ADVERTISEMENT

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿಗೆ ಆಗ್ರಹಿಸಿ ಅಹೋರಾತ್ರಿ ಧರಣಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 4:56 IST
Last Updated 3 ಜನವರಿ 2023, 4:56 IST
ಸ್ವಾತಂತ್ರ್ಯ ಉದ್ಯಾನದಲ್ಲಿ ಅಹೋರಾತ್ರಿ ಧರಣಿ ಮುಂದುವರಿದಿರುವುದು
ಸ್ವಾತಂತ್ರ್ಯ ಉದ್ಯಾನದಲ್ಲಿ ಅಹೋರಾತ್ರಿ ಧರಣಿ ಮುಂದುವರಿದಿರುವುದು   

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಭೂ ಪರಭಾರೆ ನಿಷೇಧ ಕಾಯ್ದೆಯ(ಪಿಟಿಸಿಎಲ್‌) ಸಮಗ್ರ ತಿದ್ದುಪಡಿಗೆ ಆಗ್ರಹಿಸಿ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಅಹೋರಾತ್ರಿ ಧರಣಿ ಆರಂಭಿಸಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದವರ ಭೂಮಿ ಬಲಾಢ್ಯರ ಪಾಲಾಗುವುದನ್ನು ತಪ್ಪಿಸಲು ಡಿ. ದೇವರಾಜ ಅರಸು ಮತ್ತು ಬಿ. ಬಸವಲಿಂಗಪ್ಪ ಅವರ ದಲಿತ ಪರ ಕಾಳಜಿಯಿಂದಾಗಿ ಈ ಕಾಯ್ದೆ 1978ರಲ್ಲಿ ಜಾರಿಗೆ ಬಂದಿತ್ತು. ಈ ಕಾಯ್ದೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ನ್ಯಾಯಾಲಯಗಳು ತಿರಸ್ಕರಿಸುತ್ತಿವೆ. ನ್ಯಾಯಾಲಯಗಳು ಅದೇ ರೀತಿ ತೀರ್ಪುಗಳನ್ನು ನೀಡುತ್ತಿವೆ. ಇದರಿಂದಾಗಿ ದಲಿತರು ಭೂಮಿ ವಂಚಿತರಾಗುತ್ತಿದ್ದಾರೆ ಎಂದು ಪ್ರತಿಭಟನಕಾರರು ಹೇಳಿದರು.

‘ವಿಧಾನ ಮಂಡಲ ಎಸ್‌ಸಿಎಸ್‌ಟಿ ಕಲ್ಯಾಣ ಸಮಿತಿ 2021ರ ಸೆಪ್ಟೆಂಬರ್‌ನಲ್ಲೇ ವರದಿ ಸಲ್ಲಿಸಿದೆ. ಪಿಟಿಸಿಎಲ್ ಕಾಯ್ದೆಯಡಿ ಭೂಮಿ ಮರು ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಲು ಕಾಲಮಿತಿ ಅನ್ವಯಿಸದಂತೆ ಕಾಯ್ದೆಗೆ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ವರದಿಯಲ್ಲಿ ಶಿಫಾರಸು ಮಾಡಿದೆ. ಆದರೂ, ಕಂದಾಯ ಸಚಿವ ಆರ್. ಅಶೋಕ್ ಅವರು ತಿದ್ದುಪಡಿಗೆ ಅಡ್ಡಿಪಡಿಸುತ್ತಿದ್ದಾರೆ. ಕೆಲವು ಮಂತ್ರಿಗಳು, ಶಾಸಕರು ಪರಿಶಿಷ್ಟರ ಭೂಮಿಯನ್ನು ಬೇನಾಮಿ ಹೆಸರಿನಲ್ಲಿ ಖರೀದಿ ಮಾಡಿರುವುದರಿಂದ ಈ ಕಾಯ್ದೆ ಅನುಷ್ಠಾನಕ್ಕೆ ಅಡ್ಡಿಪಡಿಸುತ್ತಿದ್ದಾರೆ’ ಎಂದು ದೂರಿದರು.‌

ADVERTISEMENT

ರಾಜ್ಯ ಸರ್ಕಾರ ಕೇವಲ ಭರವಸೆಯಲ್ಲೇ ಕಾಲ ತಳ್ಳುತ್ತಿದೆ. ಬೆಳಗಾವಿ ಅಧಿವೇಶನದಲ್ಲೂ ಪಿಟಿಸಿಎಲ್ ಕಾಯ್ದೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಕಾಯ್ದೆ ತಿದ್ದುಪಡಿಯ ನಿರ್ಧಾರ ಕೈಗೊಳ್ಳುವ ತನಕ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್, ವಕೀಲ ದಾಸಪ್ಪ, ಆದಿ ದ್ರಾವಿಡ ಸಂಘಟಕ ಅಭಿಗೌಡ, ರಾಮ್‌ಬಾಬು, ಜಿ.ಮಂಗಳ ವೆಂಕಟೇಶ್, ಪಿಟಿಸಿಎಲ್ ಮಂಜುನಾಥ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.