ADVERTISEMENT

ಆರ್‌ಆರ್‌ ನಗರ: ಆಟದ ಮೈದಾನ ಉಳಿವಿಗೆ ಹೋರಾಟ

ಕೆಂಪೇಗೌಡ ಆಟದ ಮೈದಾನದಲ್ಲಿ ಶಾಲೆ ನಿರ್ಮಾಣಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2022, 20:45 IST
Last Updated 13 ನವೆಂಬರ್ 2022, 20:45 IST
ಕೆಂಪೇಗೌಡರ ಆಟದ ಮೈದಾನದಲ್ಲಿ ಸರ್ಕಾರಿ ಶಾಲಾ ಕಟ್ಟಡ ನಿರ್ಮಿಸಲು ಮುಂದಾಗಿರುವ ಬಿಬಿಎಂಪಿ ವಿರುದ್ಧ ಸ್ಥಳೀಯ ನಿವಾಸಿಗಳು ಹಾಗೂ ಮಕ್ಕಳು ಪ್ರತಿಭಟನೆ ನಡೆಸಿದರು
ಕೆಂಪೇಗೌಡರ ಆಟದ ಮೈದಾನದಲ್ಲಿ ಸರ್ಕಾರಿ ಶಾಲಾ ಕಟ್ಟಡ ನಿರ್ಮಿಸಲು ಮುಂದಾಗಿರುವ ಬಿಬಿಎಂಪಿ ವಿರುದ್ಧ ಸ್ಥಳೀಯ ನಿವಾಸಿಗಳು ಹಾಗೂ ಮಕ್ಕಳು ಪ್ರತಿಭಟನೆ ನಡೆಸಿದರು   

ರಾಜರಾಜೇಶ್ವರಿನಗರ: ಇಲ್ಲಿನ ಬಿಇಎಂಎಲ್ ಐದನೇ ಹಂತದಲ್ಲಿ 1.6 ಎಕರೆ ವಿಸ್ತೀರ್ಣದಲ್ಲಿರುವ ಕೆಂಪೇಗೌಡ ಆಟದ ಮೈದಾನ ಉಳಿವಿಗಾಗಿ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದೆ.

ಈ ಜಾಗದಲ್ಲಿ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದು, ಅದನ್ನು ಕೈಬಿಡಬೇಕೆಂದು ಒತ್ತಾಯಿಸಿ, ಸ್ಥಳೀಯ ನೂರಾರು ನಿವಾಸಿಗಳು, ಮಕ್ಕಳು, ಮಹಿಳೆಯರು ಭಾನುವಾರ ಪ್ರತಿಭಟನೆ ನಡೆಸಿದರು.

ಬಿಇಎಂಎಲ್ ಬಡಾವಣೆ 155 ಎಕರೆ ಪ್ರದೇಶದಲ್ಲಿ ವಸತಿ ಪ್ರದೇಶವಿದ್ದು, ಈ ಭಾಗದಲ್ಲಿ ಆಟದ ಮೈದಾನ ಇಲ್ಲ. ಕೇವಲ 1.6 ಎಕರೆ ಪ್ರದೇಶದಲ್ಲಿ ಆಟದ ಮೈದಾನ ಇದೆ. ಈ ಪ್ರದೇಶದ ವ್ಯಾಪ್ತಿಯಲ್ಲಿ ಎಲ್ಲೂ ಸರ್ಕಾರಿ ಆಟದ ಮೈದಾನ ಇಲ್ಲ. ಮಕ್ಕಳ ಬೌದ್ಧಿಕ ಬೆಳವಣಿಗೆ ದೃಷ್ಟಿಯಿಂದ ಮೈದಾನದಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಮುಂದಾಗಬಾರದು. ಮಕ್ಕಳ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗೆ ಈ ಜಾಗವನ್ನು ಆಟದ ಮೈದಾನಕ್ಕಾಗಿಯೇ ಮೀಸಲಿಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ADVERTISEMENT

21ರ ಡಿಸೆಂಬರ್ 2006ರಲ್ಲಿ ಉಪ ಮುಖ್ಯಮಂತ್ರಿ ಆಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಕೆಂಪೇಗೌಡ ಆಟದ ಮೈದಾನ ಉದ್ಘಾಟಿಸಿದ್ದರು. ಅಂದಿನ ಶಾಸಕ ಎಂ.ಶ್ರೀನಿವಾಸ್ ಅವರು ಆಟದ ಮೈದಾನ ಅಭಿವೃದ್ದಿಗಾಗಿ ಶ್ರಮಿಸಿದ್ದರು. ಈ ಜಾಗದಲ್ಲಿ ಸರ್ಕಾರಿ ಶಾಲೆ ನಿರ್ಮಿಸಲು ಸಚಿವ ಮುನಿರತ್ನ ಮುಂದಾಗಿದ್ದು, ಮಕ್ಕಳ ಆರೋಗ್ಯ, ಕ್ರೀಡೆಗಳ ಉಳುವಿಗಾಗಿ ಈ ಕೂಡಲೇ ಕೈಬಿಟ್ಟು, ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಆಟದ ಮೈದಾನ ಉಳಿಸಬೇಕು ಎಂದು ಒತ್ತಾಯಿಸಿದರು.

