ADVERTISEMENT

ಈಜಿಪುರ ಮೇಲ್ಸೇತುವೆ ಕಾಮಗಾರಿಗೆ ಗ್ರಹಣ

ಆರು ತಿಂಗಳಿನಿಂದ ಕಾಮಗಾರಿ ಸ್ಥಗಿತ: ಭೂಮಿ ಹಸ್ತಾಂತರ ವಿಳಂಬ l ಕಾಮಗಾರಿ ಚುರುಕುಗೊಳಿಸಲು ಆಗ್ರಹ

ವಿಜಯಕುಮಾರ್ ಎಸ್.ಕೆ.
Published 29 ಸೆಪ್ಟೆಂಬರ್ 2020, 20:15 IST
Last Updated 29 ಸೆಪ್ಟೆಂಬರ್ 2020, 20:15 IST
ಕೇಂದ್ರೀಯ ಸದನದ ಬಳಿ ಮೇಲ್ಸೇತುವೆ ಕಾಮಗಾರಿ ಸ್ಥಗಿತಗೊಂಡಿರುವುದು (ಎಡಚಿತ್ರ), ಸೋನಿ ಸಿಗ್ನಲ್ ಬಳಿ ಮೇಲ್ಸೇತುವೆ ಕಾಮಗಾರಿ ಸ್ಥಗಿತಗೊಂಡಿರುವುದು –ಪ್ರಜಾವಾಣಿ ಚಿತ್ರಗಳು/ಇರ್ಷಾದ್ ಮಹಮ್ಮದ್
ಕೇಂದ್ರೀಯ ಸದನದ ಬಳಿ ಮೇಲ್ಸೇತುವೆ ಕಾಮಗಾರಿ ಸ್ಥಗಿತಗೊಂಡಿರುವುದು (ಎಡಚಿತ್ರ), ಸೋನಿ ಸಿಗ್ನಲ್ ಬಳಿ ಮೇಲ್ಸೇತುವೆ ಕಾಮಗಾರಿ ಸ್ಥಗಿತಗೊಂಡಿರುವುದು –ಪ್ರಜಾವಾಣಿ ಚಿತ್ರಗಳು/ಇರ್ಷಾದ್ ಮಹಮ್ಮದ್   

ಬೆಂಗಳೂರು: ನಗರದ ಎರಡನೇ ಅತಿ ಉದ್ದದ ಮೇಲ್ಸೇತುವೆ ಎನ್ನಲಾದ ಈಜಿಪುರ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಸಂಚಾರಕ್ಕೆ ಪರ್ಯಾಯ ಮಾರ್ಗಗಳ ಹುಡುಕಾಟ, ಭೂಮಿ ಹಸ್ತಾಂತರ ವಿಳಂಬದಂತಹ ಸಮಸ್ಯೆಗಳು ಕಾಮಗಾರಿಗೆ ತೊಡಕಾಗಿ ಪರಿಣಮಿಸಿವೆ.

ಕೋರಮಂಗಲ100 ಅಡಿ ಮುಖ್ಯರಸ್ತೆಯಲ್ಲಿನ ಈಜೀಪುರ ಮುಖ್ಯರಸ್ತೆ–ಒಳವರ್ತುಲ ರಸ್ತೆ ಜಂಕ್ಷನ್‌ನಿಂದ ಕೇಂದ್ರೀಯ ಸದನ ಜಂಕ್ಷನ್‌ವರೆಗೆ ನಿರ್ಮಾಣವಾಗುತ್ತಿರುವ 2.5 ಕಿ.ಮೀ. ಉದ್ದದ ಈ ಮೇಲ್ಸೇತುವೆ ಕಾಮಗಾರಿಗೆ ಈಗ ಗ್ರಹಣ ಹಿಡಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಕುಂಟುತ್ತಾ ಸಾಗಿದ್ದ ಕಾಮಗಾರಿ ಈಗ ಸಂಪೂರ್ಣ ಸ್ಥಗಿತಗೊಂಡಿದೆ.

