ADVERTISEMENT

‘6ನೇ ಗ್ಯಾರಂಟಿ’ ಜಾರಿಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಧರಣಿ

ಬೆಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2023, 16:22 IST
Last Updated 22 ನವೆಂಬರ್ 2023, 16:22 IST
ಬೇಡಿಕೆ ಈಡೇರಿಸಲು ಆಗ್ರಹಿಸಿ, ‘ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸ್ವತಂತ್ರ ಸಂಘಟನೆ’ ಸದಸ್ಯರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಬೃಹತ್‌ ಪ್ರತಿಭಟನೆ ನಡೆಸಿದರು. – ಪ್ರಜಾವಾಣಿ ಚಿತ್ರ/ ರಂಜು ಪಿ.
ಬೇಡಿಕೆ ಈಡೇರಿಸಲು ಆಗ್ರಹಿಸಿ, ‘ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸ್ವತಂತ್ರ ಸಂಘಟನೆ’ ಸದಸ್ಯರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಬೃಹತ್‌ ಪ್ರತಿಭಟನೆ ನಡೆಸಿದರು. – ಪ್ರಜಾವಾಣಿ ಚಿತ್ರ/ ರಂಜು ಪಿ.   

ಬೆಂಗಳೂರು: ಕನಿಷ್ಠ ವೇತನ ನಿಗದಿಯೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘಟನೆಯ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ವಿವಿಧ ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದ ಪ್ರತಿಭಟನಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ಸಮಗ್ರ ಶಿಶು ಅಭಿವೃದ್ಧಿ ಯೋಜನೆ’ ಅಡಿ ದೇಶದಾದ್ಯಂತ ಲಕ್ಷಾಂತರ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ದುಡಿಯುತ್ತಿದ್ದಾರೆ. ರಾಜ್ಯದಲ್ಲೂ 1.32 ಲಕ್ಷ ಮಂದಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಕನಿಷ್ಠ ಸೌಲಭ್ಯ ದೊರೆಯುತ್ತಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ಹೊರಹಾಕಿದರು.

ADVERTISEMENT

ಕಾರ್ಯಕರ್ತೆಯರು, ಸಹಾಯಕಿಯರಿಗೆ ₹21 ಸಾವಿರ ಕನಿಷ್ಠ ವೇತನ ನೀಡಬೇಕು. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಮುಖಂಡರು 6ನೇ ಗ್ಯಾರಂಟಿ ರೂಪದಲ್ಲಿ ಕಾರ್ಯಕರ್ತೆಯರಿಗೆ ₹ 15 ಸಾವಿರ, ಸಹಾಯಕಿಯರಿಗೆ ₹ 10 ಸಾವಿರ ನೀಡುವುದಾಗಿ ಘೋಷಣೆ ಮಾಡಿದ್ದರು. ಅದನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

‘ಎಲ್ಲ ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು. ನಿವೃತ್ತರಾದ ಸಿಬ್ಬಂದಿಗೆ ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಗ್ರಾಚ್ಯುಟಿ ನೀಡಬೇಕು’ ಎಂದು ಸಂಘಟನೆ ರಾಜ್ಯ ಅಧ್ಯಕ್ಷೆ ಬಿ.ಪ್ರೇಮಾ ಆಗ್ರಹಿಸಿದರು.

‘ದಿನದಿಂದ ದಿನಕ್ಕೆ ಕೆಲಸದ ಒತ್ತಡ ಹೆಚ್ಚುತ್ತಿದೆ. ಗೌರವಧನದ ಹೆಸರಿನಲ್ಲಿ ಕೆಲಸಕ್ಕೆ ಸೇರ್ಪಡೆ ಮಾಡಿಕೊಂಡು ಶೋಷಣೆ ಮಾಡಲಾಗುತ್ತಿದೆ. ನಮಗೆ ಸಾಮಾಜಿಕ ಭದ್ರತೆ ಇಲ್ಲ. ಬದುಕು ಕಟ್ಟಿಕೊಳ್ಳಲು ಸರ್ಕಾರ ನೆರವು ನೀಡಬೇಕು’ ಎಂದು ಕೋರಿದರು.

ಪ್ರತಿಭಟನೆಯಲ್ಲಿ ಗೌರವಾಧ್ಯಕ್ಷೆ ಬಿ.ಆರ್‌.ಜಯಲಕ್ಷ್ಮಿ, ಕಾರ್ಯದರ್ಶಿ ಉಮಾವಾಣಿ, ಖಜಾಂಚಿ ವಿಶಾಲಾಕ್ಷಿ, ಉಪಾಧ್ಯಕ್ಷೆ ಬಿ.ಎಸ್‌.ನಿರ್ಮಲಾ, ಸಹ ಕಾರ್ಯದರ್ಶಿ ಶಾಂತಾ, ಸಲಹೆಗಾರರಾದ ಭಾರತಿ ಇದ್ದರು.

ಮನವಿ ಸಲ್ಲಿಕೆ:
ಇದಾದ ನಂತರ ಪ್ರತಿಭಟನಕಾರರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಗೃಹಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

‘ಇಲಾಖಾ ಹಂತದಲ್ಲಿರುವ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು. ಉಳಿದ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.