ADVERTISEMENT

ಕಸ ವಿರೋಧ ಧರಣಿಗೆ ಎಚ್‌ಡಿಕೆ ಬೆಂಬಲ

ಆಡಳಿತ ವೈಫಲ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 6:07 IST
Last Updated 3 ಡಿಸೆಂಬರ್ 2021, 6:07 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಗರೇನಹಳ್ಳಿ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದ ವಿರುದ್ಧ ಧರಣಿ ನಡೆಸುತ್ತಿರುವವರನ್ನು ಗುರುವಾರ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತುಕತೆ ನಡೆಸಿ ಬೆಂಬಲ ಸೂಚಿಸಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಗರೇನಹಳ್ಳಿ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದ ವಿರುದ್ಧ ಧರಣಿ ನಡೆಸುತ್ತಿರುವವರನ್ನು ಗುರುವಾರ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತುಕತೆ ನಡೆಸಿ ಬೆಂಬಲ ಸೂಚಿಸಿದರು   

ದೊಡ್ಡಬಳ್ಳಾಪುರ: ಕಸ ನಿರ್ವಹಣೆಗೆ ಹಲವು ರೀತಿ ವೈಜ್ಞಾನಿಕ ವಿಧಾನ ಇದ್ದರೂ ಕೂಡ ಯಾವುದನ್ನು ಪಾಲಿಸಲಾಗುತ್ತಿಲ್ಲ. ಬೆಂಗಳೂರು ಕಸದಿಂದ ಗ್ರಾಮೀಣ ಭಾಗದ ಜನರು ಕಲುಷಿತ ನೀರು ಕುಡಿಯುವ ಸ್ಥಿತಿಗೆ ಬಂದಿದ್ದಾರೆ. ಇದಕ್ಕೆ ಆಡಳಿತ ವೈಫಲ್ಯ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ದೂರಿದ್ದಾರೆ.

ಅವರು ತಾಲ್ಲೂಕಿನ ಚಿಗೇರನಹಳ್ಳಿಯಲ್ಲಿನ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ‌ಗುರುವಾರ ಭೇಟಿ, ಧರಣಿಗೆ ಬೆಂಬಲ ಸೂಚಿಸಿದರು.

ಬಿಬಿಎಂಪಿ ಹಣ ಲೂಟಿ ಮಾಡಲು ಕಸ ನಿರ್ವಹಣೆ ಬಳಸಿಕೊಂಡಿದೆಯೇ ವಿನಹ ಸೂಕ್ತ ನಿರ್ವಹಣೆ ಮಾಡುವ ಕಡೆಗೆ ಗಮನವನ್ನೇ ನೀಡಿಲ್ಲ. ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದಿಂದ ಹೊರ ಬಂದಿರುವ ಕಲುಷಿತ ನೀರು ಕೊರಟಗೆರೆ ಮಾವತ್ತೂರು ಕೆರೆವರೆಗೂ ಹರಿದು ಹೋಗಿದೆ. ಈ ಬಗ್ಗೆ ಅಲ್ಲಿನ ರೈತರು ಸಹ ಮಾಹಿತಿ ನೀಡಿದ್ದಾರೆ. ವಿಧಾನ ಪರಿಷತ್‌ ಚುನಾವಣೆ ಮುಕ್ತಾಯವಾದ ನಂತರ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದ ಸುತ್ತಲಿನ ಗ್ರಾಮಗಳಿಗೆ ಬಿಬಿಎಂಪಿ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದರು.

ADVERTISEMENT

ಸ್ಥಳ ಪರಿಶೀಲನೆ ನಂತರ ಮುಖ್ಯಮಂತ್ರಿಯೊಂದಿಗೂ ಚರ್ಚಿಸಲಾಗುವುದು. ಕಸದಿಂದ ಉಂಟಾಗಿರುವ ಸಮಸ್ಯೆ ಬಗೆಹರಿಸಲು ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಈ ಭಾಗದ ರೈತರೊಂದಿಗೂ ಚರ್ಚಿಸಲಾಗುವುದು ಎಂದರು.

ಧರಣಿಯ ನೇತೃತ್ವ ವಹಿಸಿರುವ ನವ ಬೆಂಗಳೂರು ಹೋರಾಟ ಸಮಿತಿ ಗೌರವ ಅಧ್ಯಕ್ಷ ಕೆ.ವಿ.ಸತ್ಯಪ್ರಕಾಶ್‌ ಮಾತನಾಡಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಎಂಎಸ್‌ಜಿಪಿ ಘಟಕ ಬಂದ್‌ ಮಾಡಲು ಒಂದು ವರ್ಷದ ಕಾಲವಧಿ ಕೇಳಿದ್ದರು. ಆದರೆ, ಇದುವರೆಗೂ ನಿಲ್ಲಿಸಿಲ್ಲ. ತ್ಯಾಜ್ಯ ವಿಲೇವಾರಿಯಿಂದ ತೊಂದರೆಗೆ ಒಳಗಾಗಿರುವ ಗ್ರಾಮಗಳ ಅಭಿವೃದ್ಧಿಗೆ ₹53ಕೋಟಿ ನೀಡಲಾಗಿತ್ತು. ಆದರೆ, ಅನುದಾನ ಬಳಕೆಯಾಗುವಲ್ಲಿ ಅಕ್ರಮ ನಡೆದಿವೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ, ವಿಧಾನ ಪರಿಷತ್‌ ಜೆಡಿಎಸ್‌ ಅಭ್ಯರ್ಥಿ ರಮೇಶ್‌ಗೌಡ, ಮುಖಂಡರಾದ ಎಚ್‌.ಅಪ್ಪಯ್ಯ, ಹರೀಶ್‌ಗೌಡ, ಬೈರೇಗೌಡ, ಆರ್‌.ಕೆಂಪರಾಜ್‌, ದೇವರಾಜಮ್ಮ, ಕೆಸ್ತೂರು ರಮೇಶ್‌, ಕುಂಟನಹಳ್ಳಿ ಮಂಜುನಾಥ್‌, ಧರ್ಮೇಂದ್ರ, ಸಿ.ಎಚ್‌.ರಾಮಕೃಷ್ಣ, ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ವಡ್ಡರಹಳ್ಳಿರವಿ, ಟಿಎಪಿಎಂಸಿಎಸ್‌ ನಿರ್ದೇಶಕ ಅಂಜನಗೌಡ, ಬಿಜೆಪಿ ಮುಖಂಡ ಅಶ್ವತ್ಥನಾರಾಯಣಸ್ವಾಮಿ, ಧರಣಿಯ ಮುಖಂಡತ್ವ ವಹಿಸಿರುವ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಲಿಂಗಯ್ಯ, ಸದಸ್ಯ ಕೃಷ್ಣಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.