66 ಕಾಂಕ್ರೀಟ್‌ ಕಂಬಗಳ ನಿರ್ಮಾಣ, ಅದರ ಮೇಲಿನ ಕ್ಯಾಪ್‌, ಪೊರ್ಟಲ್ ಬೀಮ್ ನಿರ್ಮಾಣ ಪೂರ್ಣಗೊಂಡಿದೆ. ಸೆಗ್‌ಮೆಂಟ್ ಅಳವಡಿಕೆ ಕೆಲಸ ಬಾಕಿ ಇದೆ.ಬನ್ನೇರುಘಟ್ಟ ರಸ್ತೆಯ ಘಟಕದಲ್ಲಿ ಸೆಗ್‌ಮೆಂಟ್‌ಗಳುನಿರ್ಮಾಣವಾಗುತ್ತಿದ್ದು, ಅಲ್ಲಿಂದ ಅವುಗಳನ್ನು ತಂದು ಕಂಬಗಳ ಮೇಲೆ ಜೋಡಿಸಬೇಕಿದೆ.

ADVERTISEMENT

ಆದರೆ, ಅವುಗಳನ್ನು ತಂದು ಕ್ರೇನ್‌ ಮೂಲಕ ಅಳವಡಿಸಲು ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಬೇಕಾಗುತ್ತದೆ. ದೊಮ್ಮಲೂರು, ಇಂದಿರಾ ನಗರದಿಂದ ಮಡಿವಾಳ ಮತ್ತು ಸೇಂಟ್ ಜಾನ್ ಆಸ್ಪತ್ರೆ ಕಡೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಸದಾ ದಟ್ಟಣೆಯಿಂದ ಕೂಡಿರುವ ಈ ರಸ್ತೆಯಲ್ಲಿ ಬರುವ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸುವುದು ಅಧಿಕಾರಿಗಳಿಗೆ ಸವಾಲಿನ ಕೆಲಸವಾಗಿದೆ.

ಲೂಪ್ ನಿರ್ಮಾಣ ಮಾಡಲು ಸೆಂಟ್ ಜಾನ್ ಆಸ್ಪತ್ರೆ ಮತ್ತು ಜಲಮಂಡಳಿಯಿಂದ ಜಾಗ ಹಸ್ತಾಂತರ ಆಗಬೇಕಿದೆ. ಹೀಗಾಗಿ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ.

ಗುತ್ತಿಗೆದಾರರಿಗೆ ನೀಡಿದ ಕಾರ್ಯಾದೇಶದ ಪ್ರಕಾರ 2017ರ ಮೇ 4ರಂದು ಆರಂಭವಾಗಿ 2019ರ ನವೆಂಬರ್ 4ಕ್ಕೆ ಪೂರ್ಣಗೊಳ್ಳಬೇಕಿತ್ತು. ಗುಂಡಿ ತೆಗೆಯಲು ಬಂಡೆಗಳನ್ನು ಸಿಡಿಸಲು ಪೊಲೀಸ್‌ ಇಲಾಖೆಯಿಂದ, ಮರಗಳನ್ನು ಕಡಿಯಲು ಬಿಬಿಎಂಪಿಯ ಅರಣ್ಯ ವಿಭಾಗದಿಂದ, ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ ಬೆಸ್ಕಾಂನಿಂದ, ಒಳಚರಂಡಿ ಮಾರ್ಗ ಬದಲಾವಣೆಗೆ ಜಲಮಂಡಳಿಯಿಂದ ಅನುಮತಿ ಸಿಗುವುದು ತಡವಾಗಿತ್ತು. ಹಾಗಾಗಿ ಕಾಮಗಾರಿ ಕಾಂಕ್ರೀಟ್‌ ಕಂಬಗಳ ನಿರ್ಮಾಣ ವಿಳಂಬವಾಯಿತು ಎಂದು ಅಧಿಕಾರಿಗಳು ಕಾರಣ ನೀಡುತ್ತಾರೆ.

‘ಕಾಮಗಾರಿ ಸ್ಥಗಿತಗೊಂಡು ಐದಾರು ತಿಂಗಳುಗಳೇ ಆಗಿದೆ. ಕಾಮಗಾರಿ ಆರಂಭವಾಗುವುದು ಯಾವಾಗ, ಮುಗಿಯುವುದು ಯಾವಾಗ ಎಂಬುದೇ ಗೊತ್ತಿಲ್ಲ’ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

ಕಾಂಕ್ರೀಟ್‌ ಕಂಬಗಳ ಸುತ್ತಲೂ ಈಗ ಗಿಡಗಂಟಿಗಳು ಬೆಳೆದಿದ್ದು, ಇವು ಕಾಮಗಾರಿಯ ವೇಗ ಎಷ್ಟಿದೆ ಎಂಬುದಕ್ಕೆ ಸಾಕ್ಷ್ಯದಂತಿವೆ.

