ADVERTISEMENT

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 21:31 IST
Last Updated 6 ಆಗಸ್ಟ್ 2021, 21:31 IST
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಸದಸ್ಯರು ಆನ್‌ಲೈನ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಸದಸ್ಯರು ಆನ್‌ಲೈನ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.   

ಬೆಂಗಳೂರು: ‘ನೈರುತ್ಯ ದೆಹಲಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು’ ಎಂದು ಆಗ್ರಹಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ (ಎಐಎಂಎಸ್‌ಎಸ್‌) ಬೆಂಗಳೂರು ಜಿಲ್ಲಾ ಸಮಿತಿ ಸದಸ್ಯರು ‘ಪ್ರತಿಭಟನಾ ದಿನ’ವನ್ನು ಶುಕ್ರವಾರ ಹಮ್ಮಿಕೊಂಡಿದ್ದರು.

‘ಹೆಣ್ಣು ಮಗುವನ್ನು ಉಳಿಸಿ’ ಘೋಷವಾಕ್ಯದಡಿ ಸಂಘಟನೆಯ ಸದಸ್ಯರು ಭಿತ್ತಿಪತ್ರಗಳನ್ನು ಹಿಡಿದು ಆನ್‌ಲೈನ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

‘ನೀರು ತರಲು ಹೋಗಿದ್ದ ಒಂಬತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿದೆ. ಇದನ್ನು ಮುಚ್ಚಿ ಹಾಕಲು ತರಾತುರಿಯಲ್ಲಿ ಅಂತ್ಯಕ್ರಿಯೆ ನಡೆದಿದೆ. ಈ ಪ್ರಕರಣವನ್ನೇ ಮುಚ್ಚಿ ಹಾಕುವ ಹುನ್ನಾರ ನಡೆದಿದೆ’ ಎಂದು ಸಂಘಟನೆಯ ಕಾರ್ಯದರ್ಶಿ ಎ.ಶಾಂತಾ ಆರೋಪಿಸಿದರು.

ADVERTISEMENT

‘ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದಿಂದ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಅತ್ಯಾಚಾರಿಗಳು ನಿರ್ಭೀತಿಯಿಂದ ಓಡಾಡುವಂತಾಗಿದೆ. ಹೆಣ್ಣು ಮಗಳನ್ನು ಭೋಗದ ವಸ್ತುವನ್ನಾಗಿ ನೋಡುವ ಪುರುಷ ಪ್ರಧಾನ ವ್ಯವಸ್ಥೆ ಇನ್ನೂ ಜೀವಂತವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದಿರುವ ಆರೋಪಿಗಳಿಗೆ ಕೂಡಲೇ ಶಿಕ್ಷೆ ನೀಡಬೇಕು. ಜಸ್ಟೀಸ್ ವರ್ಮಾ ಸಮಿತಿಯ ಶಿಫಾರಸುಗಳನ್ನು ಜಾರಿ ಮಾಡಬೇಕು. ಅತ್ಯಾಚಾರಕ್ಕೆ ಪ್ರೇರೇಪಿಸುವ ಅಶ್ಲೀಲ ಸಿನಿಮಾಗಳು ಹಾಗೂ ವೆಬ್‌ಸೈಟ್‌ಗಳನ್ನು ನಿಷೇಧಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.