ADVERTISEMENT

ಪಿಆರ್‌ಆರ್‌: ವೆಬ್‌ಸೈಟ್‌ನಲ್ಲಿ ಡಿಪಿಆರ್‌ ಪ್ರಕಟಿಸಲು ಒತ್ತಾಯ

ರಸ್ತೆ ಕಾಮಗಾರಿಗೆ ಮರಗಳ ಬಲಿ: ಸೆ. 3ರಂದು ವೆಬಿನಾರ್‌ನಲ್ಲಿ ಸಾರ್ವಜನಿಕ ಸಭೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2020, 20:37 IST
Last Updated 29 ಆಗಸ್ಟ್ 2020, 20:37 IST
ಪೆರಿಫೆರಲ್‌ ವರ್ತುಲ ರಸ್ತೆ (ಸಾಂದರ್ಭಿಕ ಚಿತ್ರ)
ಪೆರಿಫೆರಲ್‌ ವರ್ತುಲ ರಸ್ತೆ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ಯೋಜನೆಗೆ ಸಂಬಂಧಿ ಸಿದಂತೆ ಜನರಿಂದ ಸಲಹೆ–ಸೂಚನೆ ಪಡೆಯಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಸೆ.3ರಂದು ಮಧ್ಯಾಹ್ನ 12ಕ್ಕೆ ವೆಬಿನಾರ್‌ ಮೂಲಕ ಸಾರ್ವಜನಿಕ ಸಭೆ ಏರ್ಪಡಿಸಿದೆ. ಆದರೆ, ಸಭೆಗೂ ಮುನ್ನ, ಪಿಆರ್‌ಆರ್‌ನ ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್‌) ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಪರಿಸರ ಕಾರ್ಯಕರ್ತರು ಬಿಡಿಎಯನ್ನು ಒತ್ತಾಯಿಸಿದ್ದಾರೆ.

‘ಈ ಯೋಜನೆಗೆ ₹15 ಸಾವಿರ ಕೋಟಿಗೂ ಅಧಿಕ ವೆಚ್ಚವಾಗುತ್ತದೆ. ಅಲ್ಲದೆ, 33 ಸಾವಿರ ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಪರಿಸರದ ಮೇಲಿನ ಪರಿಣಾಮದ ವರದಿ (ಇಐಎ) ಹೇಳುತ್ತದೆ. ಇಂಥ ಯೋಜನೆಯ ಡಿಪಿಆರ್‌ ಈವರೆಗೆ ಸಾರ್ವಜನಿಕವಾಗಿ ಲಭ್ಯವಿಲ್ಲ. ಬಿಡಿಎ ವೆಬ್‌ಸೈಟ್‌ನಲ್ಲಿಯೂ ಇದನ್ನು ಪ್ರಕಟಿಸಿಲ್ಲ. ಯೋಜನೆಯ ನಿಖರ ಮಾಹಿತಿಯೇ ಇಲ್ಲದೆ ಸಾರ್ವ ಜನಿಕ ಸಭೆಯಲ್ಲಿ ಭಾಗವಹಿಸಿ ಏನು ಪ್ರಯೋಜನ’ ಎಂದು ‘ಸಿಟಿಜನ್ಸ್‌‌ ಫಾರ್ ಬೆಂಗಳೂರು’ ಸಂಸ್ಥೆಯ ಸಹ ಸ್ಥಾಪಕಿ ತಾರಾ ಕೃಷ್ಣಮೂರ್ತಿ ಪ್ರಶ್ನಿಸಿದ್ದಾರೆ.

‘2015ರಲ್ಲಿ ಈ ಕುರಿತು ಡಿಪಿಆರ್ ಸಿದ್ಧಪಡಿಸಲಾಗಿದೆ. ವರದಿಯ ಇಐಎ ಸಮರ್ಪಕವಾಗಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿತ್ತು. ಅದನ್ನು ಬದಲಾಯಿಸಲು ಕೂಡ ಸೂಚಿಸಿತ್ತು. ಆದರೆ, ಸಾರ್ವಜನಿಕರಿಗೆ ಈಗಲೂ 2015ರ ಡಿಪಿಆರ್‌ ಲಭ್ಯವಾಗಿದೆಯೇ ವಿನಾ ಪರಿಷ್ಕೃತ ವರದಿ ಸಿಕ್ಕಿಲ್ಲ. ಇಐಎ ಬದಲಾದಂತೆ ಡಿಪಿಆರ್‌ ಕೂಡ ಬದಲಾಗಲೇಬೇಕಾಗುತ್ತದೆ. ಆದರೆ, ಬಿಡಿಎ ಪರಿಷ್ಕೃತ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸುತ್ತಿಲ್ಲ ಏಕೆ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಹೊಸ ಪ್ರಕ್ರಿಯೆಗೆ ತಕ್ಕಂತೆ ವರದಿ‍ಪರಿಷ್ಕರಿಸಿಲ್ಲ. ಪರಿಷ್ಕರಿಸಿದ್ದರೂ ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ಇಲ್ಲ. ಬದಲಾದ ಇಐಎಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಅನುಮೋದನೆ ನೀಡಿದೆ. ಡಿಪಿಆರ್‌ ನೋಡದೆ, ಇಐಎಗೆ ಮಂಡಳಿಯು ಅನುಮೋದನೆ ನೀಡಿದ್ದು ಹೇಗೆ’ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.

‘ಈ ಕುರಿತು ಆ.18ರಂದು ನಡೆದ ಸಭೆಯಲ್ಲಿ 60 ಜನ ಭಾಗವಹಿಸಿದ್ದರು. ಈ ಪೈಕಿ, ಮೂವರು ಮಾತ್ರ ಯೋಜನೆ ಪರವಾಗಿದ್ದರೆ, ಉಳಿದವರೆಲ್ಲರೂ ವಿರೋಧ ವ್ಯಕ್ತಪಡಿಸಿದ್ದರು’ ಎಂದು ನೆನಪಿಸಿದರು.

‘ಸಾರ್ವಜನಿಕ ಸಭೆ ಎಂದು ಹೇಳುತ್ತಾರೆ. ಆದರೆ, ಒಬ್ಬರಿಗೆ ಒಂದೇ ನಿಮಿಷ ಸಮಯ ನೀಡುತ್ತಾರೆ. ನಮ್ಮ ಆಕ್ಷೇಪಣೆ ಅಥವಾ ಸಲಹೆಗೆ ಸಂಬಂಧಿಸಿದಂತೆ ಪ್ರಾಧಿಕಾರವು ಏನು ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸುವುದಿಲ್ಲ. ಸ್ಪಷ್ಟ ಭರವಸೆಯನ್ನೂ ಅಧಿಕಾರಿಗಳು ನೀಡುವುದಿಲ್ಲ’ ಎಂದು ಅವರು ದೂರಿದರು.

ಸೆಪ್ಟೆಂಬರ್ 3ರಂದು ನಡೆಯಲಿರುವ ಸಭೆಯ ಮೀಟಿಂಗ್‌ ಐಡಿ– 850 1729 9310, ಪಾಸ್‌ಕೋಡ್‌– bpe2020.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.