ADVERTISEMENT

ಆಹಾರ ಧಾನ್ಯ ಸಾಗಣೆ ಬಿಲ್‌ ಪಾವತಿಸದಿದ್ದರೆ ಜುಲೈ 1ರಿಂದ ಸರ್ಕಾರದ ವಿರುದ್ಧ ಧರಣಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 16:14 IST
Last Updated 18 ಜೂನ್ 2025, 16:14 IST
   

ಬೆಂಗಳೂರು: ಅನ್ನಭಾಗ್ಯ ಹಾಗೂ ಎನ್‌ಎಫ್‌ಎಸ್‌ಎ ಯೋಜನೆಗಳ ಬಾಕಿಯಿರುವ ಆಹಾರ ಧಾನ್ಯ ಸಾಗಣೆ ವೆಚ್ಚದ ಬಿಲ್ ಕೂಡಲೇ ಪಾವತಿಸಬೇಕು. ಇಲ್ಲದೇ ಇದ್ದರೆ ಜುಲೈ 1ರಿಂದ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಪಡಿತರ ಆಹಾರ ಧಾನ್ಯಗಳ ಸಗಟು ಹಾಗೂ ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರರ ಸಂಘ ಎಚ್ಚರಿಸಿದೆ.

ಫೆಬ್ರುವರಿಯಿಂದ ಜೂನ್‌ ವರೆಗೆ ‘ಅನ್ನಭಾಗ್ಯ ಯೋಜನೆ’ ಹಾಗೂ ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಎನ್‌ಎಫ್‌ಎಸ್‌ಎ ಯೋಜನೆಯಡಿಯಲ್ಲಿ ಆಹಾರ ಧಾನ್ಯ ಸಾಗಣೆಗೆ ಮಾಡಿರುವ ವೆಚ್ಚ ಪಾವತಿಯಾಗಿಲ್ಲ ಎಂದು ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾಗಾಣಿಕೆ ಟೆಂಡರ್‌ಗಳಲ್ಲಿ ಭಾಗವಹಿಸುವಾಗ ನೀಡಿದ್ದ ಇಎಂಡಿ ಮೊತ್ತವನ್ನು ಬ್ಯಾಂಕ್ ಗ್ಯಾರಂಟಿ ನೀಡಿದ ನಂತರವೂ ಗುತ್ತಿಗೆದಾರರಿಗೆ ಮರುಪಾವತಿ ಮಾಡಿಲ್ಲ. ಆಯ್ಕೆಯಾಗದ  ಬಿಡ್‌ದಾರರಿಗೂ ಇಎಂಡಿ ಹಣ ಹಿಂತಿರುಗಿಸಿಲ್ಲ ಎಂದು ಆರೋಪಿಸಿದರು. 

ADVERTISEMENT

2025ರ ಜುಲೈ ತಿಂಗಳ ಆಹಾರ ಧಾನ್ಯ ಹಂಚಿಕೆಯ ಆದೇಶವು ಬರುವ ಹಂತದಲ್ಲಿದೆ. ಹಸ್ತಾಂತರ ಮತ್ತು ಸಾಗಣೆ ಕಾರ್ಯನಿರ್ವಹಿಸಲು ಹಣಕಾಸಿನ ಮುಗ್ಗಟ್ಟು ಉಂಟಾಗಲಿದೆ. ಬಾಕಿ ಹಣ ಪಾವತಿಸದೇ ಇದ್ದರೆ ಜುಲೈಯಿಂದ ಆಹಾರ ಧಾನ್ಯ ಸಾಗಾಟ ನಿಲ್ಲಿಸುವುದು ಅನಿವಾರ್ಯವಾಗಲಿದೆ ಎಂದು  ತಿಳಿಸಿದರು.

ರಾಜ್ಯ ಕೆಎಫ್‌ಸಿಎಸ್‌ಸಿ ಗೋದಾಮು ಹಾಗೂ ಅನ್ನಭಾಗ್ಯ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರಿಗೆ ನೀಡಬೇಕಿರುವ ಇಎಸ್‌ಐ, ಇಪಿಎಫ್, ಗ್ರಾಚ್ಯುಟಿಯಲ್ಲಿ ಗೊಂದಲ ಉಂಟಾಗಿದೆ. ಈ ಬಗ್ಗೆ ಲೋಡಿಂಗ್ ಅನ್ ಲೋಡಿಂಗ್ ಲೇಬರ್ಸ್ ಯೂನಿಯನ್ ಅಧ್ಯಕ್ಷರೊಂದಿಗೆ ಆಹಾರ ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಇಲಾಖೆ ಸಭೆ ನಡೆಸಿ ಸಮಸ್ಯೆ ಪರಿಹರಿಸಬೇಕು ಎಂದು ಲೋಡಿಂಗ್ ಅನ್ ಲೋಡಿಂಗ್ ಲೇಬರ್ಸ್ ಯೂನಿಯನ್ ಅಧ್ಯಕ್ಷರನ್ನು ಸಂಘದ ಕೆ. ಪಂಪಾವತಿ ಪಾಟೀಲ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.