ಬೆಂಗಳೂರು: ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ಯೋಜನೆಯ ಸಿಬ್ಬಂದಿಗೆ ಸರ್ಕಾರ ಕನಿಷ್ಠ ವೇತನ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸ್ಕೀಮ್ ವರ್ಕರ್ಸ್ ಫೆಡರೇಷನ್ ಆಫ್ ಇಂಡಿಯಾ ನೇತೃತ್ವದಲ್ಲಿ ರಾಜ್ಯದಾದ್ಯಂತ ಶನಿವಾರ ಪ್ರತಿಭಟನೆ ನಡೆಯಿತು.
ಅಖಿಲ ಭಾರತ ಪ್ರತಿಭಟನಾ ಸಪ್ತಾಹದ ಭಾಗವಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅಂಗನವಾಡಿಗಳ ಹಾಗೂಆಶಾ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ಯೋಜನೆಯ ಸಿಬ್ಬಂದಿ ಭಾಗವಹಿಸಿದ್ದರು. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ‘ಹಲವು ವರ್ಷಗಳಿಂದ ಸೇವೆಯಲ್ಲಿ ತೊಡಗಿರುವ ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ₹21 ಸಾವಿರ ಮಾಸಿಕ ವೇತನ ನೀಡಬೇಕು. ಕೊರೊನಾ ಯೋಧರಿಗೆ ಕೇಂದ್ರ ಸರ್ಕಾರ ನೀಡುವ ₹50 ಲಕ್ಷ ಆರೋಗ್ಯ ವಿಮೆಯನ್ನು ಖಾತ್ರಿಪಡಿಸಬೇಕು. ಎಲ್ಲರಿಗೂ ನಿವೃತ್ತಿ ವೇತನ ನೀಡಬೇಕು. ಬಿಸಿಯೂಟ ಸಿಬ್ಬಂದಿಗೆ 12 ತಿಂಗಳೂ ಪೂರ್ಣ ವೇತನ ನೀಡಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.