ADVERTISEMENT

ಕೆಪಿಎಸ್‌ಸಿ ಕಚೇರಿ ಎದುರು ಪ್ರತಿಭಟನೆ: ಕರವೇ 13 ಸದಸ್ಯರ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2025, 15:28 IST
Last Updated 26 ಫೆಬ್ರುವರಿ 2025, 15:28 IST
<div class="paragraphs"><p>ಎಫ್‌ಐಆರ್‌</p></div>

ಎಫ್‌ಐಆರ್‌

   

ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗದ(ಕೆ.ಪಿ.ಎಸ್‌.ಸಿ) ಕಚೇರಿ ಎದುರು ಅಕ್ರಮವಾಗಿ ಗುಂಪುಗೂಡಿ, ರಸ್ತೆಯಲ್ಲಿ ಅಡ್ಡಲಾಗಿ ನಿಂತು ಸಂಚಾರಕ್ಕೆ ಅಡ್ಡಿಪಡಿಸಿದ್ದ ಆರೋಪದ ಮೇರೆಗೆ ಕರ್ನಾಟಕ ರಕ್ಷಣಾ ವೇದಿಕೆಯ(ಕರವೇ–ನಾರಾಯಣಗೌಡ ಬಣ) 13 ಸದಸ್ಯರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕರವೇಯ ಶಿವಕುಮಾರ್‌, ಗಂಗಾಧರ್, ಸಣ್ಣವೀರಪ್ಪ, ಧರ್ಮರಾಜೇಗೌಡ, ಅಂಜಿನಪ್ಪ, ಮಹೇಶ್‌, ಗಾಯತ್ರಿ, ಲತಾ, ಸುಕನ್ಯಾ, ನಳಿನಾ, ಸುಜಾತಾ, ಪವನ್‌, ಅರ್ಜುನ್‌ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ವಿಧಾನಸೌಧ ಠಾಣೆಯ ಇನ್‌ಸ್ಪೆಕ್ಟರ್‌ ಎಸ್‌.ಪಿ.ಕುಮಾರಸ್ವಾಮಿ ನೀಡಿದ ದೂರು ಆಧರಿಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ನಡೆಸಿದ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ’ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ನಾರಾಯಣಗೌಡ, ‘ಆಕ್ಸಾ’ ಸಂಘಟನೆಯ ಅಧ್ಯಕ್ಷ ಕಾಂತಕುಮಾರ್ ಅವರು ಕೆಪಿಎಸ್‌ಸಿ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ್ದರು. ಅಲ್ಲದೇ ಕೆಪಿಎಸ್‌ಸಿ ಕಚೇರಿಯ ಮುತ್ತಿಗೆಗೂ ಕರೆ ನೀಡಿದ್ದರು. ಅದರಂತೆ ಫೆಬ್ರುವರಿ 23ರಂದು ಪ್ರತಿಭಟನೆ ನಡೆದಿತ್ತು. ಆ ಸಂದರ್ಭದಲ್ಲಿ ರಸ್ತೆ ಸಂಚಾರಕ್ಕೆ ಅಡ್ಡಿ ಆಗಿತ್ತು’ ಎಂಬ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಹೈಕೋರ್ಟ್‌ ಆದೇಶದಂತೆ ಯಾವುದೇ ಮುಷ್ಕರ, ಧರಣಿಗೆ ಅವಕಾಶ ಇಲ್ಲ. ವಿಧಾನಸೌಧ ಠಾಣಾ ವ್ಯಾಪ್ತಿಯಲ್ಲಿ ಮುಷ್ಕರಕ್ಕೆ ಅವಕಾಶ ಇಲ್ಲ ಎಂಬುದಾಗಿ ನಾರಾಯಣಗೌಡ ಹಾಗೂ ಕಾಂತಕುಮಾರ್ ಅವರಿಗೆ ವಾಟ್ಸ್‌ಆ್ಯಪ್‌ ಮೂಲಕ ಫೆಬ್ರುವರಿ 23ರಂದು ನೋಟಿಸ್ ನೀಡಲಾಗಿತ್ತು. ಆದರೂ, ಪ್ರತಿಭಟನೆ ನಡೆಸಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಮುಂಜಾಗ್ರತಾ ಕ್ರಮವಾಗಿ ಫೆ. 24ರಂದು ಕೆಪಿಎಸ್‌ಸಿ ಕಚೇರಿ ಎದುರು ಬಂದೋಬಸ್ತ್‌ ಕಲ್ಪಿಸಲಾಗಿತ್ತು. ಬೆಳಿಗ್ಗೆ 11.15ರ ಸುಮಾರಿಗೆ ಗುಂಪುಗೂಡಿ ಬಂದ ಕೆಲವರು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದರು. ಅವರನ್ನು ವಶಕ್ಕೆ ಪಡೆದು ಅಂದೇ ಸಂಜೆ ಬಿಡುಗಡೆ ಮಾಡಲಾಗಿತ್ತು. ಸದ್ಯ 13 ಮಂದಿಯ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದ್ದು, ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.