಂತೆ ಖಾಸಗಿ ಸಾರಿಗೆ ವ್ಯವಸ್ಥೆ ಅವಲಂಬಿಸಿರುವ ಸಾಮಾನ್ಯ ವರ್ಗಕ್ಕೆ ಸೋಮವಾರ ಬೆಳಿಗ್ಗೆಯಿಂದಲೇ ಬಂದ್ ಬಿಸಿ ತಟ್ಟಲಿದೆ.

ADVERTISEMENT

ಸುಮಾರು 32 ಸಂಘಟನೆಗಳ ಮುಖಂಡರು ಸಭೆ ಸೇರಿ ಚರ್ಚೆ ನಡೆಸಿದ್ದೇವೆ. ಈ ಹಿಂದೆ ಬೇಡಿಕೆ ಈಡೇರಿಕೆ ಸಂಬಂಧ ಸಾರಿಗೆ ಸಚಿವ ರಾಮಲಿಂಗರೆಡ್ಡಿ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಆಗ ಅವರು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ, ಈವರೆಗೂ ಈಡೇರಿಸಲು ಮುಂದಾಗಿಲ್ಲ. ಆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಂದ್‌ಗೆ ಕರೆ ನೀಡಲಾಗಿದೆ. ಬೇಡಿಕೆ ಈಡೇರಿಕೆಯ ವಿಚಾರವು ಆದೇಶದ ರೂಪದಲ್ಲಿಯೇ ನೀಡಬೇಕು ಎಂದು ಒಕ್ಕೂಟದ ರಾಜ್ಯ ಅಧ್ಯಕ್ಷ ಎಸ್.ನಟರಾಜ್ ಆಗ್ರಹಿಸಿದ್ದಾರೆ.

ಬಂದ್‌ಗೆ ಬೆಂಬಲ ಸೂಚಿಸಿ ವಾಹನಗಳ ಮೇಲೆ ಭಿತ್ತಿಚಿತ್ರಗಳನ್ನು ಅಂಟಿಸಿರುವುದು

‘ಶಕ್ತಿ’ ಯೋಜನೆ ಜಾರಿಯಿಂದ ಬಸ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣಿಸುತ್ತಿದ್ದಾರೆ. ಖಾಸಗಿ ಸಾರಿಗೆ ಬಳಸುತ್ತಿಲ್ಲ. ಇದರಿಂದ ನಷ್ಟವಾಗುತ್ತಿದೆ. ಅಕ್ರಮವಾಗಿ ಚಲಿಸುತ್ತಿರುವ ರಾಪಿಡೊ ಬೈಕ್, ಟ್ಯಾಕ್ಸಿ ಸಂಪೂರ್ಣವಾಗಿ ನಿಷೇಧಿಸುವ ಕೆಲಸ ಸರ್ಕಾರದಿಂದಲೂ ನಡೆದಿಲ್ಲ ಎಂದು ದೂರಿದರು.

ಆಟೊ, ಟ್ಯಾಕ್ಸಿ, ಖಾಸಗಿ ಬಸ್‌ಗಳ ಚಾಲಕರು ಮತ್ತು ಮಾಲೀಕರ ಬೇಡಿಕೆಗಳಲ್ಲಿ ಬಹುತೇಕ ಅಂಶಗಳಿಗೆ ಸರ್ಕಾರ ಸ್ಪಂದಿಸಿದ್ದು, ಈಡೇರಿಕೆ ವಿವಿಧ ಹಂತದಲ್ಲಿವೆ. ಎರಡು, ಮೂರು ಮಾತ್ರ ಮುಖ್ಯಮಂತ್ರಿ ಹಂತದಲ್ಲೇ ತೀರ್ಮಾನ ಆಗಬೇಕಿದೆ. ಅದಕ್ಕಾಗಿ ಸ್ವತಃ ಮುಖ್ಯಮಂತ್ರಿ ಸಭೆಗೆ ಆಹ್ವಾನಿಸಿದರೂ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಲಿಲ್ಲ. ಆ ಅವಕಾಶವನ್ನೂ ಕೈಚೆಲ್ಲಿದರು. ಈಗ ಮುಷ್ಕರ ನಡೆಸುವುದಾಗಿ ಹೇಳುತ್ತಿದ್ದಾರೆ. ಇದು ಎಷ್ಟು ಸರಿ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಪ್ರಶ್ನಿಸಿದ್ದಾರೆ.

ಇಂದು ಮತ್ತೊಮ್ಮೆ ಚರ್ಚೆ ಬಂದ್ ನಡೆಸದಂತೆ ಮನವಿ ಮಾಡಲಾಗಿದೆ. ಒಂದು ವೇಳೆ ಬಂದ್ ನಡೆಸಿದರೆ ತೊಂದರೆ ಆಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು. ಪೊಲೀಸರಿಗೂ ಸೂಚನೆ ನೀಡಲಾಗಿದೆ. ಒಕ್ಕೂಟದ ಸದಸ್ಯರು ಶನಿವಾರ ಮತ್ತೊಮ್ಮೆ ನನ್ನನ್ನು ಭೇಟಿ ಮಾಡಲಿದ್ದಾರೆ. ಮತ್ತೊಮ್ಮೆ ಒಕ್ಕೂಟದ ಸದಸ್ಯರ ಜತೆಗೆ ಚರ್ಚಿಸಲಾಗುವುದು.
– ರಾಮಲಿಂಗರೆಡ್ಡಿ ಸಾರಿಗೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.