ADVERTISEMENT

‘ಅಂಬೇಡ್ಕರ್ ನಿಗಮದಿಂದ ಅಲೆಮಾರಿ ವಿರೋಧಿ ಧೋರಣೆ’

ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 20:58 IST
Last Updated 17 ಜುಲೈ 2021, 20:58 IST
ಅಲೆಮಾರಿ ಬುಡಕಟ್ಟು ಮಹಾಸಭಾದ ಪದಾಧಿಕಾರಿಗಳು ರಾಜಾಜಿನಗರದಲ್ಲಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು -ಪ್ರಜಾವಾಣಿ ಚಿತ್ರ
ಅಲೆಮಾರಿ ಬುಡಕಟ್ಟು ಮಹಾಸಭಾದ ಪದಾಧಿಕಾರಿಗಳು ರಾಜಾಜಿನಗರದಲ್ಲಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳಿಗೆಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಬಿಡುಗಡೆಯಾಗಿರುವ ಅನುದಾನ ಫಲಾನುಭವಿಗಳ ಕೈಸೇರುತ್ತಿಲ್ಲ’ ಎಂದು ಆರೋಪಿಸಿ ಅಲೆಮಾರಿ ಬುಡಕಟ್ಟು ಮಹಾಸಭಾದ ಪದಾಧಿಕಾರಿಗಳು ರಾಜಾಜಿನಗರದಲ್ಲಿರುವ ನಿಗಮದ ಕಚೇರಿಗೆ ಶನಿವಾರ ಮುತ್ತಿಗೆ ಹಾಕಿದರು.

‘2019ರಿಂದ 2021ನೇ ಸಾಲಿನ ಅನುದಾನದಲ್ಲಿ ಫಲಾನುಭವಿಗಳಿಗೆ ಯಾವುದೇ ಸೌಲಭ್ಯ ನೀಡದೇ,ಅಂಬೇಡ್ಕರ್ ಅಭಿವೃದ್ಧಿ ನಿಗಮದ ಬೆಂಗಳೂರು ನಗರ ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕರು ಮೀನಮೇಷ ಎಣಿಸುತ್ತಿದ್ದಾರೆ’ ಎಂದುಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ ದೂರಿದರು.

‘ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಸಮುದಾಯದ 1 ಲಕ್ಷ ಮಂದಿ ಪಾದಚಾರಿ ಮಾರ್ಗಗಳಲ್ಲಿ, ರಸ್ತೆ ಬದಿಯಲ್ಲಿ ಡೇರೆ ನಿರ್ಮಿಸಿಕೊಂಡು, ಹೀನಾಯವಾಗಿ ಬದುಕುತ್ತಿದ್ದಾರೆ. ಇವರಿಗೆ ತುರ್ತಾಗಿ ಸಾಲ ಸೌಲಭ್ಯಗಳನ್ನು ಹಂಚಿಕೆ ಮಾಡುವಂತೆ ಜಿಲ್ಲಾಧಿಕಾರಿಗಳು ನಿಗಮಕ್ಕೆ ನಿರ್ದೇಶನ ನೀಡಿದ್ದಾರೆ. ಆದರೂ, ಅದರ ಅನುಷ್ಠಾನ ಮಾಡುವಲ್ಲಿ ನಿಗಮದ ಅಧಿಕಾರಿಗಳು ಉತ್ಸಾಹ ತೋರಿಸದೇ ಅಲೆಮಾರಿ ವಿರೋಧಿ ಧೋರಣೆ ತೋರಿದ್ದಾರೆ’ ಎಂದು ಖಂಡಿಸಿದರು.

ADVERTISEMENT

‘ಈ ಬಗ್ಗೆ ಅನುಷ್ಠಾನ ಸಮಿತಿ ಸದಸ್ಯರು ಹಾಗೂ ಸಾರ್ವಜನಿಕರು ಹಲವು ಬಾರಿ ಮನವಿ ಸಲ್ಲಿಸಿದರೂ, ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದರು. ಕಚೇರಿಯಲ್ಲೂ ಲಭ್ಯವಾಗುತ್ತಿರಲಿಲ್ಲ. ಇದನ್ನು ಖಂಡಿಸಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿದ್ದೇವೆ’ ಎಂದರು.

‘ನಗರದಲ್ಲಿರುವ ಎಲ್ಲ ಅಲೆಮಾರಿಗಳಿಗೆ ಕೋವಿಡ್‌ ಲಸಿಕೆಯ ವ್ಯವಸ್ಥೆ ಮಾಡಬೇಕು. ಅವರಿಗೆ ದಿನಸಿ ಕಿಟ್ ವಿತರಿಸಬೇಕು. ಡೇರೆಗಳಲ್ಲಿ ವಾಸಿಸುತ್ತಿರುವ ಅಲೆಮಾರಿಗಳಿಗೆ ಮಳೆಗಾಲದಲ್ಲಿ ಸಮಸ್ಯೆಯಾಗುತ್ತಿದ್ದು, ಅವರ ರಕ್ಷಣೆಗೆ ಟಾರ್ಪಲ್ ವಿತರಿಸಬೇಕು ಹಾಗೂ ಎಲ್ಲ ಅಲೆಮಾರಿ ಜನರಿಗೆ ಶಾಶ್ವತ ಸೂರು ಕಲ್ಪಿಸಬೇಕು’ ಎಂದೂ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.