ADVERTISEMENT

ರೈತರು, ಜೆಡಿಎಸ್‌ನಿಂದ ಪ್ರತಿಭಟನಾ ರ‍್ಯಾಲಿ: ಇಂದು ಸಂಚಾರ ದಟ್ಟಣೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 19:55 IST
Last Updated 9 ಅಕ್ಟೋಬರ್ 2019, 19:55 IST
   

ಬೆಂಗಳೂರು: ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ರೈತಸಂಘದ ಸದಸ್ಯರು ಮತ್ತು ಜೆಡಿಎಸ್‌ ಕಾರ್ಯಕರ್ತರು ಗುರುವಾರ ಪ್ರತಿಭಟನೆ ಹಮ್ಮಿಕೊಂಡಿರುವುದರಿಂದ ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.

ರೈತ ಸಂಘ ಮತ್ತು ಹಸಿರುಸೇನೆ ವತಿ ಯಿಂದ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ರ‍್ಯಾಲಿ ಮೂಲಕ ತೆರಳಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ಉತ್ತರ ಕರ್ನಾಟಕದ 5 ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸುವ ನಿರೀಕ್ಷೆ ಯಿದೆ. ಬೃಹತ್ ಮೆರವಣಿಗೆ ನಡೆಯಲಿರುವುದರಿಂದ ಕಾರ್ಪೋರೇಷನ್, ಮೆಜೆಸ್ಟಿಕ್, ವಿಧಾನಸೌಧ ಸುತ್ತಮುತ್ತ ಹಾಗೂ ಶೇಷಾದ್ರಿಪುರಂ ಬಳಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.

ಜೆಡಿಎಸ್ ಪ್ರತಿಭಟನಾ ರ‍್ಯಾಲಿ: ಜೆಡಿಎಸ್ ವರಿಷ್ಠ ದೇವೇಗೌಡರ ನೇತೃತ್ವದಲ್ಲಿ ಬೆಳಿಗ್ಗೆ 10 ಗಂಟೆಗೆ ಪಕ್ಷದ ಕಚೇರಿ ಇರುವ ಆನಂದ ರಾವ್‌ ವೃತ್ತದ ಗಾಂಧಿ ಪ್ರತಿಮೆ ಬಳಿಯಿಂದ ಪ್ರತಿಭಟನಾ ರ‍್ಯಾಲಿ ಆರಂಭವಾಗಲಿದ್ದು, ಸ್ವಾತಂತ್ರ್ಯ ಉದ್ಯಾನದವರೆಗೂ ಪಾದಯಾತ್ರೆ ನಡೆಯಲಿದೆ. ಪ್ರವಾಹ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಮತ್ತು ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಸರ್ಕಾರ ಅನುದಾನ ಕಡಿತ ಮಾಡಿ ತಾರತಮ್ಯ ಎಸಗಿದೆ ಎಂದು ಆರೋಪಿಸಿರುವ ಜೆಡಿಎಸ್‌ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಈ ಪ್ರತಿಭಟನೆ ಹಮ್ಮಿಕೊಂಡಿದೆ.

ADVERTISEMENT

ರೈತರ ಬೇಡಿಕೆಗಳೇನು?

* ಉತ್ತರ ಕರ್ನಾಟಕದ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ₹ 10 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಬೇಕು.

* ಪ್ರತಿ ಎಕರೆಗೆ ₹ 25 ಸಾವಿರದಂತೆ ಬೆಳೆ ಹಾನಿ ಪರಿಹಾರ ಕೊಡಬೇಕು.

* ವಾಹದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ನೀಡಬೇಕು.

* ನಷ್ಟವಾದ ಕೃಷಿ ಭೂಮಿಗೆ ಪರಿಹಾರ ಹಾಗೂ ಪರ್ಯಾಯ ಭೂಮಿ ನೀಡಬೇಕು.

* ಪದೇಪದೇ ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳನ್ನು ಸ್ಥಳಾಂತರಿಸಬೇಕು.

* ಪ್ರವಾಹದಿಂದ ತೊಂದರೆಗೆ ಒಳಗಾದ ರೈತರಿಗೆ ಬ್ಯಾಂಕುಗಳು ಸಾಲದ ನೋಟಿಸ್ ನೀಡುವುದನ್ನು ನಿಲ್ಲಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.