ಈ ಮೈದಾನದಿಂದ 500 ಮೀಟರ್‌ ದೂರದಲ್ಲಿ ಹಲಗೇವಡೇರಹಳ್ಳಿ ಸರ್ಕಾರಿ ಶಾಲೆಯಿದೆ. ಅಲ್ಲಿ ಸಾಕಷ್ಟು ಸ್ಥಳವಿದೆ. ಅಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಬಹುದು. 1 ಕಿ.ಮೀ ವ್ಯಾಪ್ತಿಯಲ್ಲಿ ಬಂಗಾರಪ್ಪನಗರ, 1.5 ಕಿ.ಮೀ ವ್ಯಾಪ್ತಿಯಲ್ಲಿ ಚನ್ನಸಂದ್ರದಲ್ಲಿ ಸರ್ಕಾರಿ ಶಾಲೆ, 1.5 ಕಿ.ಮೀ ವ್ಯಾಪ್ತಿಯಲ್ಲಿ ರಾಜರಾಜೇಶ್ವರಿ ಅನುದಾನಿತ ಶಾಲೆಯಿದೆ. ಅಲ್ಲಿರುವ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗದೇ ಈ ಜಾಗದ ಮೇಲೆಯೇ ಏಕೆ ಕಣ್ಣು ಎಂದು ಆಕ್ರೋಶ ವ್ಯಕ್ತಪಡಿಸಿದ ನಾಗರಿಕರು, ‘ಶಾಂತಿಯುತ ಹೋರಾಟಕ್ಕೆ ಸರ್ಕಾರ ಬೆಂಬಲಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ’ ಎಂದು ಎಚ್ಚರಿಸಿದರು.

ಜೋಸೆಫ್‌ ಮಾತನಾಡಿ, ರಾಜರಾಜೇಶ್ವರಿನಗರ ವ್ಯಾಪ್ತಿಯಲ್ಲಿ ಸಾಕಷ್ಟು ನಾಗರಿಕ ಸೌಲಭ್ಯಗಳ(ಸಿ.ಎ) ಜಾಗಗಳಿವೆ. ಸರ್ಕಾರಿ ಜಮೀನಿನಲ್ಲಿ, ಆ ಜಾಗದಲ್ಲಿ ಶಾಲಾ ಕಟ್ಟಡ ನಿರ್ಮಾಣ ಮಾಡಲಿ. ಈ ಆಟದ ಮೈದಾನ ಉಳಿಯಲಿ. ಇಲ್ಲದಿದ್ದರೆ ರಾಜರಾಜೇಶ್ವರಿನಗರ ಪ್ರಜ್ಞಾವಂತ ನಾಗರಿಕರು ಆಟದ ಮೈದಾನದ ಉಳಿವಿಗಾಗಿ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು. ರವಿ, ವೇಯಪ್ಪನ್, ಸವಿತಾ, ಮಾಲಿನಿ ಇದ್ದರು.

ರಾಜರಾಜೇಶ್ವರಿನಗರ ವಲಯ ಮುಖ್ಯ ಎಂಜಿನಿಯರ್ ವಿಜಯಕುಮಾರ್, ಉಪ ಆಯುಕ್ತ ಮಲ್ಲಿಕಾರ್ಜುನ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.

15ರಂದು ವಲಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಈ ಸಮಸ್ಯೆ ಬಗೆ ಹರಿಸುವ ಬಗ್ಗೆ ಆಶ್ವಾಸನೆ ನೀಡಿದ್ದರು.

ಗುತ್ತಿಗೆದಾರರಿಗೆ ಅನುಕೂಲ ಮಾಡುವ ಹುನ್ನಾರ
‘1992ರಲ್ಲಿ ಬಿಡಿಎ ಆಟದ ಮೈದಾನಕ್ಕೆ ಅನುಮೋದನೆ ನೀಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಮೈದಾನವನ್ನು ಅಭಿ ವೃದ್ಧಿಪಡಿಸಲಾಗಿದೆ. ಆರ್‌ಟಿಐ ಅಡಿಯಲ್ಲಿ ನೀಡಿದ ಮಾಹಿತಿ ಪ್ರಕಾರ 1 ಕಿ.ಮೀ ವ್ಯಾಪ್ತಿಯಲ್ಲಿ ಒಂದು ಸರ್ಕಾರಿ ಶಾಲೆಯಿದ್ದರೆ, ಆ ಶಾಲೆ ಅಭಿವೃದ್ದಿಪಡಿಸಬೇಕು ಹೊರತು ಬೇರೆ ಯಾವುದೇ ಸರ್ಕಾರಿ ಶಾಲೆಗಳನ್ನು ಪ್ರಾರಂಭಿಸಬಾರದು. ಅದನ್ನು ಕೈಬಿಟ್ಟು ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ಈ ಜಾಗದಲ್ಲಿ ಶಾಲಾ ಕಟ್ಟಡ ನಿರ್ಮಿಸಲು ಮುಂದಾಗಿರುವುದು ಎಷ್ಟು ಸರಿ’ ಎಂದು ಸ್ಥಳೀಯ ನಿವಾಸಿ ವಿಶಾಲ ಸುರೇಶ್ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.