ADVERTISEMENT

ಬೆಂಗಳೂರು | ಅನುಮತಿ ಇಲ್ಲದೆ ಪ್ರತಿಭಟನೆ: ಕ್ರಮಕ್ಕೆ ಒತ್ತಾಯ

ನಗರ ಪೊಲೀಸ್‌ ಕಮಿಷನರ್‌ ಸೀಮಂತ್‌ ಕುಮಾರ್‌ ಸಿಂಗ್‌ಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 15:55 IST
Last Updated 30 ಜೂನ್ 2025, 15:55 IST
ಬಿಜೆಪಿ ನಿಯೋಗವು ನಗರ ಪೊಲೀಸ್ ಕಮಿಷನರ್‌ ಸೀಮಂತ್‌ ಕುಮಾರ್ ಸಿಂಗ್‌ ಅವರಿಗೆ ಮನವಿ ಸಲ್ಲಿಸಿತು 
ಬಿಜೆಪಿ ನಿಯೋಗವು ನಗರ ಪೊಲೀಸ್ ಕಮಿಷನರ್‌ ಸೀಮಂತ್‌ ಕುಮಾರ್ ಸಿಂಗ್‌ ಅವರಿಗೆ ಮನವಿ ಸಲ್ಲಿಸಿತು    

ಬೆಂಗಳೂರು: ಅನುಮತಿ ಪಡೆಯದೆ ಬಿಜೆಪಿ ಕಚೇರಿ ಎದುರು ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಕ್ರಮಕ್ಕೆ ಆಗ್ರಹಿಸಿ ನಗರ ಪೊಲೀಸ್ ಕಮಿಷನರ್‌ ಸೀಮಂತ್‌ ಕುಮಾರ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ನಾರಾಯಣ ಸ್ವಾಮಿ, ‘ಜೂನ್‌ 28ರಂದು ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿ ಹೊರಬರುತ್ತಿರುವಾಗ ಕಾಂಗ್ರೆಸ್‌ನ ಸುಮಾರು 13 ಕಾರ್ಯಕರ್ತರು ಬಂದು ಕಚೇರಿ ಎದುರು ಪ್ರತಿಭಟನೆ ಮಾಡಿದ್ದಾರೆ. ನಮ್ಮಲ್ಲೂ 200–300 ಕಾರ್ಯಕರ್ತರು ಅಲ್ಲೇ ನಿಂತಿದ್ದರು. ಮನಸ್ಸು ಮಾಡಿದ್ದರೆ ಅಲ್ಲೇ ಅವರನ್ನು ತಡೆಯಬಹುದಿತ್ತು’ ಎಂದು ಎಚ್ಚರಿಸಿದರು. 

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರ ಹಕ್ಕು ಗೌರವಿಸುತ್ತೇವೆ. ಆದರೆ, ಅನುಮತಿ ಇಲ್ಲದೆ, ಪೊಲೀಸರಿಗೆ ಗೊತ್ತೇ ಇಲ್ಲದಂತೆ ಪ್ರತಿಭಟಿಸಿದರೆ ಅದು ಗೂಂಡಾವರ್ತನೆ ಆಗಲಿದೆ. ಬಂಧಿಸಿ ಕರೆದೊಯ್ದ 15 ನಿಮಿಷಕ್ಕೇ ಮತ್ತೆ ಕೆಲವರು ಸ್ಥಳಕ್ಕೆ ಬಂದು ಪ್ರತಿಭಟನೆ ನಡೆಸಿದ್ದಾರೆ. ಯಾವುದೇ ಅನುಮತಿ ಪಡೆಯದೇ ಒಂದು ತಿಂಗಳಲ್ಲಿ ನಾಲ್ಕು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ಅವರ ಮೇಲೆ ಯಾವುದೇ ಎಫ್‍ಐಆರ್ ದಾಖಲಿಸಿಲ್ಲ’ ಎಂದು ದೂರಿದರು.

ADVERTISEMENT

‘ನಾವು ಪೋಸ್ಟರ್ ಅಂಟಿಸಿದ್ದಕ್ಕೆ ಕೇಸ್ ಹಾಕಿದ್ದಾರೆ. ಈಗ ಕೋರ್ಟಿಗೆ ಅಲೆದಾಡುತ್ತಿದ್ದೇವೆ. ನ್ಯಾಯ ಎಲ್ಲರಿಗೂ ಒಂದೇ ಇರಬೇಕು. ಕಾಂಗ್ರೆಸ್ಸಿನವರು ಅಧಿಕಾರದಲ್ಲಿ ಇದ್ದಾರೆ ಎಂಬ ಒಂದೇ ಕಾರಣಕ್ಕೆ ಎಫ್‌ಐಆರ್ ಮಾಡಿಲ್ಲ. ಬಿಜೆಪಿ ಅಧಿಕಾರದಲ್ಲಿ ಇಲ್ಲ ಎಂಬ ಕಾರಣಕ್ಕೆ ನಮ್ಮನ್ನು ಹದ್ದುಬಸ್ತಿನಲ್ಲಿ ಇಡುವುದು ಸರಿಯಲ್ಲ. ಈ ವಿಷಯವನ್ನು ನಗರ ಪೊಲೀಸ್‌ ಕಮಿಷನರ್ ಗಮನಕ್ಕೆ ತರಲಾಗಿದೆ. ಇದನ್ನು ತೀಕ್ಷ್ಣವಾಗಿ ಪರಿಗಣಿಸುವುದಾಗಿ ಹೇಳಿದ್ದಾರೆ. ಮುಂದುವರಿದರೆ ಬಿಜೆಪಿ ಸುಮ್ಮನೇ ಇರುವುದಿಲ್ಲ’ ಎಂದು ಎಚ್ಚರಿಸಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಮಾತನಾಡಿ, ‘ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಮೊಳೆ ಹೊಡೆದಂತೆ ಶಾಶ್ವತವಾಗಿ ಇರುತ್ತದೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇದ್ದರೆ ಅದು ತಪ್ಪು’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಕೇಶವ್ ಪ್ರಸಾದ್, ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಶಾಸಕ ಸಿಮೆಂಟ್ ಮಂಜು, ಮಾಜಿ ಸಂಸದ ಎಸ್. ಮುನಿಸ್ವಾಮಿ, ಮಾಜಿ ಶಾಸಕರಾದ ವೈ.ಸಂಪಂಗಿ, ವೈ. ರಾಮಕ್ಕ ಮತ್ತು ಎಸ್. ಬಾಲರಾಜು, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಸಪ್ತಗಿರಿ ಗೌಡ, ಬಿಜೆಪಿ ಮುಖಂಡ ಗೌತಮ್ ಜೈನ್, ರಾಜ್ಯ ವಕ್ತಾರ ಪ್ರಕಾಶ್ ಶೇಷರಾಘವಾಚಾರ್ ಮನವಿ ಸಲ್ಲಿಸುವ ವೇಳೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.