ADVERTISEMENT

‘ಗೆಸ್ಟ್‌ ಹೌಸ್‌’ನಲ್ಲಿ ವೇಶ್ಯಾವಾಟಿಕೆ; ಮೂವರ ಸೆರೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 20:01 IST
Last Updated 29 ಜನವರಿ 2019, 20:01 IST
   

ಬೆಂಗಳೂರು: ಪಶ್ಚಿಮ ಬಂಗಾಳ ಹಾಗೂ ದೆಹಲಿ ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮೂವರು ಸಿಸಿಬಿ ಬಲೆಗೆ ಬಿದ್ದಿದ್ದಾರೆ.

ಕೋರಮಂಗಲ 6ನೇ ಬ್ಲಾಕ್‌ನ ಮನೆಯೊಂದರ ಮೇಲೆ ಭಾನುವಾರ ದಾಳಿ ನಡೆಸಿದ ಸಿಸಿಬಿ ಎಸಿಪಿ ಮೋಹನ್‌ ಕುಮಾರ್ ನೇತೃತ್ವದ ತಂಡ, ಮಂಡ್ಯ ಜಿಲ್ಲೆಯ ಎ.ಎನ್.ಮಹೇಶ್ (38), ರಜಿತ್ (28) ಹಾಗೂ ಚಾಮರಾಜನಗರದ ಶಿವರಾಜು (28) ಎಂಬುವರನ್ನು ಬಂಧಿಸಿದೆ.

ಕುಟುಂಬ ಸದಸ್ಯರೊಂದಿಗೆ ವಾಸವಿರುವುದಾಗಿ ಮಾಲೀಕರಿಗೆ ಸುಳ್ಳು ಹೇಳಿ ನಾಲ್ಕು ಬೆಡ್‌ ರೂಂಗಳಿರುವ ಮನೆಯನ್ನು ಬಾಡಿಗೆ ಪಡೆದಿದ್ದ ಮಹೇಶ್, ಅದಕ್ಕೆ ‘ಸೆಕೆಂಡ್ ಹೌಸ್ ಸರ್ವಿಸ್ ಗೆಸ್ಟ್‌ಹೌಸ್’ ‌ಎಂದು ಹೆಸರಿಟ್ಟು ದಂಧೆ ನಡೆಸುತ್ತಿದ್ದ. ಮಾಲೀಕರು ವಿದೇಶದಲ್ಲಿದ್ದ ಕಾರಣ ಅವರಿಗೆ ಈ ಸಂಗತಿ ಗೊತ್ತಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಕೆಲಸದ ಆಮಿಷಒಡ್ಡಿ ಇಬ್ಬರು ಯುವತಿಯರನ್ನು ನಗರಕ್ಕೆ ಕರೆತಂದಿದ್ದ ಆರೋಪಿಗಳು, ಅವರಿಗೆ ಬೇರೆ ಕಡೆ ಬಾಡಿಗೆ ಮನೆ ಮಾಡಿಕೊಟ್ಟಿದ್ದರು. ‘ವೇಶ್ಯಾವಾಟಿಕೆ ನಡೆಸಿದರೆ ಹೆಚ್ಚು ಸಂಪಾದನೆ ಮಾಡಬಹುದು’ ಎಂದು ಅವರನ್ನು ಪುಸಲಾಯಿಸಿ, ಈ ಕೂಪಕ್ಕೆ ತಳ್ಳಿದ್ದರು. ಗಿರಾಕಿಗಳನ್ನು ಹುಡುಕಿ ತರುವ ಕೆಲಸ ರಜಿತ್ ಹಾಗೂ ಶಿವರಾಜು ಅವರದ್ದಾಗಿತ್ತು.

ಪ್ರತಿ ಗಿರಾಕಿಯಿಂದ ₹ 15- 20 ಸಾವಿರ ಪಡೆಯುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಈ ಗ್ಯಾಂಗ್‌ನ ಮುಖಂಡ ಆಂಧ್ರಪ್ರದೇಶದವನು. ಆತನ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಬಂಧಿಸ ಲಾಗುವುದು. ಆರೋಪಿಗಳಿಂದ ಕಾರು, 6 ಮೊಬೈಲ್‌,14 ಕಾಂಡೋಮ್‌ ಜಪ್ತಿ ಮಾಡಲಾಗಿದೆ. ಯುವತಿಯರಿಗೆ ಬುದ್ಧಿ ಹೇಳಿ ತವರು ಸ್ಥಳಗಳಿಗೆ ಕಳುಹಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.