ADVERTISEMENT

‘ಧರ್ಮಗಳನ್ನು ಮುನ್ನಡೆಸುವ ಕೈಗಳಿಂದ ಕಟ್ಟುಪಾಡು’

ಪ್ರಾಧ್ಯಾಪಕ ಡಾ.ಎಸ್.ಎಲ್. ಶ್ರೀನಿವಾಸಮೂರ್ತಿ ಬೇಸರ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 20:15 IST
Last Updated 17 ಜನವರಿ 2021, 20:15 IST
ಟಿ.ಎಸ್. ನಾಗಾಭರಣ ಅವರು ಶಶಿ ತರೀಕೆರೆ ಅವರಿಗೆ ‘ಡಾ. ಬಾಲೂರಾವ್ ಯುವ ಬರಹಗಾರ ಪ್ರಶಸ್ತಿ’ ಹಾಗೂ ಪ್ರೊ.ಎಂ. ಅಬ್ದುಲ್ ರೆಹಮಾನ್ ಪಾಷಾ ಅವರಿಗೆ ‘ಡಾ. ಬಾಲೂರಾವ್ ಅನುವಾದ ಪ್ರಶಸ್ತಿ’ ಪ್ರದಾನ ಮಾಡಿದರು. ಡಾ.ಎಸ್.ಎಲ್. ಶ್ರೀನಿವಾಸಮೂರ್ತಿ, ಪ್ರತಿಷ್ಠಾನದ ಅಧ್ಯಕ್ಷ ಡಾ.ಆರ್. ಲಕ್ಷ್ಮೀನಾರಾಯಣ, ಗೌರವ ಕಾರ್ಯದರ್ಶಿ ಡಾ.ಬಿ.ಸಿ. ರಾಜಕುಮಾರ್ ಹಾಗೂ ಗೌರವ ಕೋಶಾಧ್ಯಕ್ಷ ಡಾ.ಎಸ್. ಅನಿಲ್ ಕುಮಾರ್ ಇದ್ದರು. –ಪ್ರಜಾವಾಣಿ ಚಿತ್ರ
ಟಿ.ಎಸ್. ನಾಗಾಭರಣ ಅವರು ಶಶಿ ತರೀಕೆರೆ ಅವರಿಗೆ ‘ಡಾ. ಬಾಲೂರಾವ್ ಯುವ ಬರಹಗಾರ ಪ್ರಶಸ್ತಿ’ ಹಾಗೂ ಪ್ರೊ.ಎಂ. ಅಬ್ದುಲ್ ರೆಹಮಾನ್ ಪಾಷಾ ಅವರಿಗೆ ‘ಡಾ. ಬಾಲೂರಾವ್ ಅನುವಾದ ಪ್ರಶಸ್ತಿ’ ಪ್ರದಾನ ಮಾಡಿದರು. ಡಾ.ಎಸ್.ಎಲ್. ಶ್ರೀನಿವಾಸಮೂರ್ತಿ, ಪ್ರತಿಷ್ಠಾನದ ಅಧ್ಯಕ್ಷ ಡಾ.ಆರ್. ಲಕ್ಷ್ಮೀನಾರಾಯಣ, ಗೌರವ ಕಾರ್ಯದರ್ಶಿ ಡಾ.ಬಿ.ಸಿ. ರಾಜಕುಮಾರ್ ಹಾಗೂ ಗೌರವ ಕೋಶಾಧ್ಯಕ್ಷ ಡಾ.ಎಸ್. ಅನಿಲ್ ಕುಮಾರ್ ಇದ್ದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಎಲ್ಲ ಧರ್ಮಗಳು ಜೀವನ ಪಾಠಗಳನ್ನು ಬೋಧಿಸಿ, ಸಕಾರಾತ್ಮಕ ಚಿಂತನೆಗಳನ್ನು ಬಿತ್ತುತ್ತವೆ. ಆದರೆ, ಈ ಧರ್ಮಗಳನ್ನು ಮುನ್ನಡೆಸುವ ಕೈಗಳು ತಮ್ಮ ಮಾತು ನಡೆಯಬೇಕೆಂಬ ಕಾರಣಕ್ಕೆ ಕೆಲವೊಂದು ಕಟ್ಟುಪಾಡುಗಳನ್ನು ವಿಧಿಸುತ್ತಿವೆ’ ಎಂದು ವಿಜಯ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಸ್‌.ಎಲ್. ಶ್ರೀನಿವಾಸ ಮೂರ್ತಿ ಬೇಸರ ವ್ಯಕ್ತಪಡಿಸಿದರು.

