ADVERTISEMENT

ಅವಧಿ ಮೀರಿ ವ್ಯವಹಾರ: ಪಬ್‌ ಮೇಲೆ ಸಿಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 16:04 IST
Last Updated 3 ಜುಲೈ 2022, 16:04 IST

ಬೆಂಗಳೂರು: ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿರುವ ಪಬ್‌ವೊಂದರ ಮೇಲೆ ಸಿಸಿಬಿ ಪೊಲೀಸರು ಭಾನುವಾರ ನಸುಕಿನಲ್ಲಿ ದಾಳಿ ಮಾಡಿದ್ದು, 7 ವಿದೇಶಿಯರು ಸೇರಿದಂತೆ ಹಲವರನ್ನು ವಶಕ್ಕೆ ಪಡೆದಿದ್ದಾರೆ.

‘ಕೆಂಗೇರಿಯ ವಿಶ್ವೇಶ್ವರಯ್ಯ ಬಡಾವಣೆ ಬಳಿ ಇರುವ ‘ಬಿ’ ಹೆಸರಿನ ಪಬ್‌, ಭಾನುವಾರ ನಸುಕಿನ 3.30ರವರೆಗೂ ತೆರೆದಿತ್ತು. ಅವಧಿ ಮೀರಿ ವ್ಯವಹಾರ ನಡೆಸುತ್ತಿದ್ದ ಬಗ್ಗೆ ಬಂದ ಮಾಹಿತಿ ಆಧರಿಸಿ ದಾಳಿ ಮಾಡಲಾಯಿತು’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಪಬ್‌ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. 45 ಯುವಕರು, 18 ಯುವತಿಯರು ಹಾಗೂ 7 ವಿದೇಶಿ ಪ್ರಜೆಗಳು ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿ, ವಶಕ್ಕೆ ಪಡೆಯಲಾಯಿತು. ಪಬ್‌ನ ಕೆಲಸಗಾರರನ್ನೂ ಬಂಧಿಸಲಾಯಿತು. ಎಲ್ಲರ ವಿರುದ್ಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಗಿದೆ’ ಎಂದೂ ತಿಳಿಸಿವೆ.

ADVERTISEMENT

‘ಪಾರ್ಟಿಯಲ್ಲಿ ಡ್ರಗ್ಸ್ ಪೂರೈಕೆಯಾದ ಬಗ್ಗೆ ಮಾಹಿತಿ ಇದೆ. ಹೀಗಾಗಿ, ಕೆಲವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರ ವರದಿ ಬಂದ ನಂತರ, ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.