‘ಕಾಮಗಾರಿ ಆರಂಭವಾದ ನಂತರ ವಾಹನ ಸಂಚಾರಕ್ಕೆ ಇದ್ದ ಜಾಗ ಕಡಿಮೆಯಾಗಿದೆ. ಇದರ ನಡುವೆ ಸಿಗ್ನಲ್‌ಗಳಲ್ಲಿ ನಿಂತು, ನಿಂತು ವಾಹನ ಚಾಲನೆ ಮಾಡುವುದೇ ಕಷ್ಟವಾಗಿದೆ. ಬಿಬಿಎಂಪಿ ಶೀಘ್ರದಲ್ಲಿ ಕಾಮಗಾರಿ ಮುಗಿಸಬೇಕು’ ಎಂದು ಸ್ಥಳೀಯರು ಮನವಿ ಮಾಡಿದರು.

ಸಿಗ್ನಲ್ ಮುಕ್ತವಾಗಲಿವೆ ಏಳು ಜಂಕ್ಷನ್

ಕಾಮಗಾರಿ ಪೂರ್ಣಗೊಂಡರೆ ಏಳು ಪ್ರಮುಖ ಜಂಕ್ಷನ್‌ಗಳು ಸಿಗ್ನಲ್ ಮುಕ್ತವಾಗಲಿವೆ. ಈಜಿಪುರ ಜಂಕ್ಷನ್, ಸೋನಿ ವರ್ಲ್ಡ್ ಜಂಕ್ಷನ್, ಕೇಂದ್ರೀಯ ಸದನ, ಕೋರಮಂಗಲ 8ನೇ ಮುಖ್ಯರಸ್ತೆ, ಕೋರಮಂಗಲ 60 ಅಡಿ ರಸ್ತೆ ಸರ್ಕಲ್, 5ನೇ ಬ್ಲಾಕ್ 1–ಎ ಕ್ರಾಸ್ ಜಂಕ್ಷನ್, ಬಿಡಿಎ ಜಂಕ್ಷನ್‌ಗಳಲ್ಲಿ ಈಗ ಸಿಗ್ನಲ್ ದಾಟಲು ವಾಹನ ಸವಾರರು ಕಷ್ಟಪಡುತ್ತಿದ್ದಾರೆ. ದಕ್ಷಿಣದಿಂದ ಹಳೇ ವಿಮಾನ ನಿಲ್ದಾಣ ರಸ್ತೆ, ಹಳೇ ಮದ್ರಾಸ್ ರಸ್ತೆ ಕಡೆಗೆ ಹೋಗುವವರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದರು.

‘ಪರ್ಯಾಯ ಮಾರ್ಗಕ್ಕೆ ಹುಡುಕಾಟ’

ಕ್ರೇನ್‌ ಬಳಕೆ ಮಾಡಿ ಸೆಗ್ಮೆಂಟ್‌ಗಳನ್ನು ಜೋಡಿಸಬೇಕಿದೆ. ಈ ಸಂದರ್ಭದಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಬೇಕಾಗಿದೆ ಎಂದು ಬಿಬಿಎಂಪಿಯ ಮುಖ್ಯ ಎಂಜಿನಿಯರ್‌ (ಯೋಜನೆ) ರಮೇಶ್ ಹೇಳಿದರು.

‘ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಹುಡುಕಲಾಗುತ್ತಿದೆ. ಸೆಂಟ್‌ ಜಾನ್ ಆಸ್ಪತ್ರೆ ಮತ್ತು ಜಲಮಂಡಳಿಯಿಂದ ಭೂಮಿ ಹಸ್ತಾಂತರ ವಿಳಂಬವಾಗುತ್ತಿದೆ. ಈ ಸಮಸ್ಯೆಗಳು ಪರಿಹಾರವಾದರೆ ಗುತ್ತಿಗೆದಾರರು ಕಾಮಗಾರಿ ಚುರುಕುಗೊಳಿಸಿ ಪೂರ್ಣಗೊಳಿಸಲಿದ್ದಾರೆ’ ಎಂದು ತಿಳಿಸಿದರು.

ಅಂಕಿ–ಅಂಶ

ಯೋಜನಾ ಮೊತ್ತ; ₹ 203.20 ಕೋಟಿ

ಮೇಲ್ಸೇತುವೆ ಉದ್ದ; 2.5 ಕಿ.ಮೀ

ನಿರ್ಮಾಣವಾಗಿರುವ ಕಂಬಗಳು; 66

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.