ADVERTISEMENT

ಬೆಂಗಳೂರು: ಹಿಂದಿ ಭಾಷೆ ಹೇರಿಕೆ ಹುನ್ನಾರ ಖಂಡಿಸಿ ಪ್ರತಿಭಟನೆ

ಕೇಂದ್ರ ಸರ್ಕಾರದ ವಿರುದ್ಧ ಕರವೇ ಕಾರ್ಯಕರ್ತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 15:17 IST
Last Updated 14 ಸೆಪ್ಟೆಂಬರ್ 2024, 15:17 IST
ಹಿಂದಿ ಭಾಷೆ ಹೇರಿಕೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಪ್ರಜಾವಾಣಿ ಚಿತ್ರ
ಹಿಂದಿ ಭಾಷೆ ಹೇರಿಕೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು. ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಹಿಂದಿ ದಿವಸ ಆಚರಣೆ ಹೆಸರಿನಲ್ಲಿ ಅನ್ಯಭಾಷಿಕರ ಮೇಲೆ ಹಿಂದಿ ಭಾಷೆ ಹೇರಿಕೆ ಹುನ್ನಾರ ನಡೆಸಲಾಗುತ್ತಿದೆ’ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯ(ಟಿ.ಎ.ನಾರಾಯಣಗೌಡ ಬಣ) ಕಾರ್ಯಕರ್ತರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.‌

ನಾರಾಯಣಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.‌

‘ವಿವಿಧತೆ ಇರುವ ನೆಲದಲ್ಲಿ ಒಂದು ಧರ್ಮ, ಭಾಷೆ, ಸಂಸ್ಕೃತಿಯನ್ನು ಬಲವಂತವಾಗಿ ಎಲ್ಲರ ಮೇಲೂ ಹೇರುವುದು ಕ್ರೌರ್ಯ ಮತ್ತು ರಾಜಕೀಯ ಗೂಂಡಾಗಿರಿ. ಅಲ್ಲದೇ ಸಾಂಸ್ಕೃತಿಕ ಭಯೋತ್ಪಾದನೆಯ ಲಕ್ಷಣ’ ಎಂದು ಕರವೇ ಕಾರ್ಯಕರ್ತರು ಕಿಡಿಕಾರಿದರು.

ADVERTISEMENT

‘ಕೇಂದ್ರ ಸರ್ಕಾರದ ವ್ಯಾಪ್ತಿಯ ಉದ್ಯಮಗಳು, ರೈಲ್ವೆ ಇಲಾಖೆ, ಬ್ಯಾಂಕಿಂಗ್ ವಲಯ ಹಾಗೂ ಸೇನಾ ನೇಮಕಾತಿಗಳ ಸಂದರ್ಭದಲ್ಲಿ ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಗಳಲ್ಲಿ ಮಾತ್ರ ಪರೀಕ್ಷೆಗಳನ್ನು ನಡೆಸುವ ಮೂಲಕ ಪ್ರಾದೇಶಿಕ ಭಾಷೆಗಳನ್ನು ಆಡುವ ಜನರ ಉದ್ಯೋಗದ ಹಕ್ಕು ಕಿತ್ತುಕೊಳ್ಳಲಾಗಿದೆ’ ಎಂದು ದೂರಿದರು.

‘ಕೇಂದ್ರ ಸರ್ಕಾರವು ಈ ಕೂಡಲೇ ಸಂವಿಧಾನಕ್ಕೆ ತಿದ್ದುಪಡಿ ತಂದು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಉಲ್ಲೇಖಿಸಿರುವ ಎಲ್ಲ 22 ಭಾಷೆಗಳನ್ನೂ ಅಧಿಕೃತ  ಆಡಳಿತ ಭಾಷೆಯಾಗಿ ಮಾಡಿ ಈ ದೇಶದ ಬಹುತ್ವ ಕಾಪಾಡಬೇಕು. ಹಿಂದಿ ಭಾಷೆಗೆ ವಿಶೇಷ ಮನ್ನಣೆ ನೀಡುವ ಸಂವಿಧಾನದ 343ರಿಂದ 351ನೇ ವಿಧಿಗಳನ್ನು ರದ್ದುಪಡಿಸಿ ಎಲ್ಲ ಭಾಷೆಗಳೂ ಒಕ್ಕೂಟದ ದೃಷ್ಟಿಯಲ್ಲಿ ಸಮಾನ ಎಂದು ಸಾರಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

‘ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಕೇಂದ್ರ ಸರ್ಕಾರದ ಇಲಾಖೆಗಳು, ಉದ್ಯಮಗಳಲ್ಲಿ ಕನ್ನಡವೇ ಆಡಳಿತ ಭಾಷೆ ಆಗಬೇಕು.‌ ಎಲ್ಲ ಬಗೆಯ ಪತ್ರ ವ್ಯವಹಾರಗಳೂ ಕನ್ನಡದಲ್ಲೇ ನಡೆಯಬೇಕು. ಕರ್ನಾಟಕದಲ್ಲಿ ತ್ರಿಭಾಷಾ ಸೂತ್ರದ ಬದಲು ದ್ವಿಭಾಷಾ ಸೂತ್ರ ಜಾರಿಗೆ ಬರಬೇಕು. ಅಲ್ಲದೇ ಶಾಲಾ ಪಠ್ಯಕ್ರಮಗಳಿಂದ ಹಿಂದಿ ಕಡ್ಡಾಯ ಕಲಿಕೆ ಕೊನೆಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.