ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಘನತೆ ಮತ್ತು ಪಾವಿತ್ರ್ಯವನ್ನು ಉಳಿಸಲು ಸರ್ಕಾರ ಮಧ್ಯ ಪ್ರವೇಶಿಸಿ, ಕಸಾಪ ರಕ್ಷಣೆಗೆ ತುರ್ತು ಕ್ರಮಗೈಗೊಳ್ಳಬೇಕು’ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕಸಾಪ ವಿರುದ್ಧ ಹೋರಾಟ ಮಾಡುತ್ತಿರುವ ಕರ್ನಾಟಕ ನಾಡು-ನುಡಿ ಜಾಗೃತಿ ಸಮಿತಿಯನ್ನು ಬೆಂಬಲಿಸಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
‘ಕಸಾಪ ಹಾಲಿ ಅಧ್ಯಕ್ಷರ ಅಸಮರ್ಪಕ ಮತ್ತು ಸರ್ವಾಧಿಕಾರಿ ಶೈಲಿಯ ಕಾರ್ಯವೈಖರಿ ಬಗ್ಗೆ ಸಮಿತಿ ಗಮನ ಸೆಳೆದಿದೆ. ಅಂತಹ ಸರ್ವಾಧಿಕಾರತ್ವವನ್ನು ನಿಗ್ರಹಿಸಲು ಮತ್ತು ಸಾಂಸ್ಥಿಕ ಸಮಗ್ರತೆಯನ್ನು ಪುನಃಸ್ಥಾಪಿಸಲು ಕ್ರಮ ಕೈಗೊಳ್ಳಬೇಕಿದೆ. ಪರಿಷತ್ತಿನ ಎಲ್ಲ ಪ್ರಮುಖ ಆಡಳಿತಾತ್ಮಕ ಮತ್ತು ಆರ್ಥಿಕ ನಿರ್ಧಾರಗಳನ್ನು ಪರಿಶೀಲಿಸಲು, ಸ್ವತಂತ್ರ ಮೇಲ್ವಿಚಾರಣಾ ಸಮಿತಿಯನ್ನು ತಕ್ಷಣ ರಚಿಸುವಂತೆ ಸಮಿತಿಯು ಪರಿಹಾರೋಪಾಯ ಸೂಚಿಸಿದೆ’ ಎಂದು ತಿಳಿಸಿದ್ದಾರೆ.
‘ವಿಚಾರಣೆ ಪೂರ್ಣಗೊಳ್ಳುವವರೆಗೆ ಅಧ್ಯಕ್ಷರು ಹೊಂದಿರುವ ವಿವೇಚನಾ ಅಧಿಕಾರಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿ, ಆಡಳಿತಾಧಿಕಾರಿ ಅಥವಾ ಸಮಿತಿಯನ್ನು ನೇಮಕ ಮಾಡಲು ಸಲಹೆ ನೀಡಿದೆ. ಈ ಬಗ್ಗೆ ಪರಿಶೀಲಿಸಬೇಕು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.