ADVERTISEMENT

ಮಹನೀಯರ ಚಿಂತನೆ ದೂರ ಮಾಡುವ ಹುನ್ನಾರ: ಪ್ರೊ.ಜಾಫೆಟ್‌ ಆತಂಕ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 20:19 IST
Last Updated 3 ಜೂನ್ 2022, 20:19 IST

ಬೆಂಗಳೂರು: ‘ಕನ್ನಡ ಭಾಷೆ ವಿವೇಕವನ್ನು ಕ್ಷಣಮಾತ್ರದಲ್ಲಿ ವಿರೂಪಗೊಳಿಸುವ ಕೆಲಸವನ್ನು ಪಠ್ಯಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ಮಾಡಲಾಗಿದೆ’ ಎಂದು ಬೆಂಗಳೂರು ನಗರ ವಿ.ವಿಯ ವಿಶ್ರಾಂತ ಕುಲಪತಿ ಪ್ರೊ.ಜಾಫೆಟ್‌ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಶಾಲಾ ಪಠ್ಯ ಪುಸ್ತಕಗಳಲ್ಲಿ ಎಡಪಂಥೀಯ ಧೋರಣೆಗಳು ಅಡಕಗೊಂಡಿವೆ’ ಎಂದು ಆರೋಪಿಸಿ, ಕನ್ನಡ ವಿವೇಕಕ್ಕೆ ಅನ್ವರ್ಥವಾಗಿದ್ದ ಪಿ.ಲಂಕೇಶ್, ಎಲ್. ಬಸವರಾಜು ಅವರಂತಹ ವಿದ್ವಾಂಸರ ಬರಹಗಳನ್ನು ಪಠ್ಯಗಳಿಂದ ಕಿತ್ತುಹಾಕಲಾಗಿದೆ.‌ಹುಸಿ ರಾಷ್ಟ್ರಭಕ್ತಿಯ ಮನೋರೋಗವನ್ನು ಮಕ್ಕಳಿಗೆ ಪರಿಚಯಿಸುವ ಮೂಲಕ ಈ ನೆಲದಲ್ಲಿ ಬುದ್ಧ, ಬಸವ, ಮಹಾತ್ಮ ಗಾಂಧಿ, ನಾರಾಯಣ ಗುರು, ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ ಅವರ ಚಿಂತನೆಗಳನ್ನು ಮಕ್ಕಳಿಂದ ನಿಧಾನವಾಗಿ ದೂರ ಮಾಡುವ ಯೋಜನೆ ಕಾಣಿಸುತ್ತಿದೆ. ಪಠ್ಯಕ್ರಮ ಮತ್ತು ಪಠ್ಯಗಳನ್ನು ವಿದ್ಯಾರ್ಥಿಗಳ ವಯೋಮಾನವನ್ನು ಆಧರಿಸಿ ರೂಪುಗೊಳಿಸಬೇಕು. ಪ್ರಾಥಮಿಕ ಹಂತದಲ್ಲಿ ಜೀವನ ಮೌಲ್ಯಗಳು ಹಾಗೂ ಪ್ರೌಢ ಶಿಕ್ಷಣದಲ್ಲಿ ವಿಷಯವಾರು ಮಾಹಿತಿಗಳು ಮಕ್ಕಳಿಗೆ ಲಭ್ಯವಾಗುವಂತಿರಬೇಕು ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ. ಆದರೆ, ಚಕ್ರತೀರ್ಥ ಅವರ ಮೂಲಕ ಪರಿಷ್ಕರಣಾ ಸಮಿತಿಯು ಕಲ್ಪಿತ ಹಿಂದೂ ರಾಷ್ಟ್ರದ ನಿರ್ಮಾಣಕ್ಕೆ ಬೇಕಿರುವ ಭಾವನಾತ್ಮಕ ಮೌಢ್ಯವನ್ನು ಮಕ್ಕಳಿಗೆ ಹಾಲಿನ ಜೊತೆ ವಿಷ ಬೆರೆಸಿಕೊಡುವಂತೆ ವಿನ್ಯಾಸಗೊಳಿಸಿದೆ’ ಎಂದು ದೂರಿದ್ದಾರೆ.

‘ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಪರಿಷ್ಕರಣ ಸಮಿತಿಯ ಅವೈಜ್ಞಾನಿಕ ನಿಲುವಿಗೆ ಬೆಂಬಲವಾಗಿ ನಿಂತಿರುವುದು ಮಾತ್ರ ವಿಷಾದನೀಯ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.