ಬಿ.ಎಂ.ಶ್ರೀ. ಪ್ರತಿಷ್ಠಾನ ನಗರದಲ್ಲಿ ಭಾನುವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಶಶಿ ತರಿಕೇರೆ ಅವರಿಗೆ ‘ಡಾ. ಬಾಲೂರಾವ್ ಯುವ ಬರಹಗಾರ ಪ್ರಶಸ್ತಿ’ ಹಾಗೂ ಪ್ರೊ.ಎಂ. ಅಬ್ದುಲ್ ರೆಹಮಾನ್ ಪಾಷಾ ಅವರಿಗೆ ‘ಶಾ ಬಾಲೂರಾವ್ ಅನುವಾದ
ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು. ಈ ‍ಪ್ರಶಸ್ತಿಗಳು ತಲಾ ₹ 25 ಸಾವಿರ ನಗದು ಬಹುಮಾನ ಒಳಗೊಂಡಿದೆ.

‌‘ಧರ್ಮ ಎನ್ನುವುದು ವ್ಯಕ್ತಿಯ ವೈಯಕ್ತಿಕ ವಿಚಾರ. ಮನೆಯಲ್ಲಿ ಯಾವ ದೇವರನ್ನು ಪೂಜೆ ಮಾಡಬೇಕು ಎನ್ನುವುದು ನಮಗೆ ಬಿಟ್ಟಿದ್ದು. ಪ್ರತಿ ಧರ್ಮವೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡು, ಸಮಾಜಕ್ಕೆ ಕೊಡುಗೆ ನೀಡು ಎಂಬಂತಹ ಚಿಂತನೆಗಳನ್ನು ಬಿತ್ತುತ್ತವೆ. ಈ ಧರ್ಮವನ್ನು ಮುನ್ನಡೆಸುವವರು ಜನಸಾಮಾನ್ಯರ ಮೇಲೆ ಕಟ್ಟುಪಾಡುಗಳನ್ನು ವಿಧಿಸುತ್ತಾ ಬಂದಿದ್ದಾರೆ. ಮನೆಯ ಮಟ್ಟದಲ್ಲಿಯೇ ಈ
ಕಟ್ಟುಪಾಡುಗಳನ್ನು ತಡೆದುಕೊಳ್ಳಲು ಕಷ್ಟವಾಗುತ್ತದೆ. ಹೀಗಿರುವಾಗ ಧರ್ಮದ ಹೆಸರಿನಲ್ಲಿ ಸಾಮಾಜಿಕವಾಗಿ ಎದುರಾಗುವ ಒತ್ತಡಗಳನ್ನು ಸಹಿಸಿಕೊಂಡು ಸಾಗಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ADVERTISEMENT

ಪ್ರಶಸ್ತಿ ಪುರಸ್ಕೃತ ಪ್ರೊ.ಎಂ. ಅಬ್ದುಲ್ ರೆಹಮಾನ್ ಪಾಷಾ ಮಾತನಾಡಿ, ‘ನಾವೆಲ್ಲರೂ ಒಂದೇ ಸಂವಿಧಾನದ ಅಡಿಯಲ್ಲಿ ಬದುಕುತ್ತಿದ್ದೇವೆ. ಮುಸ್ಲಿಂ ಸಮುದಾಯದ ಬಗ್ಗೆ ಮುಸ್ಲಿಮೇತರರಿಗೆ ಮಾಹಿತಿ ಕಡಿಮೆ. ಇದರಿಂದಾಗಿ ವಿವಿಧ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಮುಸ್ಲಿಂ ಸಮುದಾಯವು ಮಹಿಳಾ ವಿಮೋಚನೆ ಮತ್ತು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕಾಗಿತ್ತು. ಆದರೆ, ಇದು ಈವರೆಗೂ ಸಾಕಾರವಾಗಿಲ್ಲ. ‘ಕುರಾನ್’ ಸೇರಿದಂತೆ ವಿವಿಧ ಧಾರ್ಮಿಕ ಗ್ರಂಥಗಳಲ್ಲಿ ಮಹಿಳೆಯ ಬಗ್ಗೆ ಪ್ರಗತಿಪರ ವಿಚಾರಗಳನ್ನು ಹೇಳಲಾಗಿದೆ. ಆದರೆ, ಅವುಗಳ ಮೇಲೆ ದೂಳು ಕುಳಿತುಕೊಳ್ಳುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.